ಬೇಲೂರು: ತಾಲ್ಲೂಕಿನ ಬಿಕ್ಕೋಡು ಹೋಬಳಿಯ ಅಂಕಿಹಳ್ಳಿ ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ಚಂದ್ರಮ್ಮ (45) ಕಾಡಾನೆ ದಾಳಿಯಿಂದ ಮೃತಪಟ್ಟಿದ್ದು, ಸ್ಥಳಕ್ಕೆ ಅರಣ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಬರುವಂತೆ ಒತ್ತಾಯಿಸಿ ಗ್ರಾಮಸ್ಥರು ರಸ್ತೆತಡೆ ನಡೆಸಿದರು.
ಗಜೇಂದ್ರಪುರ ಗ್ರಾಮದ ಮಹಿಳೆ ಚಂದ್ರಮ್ಮ ಶುಕ್ರವಾರ ಬೆಳಿಗ್ಗೆ ಡಾ. ಫಿಲಿಪ್ ಸೆರಾವೋ ಅವರ ಕಾಫಿ ತೋಟದ ಕೆಲಸಕ್ಕೆ, ಇತರೆ 12 ಮಹಿಳೆಯರ ಜೊತೆ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಐದು ಕಾಡಾನೆಗಳು ದಾಳಿ ಮಾಡಿವೆ. ಎಲ್ಲರೂ ದಿಕ್ಕಾಪಾಲಾಗಿ ಓಡಿದ್ದು, ಚಂದ್ರಮ್ಮ ಕಾಡಾನೆ ದಾಳಿಗೆ ಸಿಕ್ಕಿದ್ದಾರೆ. ಸೊಂಡಿಲಿನಿಂದ ಎತ್ತಿ ಬಿಸಾಡಿದ ಕಾಡಾನೆ, ಕಾಲಿನಿಂದ ತುಳಿದಿದೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲು ಮುಂದಾದರು. ಈ ವೇಳೆ ಆಕ್ರೋಶಗೊಂಡ ಗ್ರಾಮಸ್ಥರು, ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಘೋಷಣೆ ಕೂಗಿದರು.
ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಎಸ್ಪಿ ಮೊಹಮ್ಮದ್ ಸುಜೀತಾ, ಸಿಸಿಎಫ್ ಏಡುಕೊಂಡಲು, ಡಿಎಫ್‌ಒ ಸೌರಭ್‌ಕುಮಾರ್, ತಹಶೀಲ್ದಾರ್ ಎಂ.ಮಮತಾ ಸ್ಥಳಕ್ಕೆ ಭೇಟಿ ನೀಡಿದರು. ‘ಆನೆಗಳನ್ನು ನಿಯಂತ್ರಣ ಮಾಡಲು ನಿಮಗೆ ಆಗದಿದ್ದಲ್ಲಿ ನಮಗೆ ಅನುಮತಿ ಕೊಡಿ. ನಾವು ನಿಯಂತ್ರಣ ಮಾಡುತ್ತೇವೆ. ಕಾಡಾನೆ ದಾಳಿಯಿಂದ ಅಮಾಯಕರು ಸಾವನ್ನಪ್ಪುತ್ತಿದ್ದಾರೆ. ಕಳೆದ ಐದು ತಿಂಗಳು ಆರು ಮಂದಿ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ. ಅರಣ್ಯ ಸಚಿವರು ಕೇವಲ ಭರವಸೆ ನೀಡುತ್ತಿದ್ದಾರೆಯೇ ಹೊರತು ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುವಲ್ಲಿ ವಿಫಲರಾಗಿದ್ದಾರೆ’ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ನಡೆದ ಘಟನೆ ಬಗ್ಗೆ ಚಂದ್ರಮ್ಮ ಜೊತೆಗಿದ್ದ ಮಹಿಳೆಯರು ಅಧಿಕಾರಿಗಳಿಗೆ ವಿವರಿಸಿ ಕಣ್ಣೀರಿಟ್ಟರು. ಕಾಡಾನೆ ಪೀಡಿತ ಪ್ರದೇಶದ ಜನರು ಕಾಡಾನೆಗಳಿಂದ ನಿತ್ಯ ಅನುಭವಿಸುತ್ತಿರುವ ಸಮಸ್ಯೆಗಳನ್ನು ತೆರೆದಿಟ್ಟರು.
ಮೃತ ಚಂದ್ರಮ್ಮ ಕುಟುಂಬದವರಿಗೆ ₹20ಲಕ್ಷ ಪರಿಹಾರದ ಚೆಕ್ ವಿತರಿಸಿದ ಅಧಿಕಾರಿಗಳು, ಪ್ರತಿಭಟನಕಾರರ ಮನವೊಲಿಸಿದರು. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಪ್ರತಿಭಟನೆಯಲ್ಲಿ ಗೋವಿಂದ ಶೆಟ್ಟಿ, ಮಲ್ಲಿಕಾರ್ಜುನ್, ರಾಧಾ, ಜೀವನ್, ಪಂಚಾಕ್ಷರಿ, ಚಂದ್ರಶೇಖರ್, ಪುನೀತ್, ಕೃಷ್ಣ, ಷರೀಫ್, ವೇದರಾಜು ಸೇರಿದಂತೆ ಕೃಷಿಕರು ಹಾಗೂ ಕಾರ್ಮಿಕರು ಪಾಲ್ಗೊಂಡಿದ್ದರು.
ಅರಣ್ಯಾಧಿಕಾರಿಗಳಿಗೆ ಡಿಸಿ ತರಾಟೆ
‘ಪ್ರತಿ ಬಾರಿ ಯಾರಾದರೂ ಮೃತಪಟ್ಟಾಗ ನಾವು ಬಂದು ಸಮಾಧಾನ ಮಾಡುವುದಕ್ಕೆ ಆಗುವುದಿಲ್ಲ. ಇದು ಅರಣ್ಯ ಅಧಿಕಾರಿಗಳ ಕೆಲಸ’ ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅರಣ್ಯಾಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ‘ಆನೆ ಎಲ್ಲಿದೆ ಎಂಬುದರ ಮಾಹಿತಿಯನ್ನು ಧ್ವನಿ ವರ್ಧಕದ ಮೂಲಕ ಸುತ್ತಲಿನ ಜನರಿಗೆ ತಿಳಿಸಬೇಕು. ಇಟಿಎಫ್ ಸಿಬ್ಬಂದಿ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಬಂದಿದ್ದಾರೆ. ಅವರಿಗೆ ಸರಿಯಾದ ಮಾರ್ಗದರ್ಶನ ಕೊಡಿ ಮೊದಲು. ಧ್ವನಿವರ್ಧಕ ಹಾಕೊಂಡು ಎಲ್ಲೋ ಒಂದು ಕಡೆ ಸುತ್ತಾಡೋದಲ್ಲ. ಗ್ರಾಮಸ್ಥರಿಗೆ ಎಲ್ಲೆಲ್ಲಿ ಆನೆಗಳಿವೆ ಎಂಬುದರ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ಈ ಅನಾಹುತಗಳು ಮೇಲಿಂದ ಮೇಲೆ ಆಗುತ್ತಲೇ ಇದ್ದು ಅರಣ್ಯಾಧಿಕಾರಿಗಳ ನಿರ್ಲಕ್ಷವೇ ಕಾರಣ’ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.