ADVERTISEMENT

ಪೂರ್ವ ಪ್ರಾಥಮಿಕ ತರಗತಿಗೆ ವಿರೋಧಿಸಿ 30ರಂದು ವಿಧಾನಸೌಧ ಚಲೋ

​ಪ್ರಜಾವಾಣಿ ವಾರ್ತೆ
Published 29 ಮೇ 2019, 13:18 IST
Last Updated 29 ಮೇ 2019, 13:18 IST
ಧರ್ಮೇಶ್‌
ಧರ್ಮೇಶ್‌   

ಹಾಸನ: ಸರ್ಕಾರಿ ಶಾಲೆಯಲ್ಲಿ ಪೂರ್ವ ಪ‍್ರಾಥಮಿಕ ತರಗತಿ (ಎಲ್‌ಕೆಜಿ, ಯುಕೆಜಿ) ತೆರೆಯಲು ಆದೇಶಿಸಿರುವ ಸರ್ಕಾರದ ನಿರ್ಧಾರ ಖಂಡಿಸಿ ಮೇ 30ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್‌ ಹೇಳಿದರು.

ರಾಜ್ಯಾದ್ಯಂತ 276 ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಪ್ರಸಕ್ತ ಸಾಲಿನಿಂದ ಆರಂಭಿಸಿದ್ದು, ಎಲ್‌ಕೆಜಿ, ಯುಕೆಜಿ ತರಗತಿ ನಡೆಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ₹ 4,200 ಕೋಟಿ ಹೆಚ್ಚುವರಿ ಖರ್ಚನ್ನು ಸರ್ಕಾರ ನಿಗದಿ ಪಡಿಸಿದೆ. ಆದರೆ ಇದರಿಂದ ಅಂಗನವಾಡಿಗಳ ಮೇಲಾಗುವ ದುಷ್ಪರಿಣಾಮದ ಬಗ್ಗೆ ಯೋಚನೆ ಮಾಡಿಲ್ಲ. ಜಿಲ್ಲೆಯ ಮೂರು ಸಾವಿರ ಜನರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸರ್ಕಾರಿ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿ ಆರಂಭಿಸಿದರೆ ಅಂಗನವಾಡಿಗೆ ಬರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ. ಇದರಿಂದ ಅನಿವಾರ್ಯವಾಗಿ ಅಂಗನವಾಡಿ ಬಾಗಿಲು ಮುಚ್ಚಬೇಕಾಗುತ್ತದೆ. ಸರ್ಕಾರ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರ ಉದ್ಯೋಗ ಕಸಿದುಕೊಳ್ಳುವ ಬದಲು ಅಲ್ಲಿಯೇ ಪೂರ್ವ ಪ್ರಾಥಮಿಕ ತರಗತಿ ಪ್ರಾರಂಭಿಸಿದರೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.

ADVERTISEMENT

ಅಂಗನವಾಡಿಗಳನ್ನು ಶಾಶ್ವತವಾಗಿ ಮುಚ್ಚಲು ಉದ್ದೇಶಿಸಿರುವ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಇಂದಿರಮ್ಮ, ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುಷ್ಪಾ, ಉಪಾಧ್ಯಕ್ಷರಾದ ಶಾರದಾ, ವೀಣಾ, ಸುಮಿತ್ತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.