ADVERTISEMENT

ಕಾಡಾನೆ ದಾಳಿ: ಕಾಫಿ ಬೆಳೆಗೆ ಹಾನಿ

ಸಕಲೇಶಪುರ ಭಾಗದ ಕಾಫಿ ತೋಟಗಳಲ್ಲಿ ಬೀಡುಬಿಟ್ಟ ಕಾಡಾನೆ ಗುಂಪು

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 5:38 IST
Last Updated 12 ಜುಲೈ 2021, 5:38 IST
ಸಕಲೇಶಪುರ ತಾಲ್ಲೂಕು ಮಾಸುವಳ್ಳಿಯ ಬಿ.ಎ.ಜಗನ್ನಾಥ್‌ ಅವರ ತೋಟದಲ್ಲಿ ಬೀಡುಬಿಟ್ಟಿರುವ ಕಾಡಾನೆ
ಸಕಲೇಶಪುರ ತಾಲ್ಲೂಕು ಮಾಸುವಳ್ಳಿಯ ಬಿ.ಎ.ಜಗನ್ನಾಥ್‌ ಅವರ ತೋಟದಲ್ಲಿ ಬೀಡುಬಿಟ್ಟಿರುವ ಕಾಡಾನೆ   

ಹಾಸನ: ಸಕಲೇಶಪುರ ಭಾಗದ ವಿವಿಧೆಡೆ ಕಾಫಿ ತೋಟಗಳಲ್ಲಿ ಕಾಡಾನೆಗಳ ಗುಂಪು ಬೀಡು ಬಿಟ್ಟಿದ್ದು,ಕಾಫಿ ಗಿಡಗಳನ್ನು ನಾಶ ಮಾಡಿವೆ.

ತಾಲ್ಲೂಕಿನ ಮಾಸುವಳ್ಳಿಯಲ್ಲಿ ಕಾಡಾನೆಗಳ ದಾಂದಲೆಯಿಂದ 3 ಎಕರೆ ಕಾಫಿ ತೋಟ ಹಾನಿಗೀಡಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ಎ.ಜಗನ್ನಾಥ್‌ ಅವರ ತೋಟದಲ್ಲಿ ಶುಕ್ರವಾರ ಸಂಜೆಯಿಂದ 14 ಕಾಡಾನೆಗಳು ಬೀಡು ಬಿಟ್ಟಿವೆ.

ಕಾಡಾನೆಗಳ ಓಡಾಟದಿಂದ ರೋಬಸ್ಟಾ ಕಾಫಿ ಗಿಡಗಳು ಮುರಿದು ಬಿದ್ದಿವೆ. ಬಾಳೆ ಗಿಡಗಳನ್ನು ಸಿಗಿದು ಹಾಕಿದ್ದು, ಮೂರು ಎಕರೆಯಲ್ಲಿ ಅಂದಾಜು 500ಕ್ಕೂ ಹೆಚ್ಚು ಕಾಫಿ ಗಿಡಗಳನ್ನು ನಾಶ ಮಾಡಿವೆ.

ADVERTISEMENT

ಇದೇ ಗುಂಪಿನ ಕಾಡಾನೆಯೊಂದು ಈಚೆಗೆ ಹಸಿಡೆ ಗ್ರಾಮದ ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ದಾಳಿ ನಡೆಸಿತ್ತು. ಈ ಹಿನ್ನೆಲೆ ಆ ಭಾಗದ ಜನರು ಹಗಲಿನಲ್ಲಿಯೂ ಓಡಾಡಲು ಭಯ ಪಡುವಂತಾಗಿದೆ. ಅರಣ್ಯ ಇಲಾಖೆ ತಕ್ಷಣವೇ ಕಾಡಾನೆಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂಬುದು ಈ ಭಾಗದ ರೈತರ
ಆಗ್ರಹವಾಗಿದೆ.

ಡಿ.ಎಚ್‌.ಅಬ್ದುಲ್ ಖಾದರ್ ಮತ್ತು ನದೀಮ್ ಇಕ್ಬಾಲ್ ಎಂಬುವವರ ಎಸ್ಟೇಟ್ ಮತ್ತು ಮೈಲಹಳ್ಳಿ ಎಸ್ಟೇಟ್‌ನಲ್ಲಿ ಕಳೆದ 3 ವರ್ಷಗಳಿಂದ ಕಾಡಾನೆಗಳು ಬೆಳೆ ಮತ್ತು ಆಸ್ತಿ ಹಾನಿ ಮಾಡಿವೆ.

‘ಹಲಸುಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರೆಹಳ್ಳಿ, ಮೈಲಹಳ್ಳಿ, ಮಾಸುವಳ್ಳಿ ಗ್ರಾಮದ ಸುತ್ತಮುತ್ತ ಅಂದಾಜು 14 ಕಾಡಾನೆಗಳ ಗುಂಪು ಬೀಡುಬಿಟ್ಟಿವೆ. ಕಾಫಿ ತೋಟಗಳಲ್ಲಿ ಈಗ ಕಾಫಿ ಗಿಡಗಳ ಕಸಿ ಮಾಡುವುದು, ಚಿಗುರು ತೆಗೆಯುವುದು, ಮೆಣಸು, ಕಾಫಿಗೆ ಔಷಧ ಸಿಂಪಡಣೆ, ಹಳ ಹೊಡೆಯುವ ಕೆಲಸ ನಡೆಯುತ್ತಿದೆ. ಕಾಡಾನೆ ಭಯದಿಂದ ಕೂಲಿ ಕಾರ್ಮಿಕರು ಕೆಲಸಕ್ಕೆ ಬರಲು ಭಯಪಡುತ್ತಿದ್ದಾರೆ’ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಬಾಳ್ಳುಪೇಟೆ ಜಗನ್ನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ರೈತರು ತಮ್ಮ ಗದ್ದೆಗಳಲ್ಲಿ ಭತ್ತ ಬೆಳೆಯುವುದನ್ನೇ ಬಿಟ್ಟಿದ್ದಾರೆ. ಅನೇಕರು ಜಮೀನು ಪಾಳು ಬಿಟ್ಟಿದ್ದಾರೆ. ಭತ್ತ ಬೆಳೆದರೂ ಕಾಡಾನೆಗಳಿಂದ ಬೆಳೆ ರಕ್ಷಿಸಿಕೊಳ್ಳುವುದೇ ಕಷ್ಟವಾಗಿದೆ. ಒಂದೆಡೆ ಕೋವಿಡ್‌ನಿಂದ ಸಂಕಷ್ಟವಾದರೆ ಮತ್ತೊಂದೆಡೆ ಬೆಳೆ ನಷ್ಟದಿಂದ ರೈತರು ಹೈರಾಣಾಗಿದ್ದಾರೆ’ ಎಂದು ಹೇಳಿದರು.

‘ಸರ್ಕಾರ ನೀಡುವ ತಾತ್ಕಾಲಿಕ ಪರಿಹಾರ ಯಾವುದಕ್ಕೂ ಸಾಕಾಗುವುದಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಬೆಳೆಗಾರರಿಗೆಸೂಕ್ತ ಪರಿಹಾರ ನೀಡಬೇಕು, ಜತೆಗೆ ಕಾಡಾನೆಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.