ADVERTISEMENT

ವಿವೇಕಾನಂದರ ಜೀವನ ಮೌಲ್ಯ ಅನನ್ಯ: ಲೋಕೇಶ್ ದಾಸ್

​ಪ್ರಜಾವಾಣಿ ವಾರ್ತೆ
Published 13 ಜನವರಿ 2025, 11:15 IST
Last Updated 13 ಜನವರಿ 2025, 11:15 IST
ಚನ್ನರಾಯಪಟ್ಟಣದಲ್ಲಿ ಭಾನುವಾರ ಏರ್ಪಡಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಕಲಾವಿದ ಲೋಕೇಶ್‍ ದಾಸ್, ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ ಪೂಜೆ ಸಲ್ಲಿಸಿದರು. ಬಿ.ಎನ್. ಶಿವರಾಂ, ಎ.ಈ. ಚಂದ್ರಶೇಖರ್, ಶಿವಮ್ಮ ಭಾಗವಹಿಸಿದ್ದರು
ಚನ್ನರಾಯಪಟ್ಟಣದಲ್ಲಿ ಭಾನುವಾರ ಏರ್ಪಡಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಕಲಾವಿದ ಲೋಕೇಶ್‍ ದಾಸ್, ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ ಪೂಜೆ ಸಲ್ಲಿಸಿದರು. ಬಿ.ಎನ್. ಶಿವರಾಂ, ಎ.ಈ. ಚಂದ್ರಶೇಖರ್, ಶಿವಮ್ಮ ಭಾಗವಹಿಸಿದ್ದರು   

ಚನ್ನರಾಯಪಟ್ಟಣ: ‘ಸ್ವಾಮಿ ವಿವೇಕಾನಂದ ಅವರ ಜೀವನ ಮೌಲ್ಯ ಅನನ್ಯವಾದುದು’ ಎಂದು ಕಲಾವಿದ ಲೋಕೇಶ್ ದಾಸ್ ಹೇಳಿದರು.

ಪಟ್ಟಣದಲ್ಲಿ ಸ್ವಾಮಿ ವಿವೇಕಾನಂದ ಅವರ ಜನ್ಮದಿನಾಚರಣೆ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಚಿಕ್ಕ ವಯಸ್ಸಿನಿಂದಲೇ ಅಧ್ಯಾತ್ಮದತ್ತ ಅವರಿಗೆ ಒಲವು ಇತ್ತು. ಅವರ ಆದರ್ಶವನ್ನು ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ. ದೇಶಕ್ಕಾಗಿ ದುಡಿದು ನಾಡು ಕಟ್ಟಿದರು. ಭಾರತದ ಸನಾತನ ಧರ್ಮದ ಮಹತ್ವವನ್ನು ಜಗತ್ತಿಗೆ ತಿಳಿಸಿಕೊಟ್ಟರು. ಭಾರತದ ಸಪ್ತಋಷಿಗಳಲ್ಲಿ ಇವರು ಒಬ್ಬರು’ ಎಂದು ಬಣ್ಣಿಸಿದರು.

‘ಶಿಕ್ಷಣ ಸಂಸ್ಥೆಗಳು, ಮಠಗಳು ಸಂಸ್ಕಾರ ನೀಡುತ್ತವೆ. ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸುವುದರ ಜತೆ ಸಮಾಜದ ಉದ್ಧಾರಕ್ಕಾಗಿ ಮಾನವೀಯ ಮೌಲ್ಯ ರೂಢಿಸಿಕೊಳ್ಳುವುದು ಮುಖ್ಯವಾದುದು. ಹಣ ಗಳಿಸುವುದು ಮುಖ್ಯವಲ್ಲ. ಸನ್ನಡತೆ, ಸಂಸ್ಕಾರದಿಂದ ಉತ್ತಮ ಬದುಕು ಕಟ್ಟಿಕೊಳ್ಳಬೇಕು. ವಿದ್ಯೆ, ವಿನಯ ಮತ್ತು ಸಜ್ಜನಿಕೆ ಇಲ್ಲದಿದ್ದರೆ ಬದುಕು ಸಾರ್ಥಕವಾಗುವುದಿಲ್ಲ’ ಎಂದು ಹೇಳಿದರು.

ADVERTISEMENT

ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ ಮಾತನಾಡಿ, ‘ಸ್ವಾಮಿ ವಿವೇಕಾನಂದ ಸೇರಿ ದೇಶದ ಮಹಾನ್ ನಾಯಕರ ಚಿಂತನೆಗಳು ದೇಶಕ್ಕೆ ಮಾರ್ಗದರ್ಶನ ನೀಡಿವೆ. ಅವರ ವಿಚಾರಧಾರೆಯನ್ನು ಮೈಗೂಡಿಸಿಕೊಂಡರೆ ಉತ್ತಮ ಬದುಕು ನಮ್ಮದಾಗುತ್ತದೆ’ ಎಂದರು.

ಸಾಹಿತಿ ಬಿ.ಎನ್. ಶಿವರಾಂ ಮಾತನಾಡಿ, ‘ಸ್ವಾಮಿ ವಿವೇಕಾನಂದ ಅವರು ಮೇರು ವ್ಯಕ್ತಿತ್ವ ಹೊಂದಿದ್ದರು. ಸನಾತನ ಧರ್ಮದ ಪ್ರಖರತೆಯನ್ನು ತಿಳಿಸಿಕೊಟ್ಟರು. ಯುವ ಜನಾಂಗವನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಸಂದೇಶ ನೀಡುತ್ತಿದ್ದರು. ಅವರ ಪುಸ್ತಕವನ್ನು ಓದಬೇಕು. ಪ್ರಸ್ತುತ ಭಾರತದಲ್ಲಿ ಮಾನವ ಸಂಪನ್ಮೂಲ ಶಕ್ತಿ ಅಗಾಧವಾಗಿದ್ದು, ದೇಶ ಎಲ್ಲಾ ಕ್ಷೇತ್ರದಲ್ಲಿ ಪ್ರಗತಿ ಪಥದತ್ತ ಸಾಗುತ್ತಿದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎ.ಈ. ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಎಂ.ಕೆ. ಮಂಜೇಗೌಡ, ಕಾಂಗ್ರೆಸ್ ಯುವ ಮುಖಂಡ ಸಿ.ಎಸ್. ಯುವರಾಜ್, ಬಿದರೆ ಪುಟ್ಟರಾಜು, ರಾಮಚಂದ್ರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.