ADVERTISEMENT

ಶಾಸಕ ಪ್ರೀತಂ ಗೌಡರಿಗೆ ಒಲಿಯುವುದೇ ಸಚಿವ ಸ್ಥಾನ?

ಬಿ.ವೈ.ವಿಜಯೇಂದ್ರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹಾಸನ ಕ್ಷೇತ್ರದ ಶಾಸಕ

ಕೆ.ಎಸ್.ಸುನಿಲ್
Published 29 ಜುಲೈ 2021, 13:31 IST
Last Updated 29 ಜುಲೈ 2021, 13:31 IST
ಪ್ರೀತಂ ಗೌಡ
ಪ್ರೀತಂ ಗೌಡ   

ಹಾಸನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಹೊಸ ಸರ್ಕಾರದಲ್ಲಿ ಶಾಸಕ ಪ್ರೀತಂ ಗೌಡರಿಗೆ ಅವಕಾಶ ದೊರೆಯಬಹುದೇ ಎನ್ನುವ ಲೆಕ್ಕಾಚಾರ ಆರಂಭವಾಗಿವೆ.

ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಕ್ಷೇತ್ರದಲ್ಲಿ ಜೆಡಿಎಸ್‌ ಮತ್ತು ಒಂದು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲಪಡಿಸುವ ದೃಷ್ಟಿಯಿಂದ ಜಿಲ್ಲೆಯ ಏಕೈಕ ಬಿಜೆಪಿ ಶಾಸಕ ಪ್ರೀತಂ ಗೌಡರಿಗೆ ಮಂತ್ರಿಗಿರಿ ಒಲಿಯಬಹುದು ಎಂಬ ಚರ್ಚೆ ನಡೆಯುತ್ತಿದೆ.

ಜಿಲ್ಲೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಪೈಪೋಟಿ ನಡುವೆಯೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಅಖಾಡಕ್ಕೆ ಧುಮುಕಿದ ಪ್ರೀತಂ ಗೌಡ ಗೆಲುವು ಸಾಧಿಸಿದ್ದರು. 1999ರಲ್ಲಿ ಹಾಸನವಿಧಾನ ಸಭಾ ಕ್ಷೇತ್ರದಿಂದ ದಿ.ಕೆ.ಎಚ್.ಹನುಮೇಗೌಡ ಅವರು ಬಿಜೆಪಿಯಿಂದ ಗೆದ್ದಿದ್ದರು.ಕ್ಷೇತ್ರದಲ್ಲಿ ಕಮಲ ಅರಳಿದ್ದು ಅದೇ ಮೊದಲು.

ADVERTISEMENT

ಯಡಿಯೂರಪ್ಪ ಸರ್ಕಾರದಲ್ಲಿಯೇ ಮಂತ್ರಿಗಿರಿ ದೊರೆಯುವ ಅಶಾಭಾವ ಅವರ ಅಭಿಮಾನಿಗಳಲ್ಲಿತ್ತು. ಆದರೆ, ಹಿರಿಯರಿಗೆ ಅವಕಾಶ ನೀಡಿದ ಕಾರಣದಿಂದ ಕೈಗೂಡಿರಲಿಲ್ಲ.

ಬಿ.ಎಸ್‌.ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಅವರ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷಬಿ.ವೈ.ವಿಜಯೇಂದ್ರ ಅವರ ನೇತೃತ್ವದ ತಂಡದ ಪ್ರಮುಖ ಸದಸ್ಯರಾಗಿ ಗುರುತಿಸಿಕೊಂಡಿದ್ದರು.ಕೆ.ಆರ್.ಪೇಟೆ, ಶಿರಾ ಹಾಗೂ ಮಸ್ಕಿ ಉಪ ಚುನಾವಣೆಯಲ್ಲಿ ಪಕ್ಷದ ಪ್ರಚಾರದ ಹೊಣೆ ಹೊತ್ತಿದ್ದ ತಂಡದಲ್ಲಿ ಪ್ರೀತಂ ಅವರ ಬದ್ಧತೆ ನಾಯಕರ ಗಮನ ಸೆಳೆದಿತ್ತು. ಹಾಸನ ಕ್ಷೇತ್ರದಿಂದ ನೂರಾರುಕಾರ್ಯಕರ್ತರನ್ನು ಕರೆದೊಯ್ದು ಪ್ರಚಾರದಲ್ಲಿ ತೊಡಗಿಸುವುದರ ಜತೆಗೆ, ಪ್ರಚಾರ ತಂತ್ರರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿ.ವೈ. ವಿಜಯೇಂದ್ರ ಅವರ ಕಟ್ಟಾ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ ಬಿಎಸ್‌ವೈ ಅವರ ಆಪ್ತ ಬಸವರಾಜ ಬೊಮ್ಮಾಯಿ ಅವರೇಮುಖ್ಯಮಂತ್ರಿ ಆಗಿರುವುದರಿಂದ ಈ ಬಾರಿ ಪ್ರೀತಂ ಅವರ ಬೆಂಬಲಿಗರು ಮುತ್ರಿಗಿರಿ ಸಿಗುತ್ತದೆಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಂಘ ಪರಿವಾರದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಜತೆಗೆ, ಅಭಿವೃದ್ಧಿ ಕಾರ್ಯಕ್ರಮಗಳ ಜಾರಿಯಲ್ಲಿಯೂ ಪ್ರೀತಂ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ. ‌

ಪಕ್ಷದಲ್ಲಿ ಹಲವು ಹಿರಿಯರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವುದರಿಂದ ಅವರನ್ನು ಹಿಂದಿಕ್ಕಿ ಇವರಿಗೆ ಸ್ಥಾನಮಾನ ನೀಡುವುದಕ್ಕೆ ಆಕ್ಷೇಪಣೆ ಎದುರಾಗಬಹುದು. ಮತ್ತೊಂದಡೆ ಯಡಿಯೂರಪ್ಪಅವರ ಅವರ ವಿರೋಧಿ ಬಣಗಳು ವಿರೋಧ ವ್ಯಕ್ತಪಡಿಸುವ ಸಾಧ್ಯತೆಯಿದ್ದು, ಅದರಿಂದಲೂ ಅಡ್ಡಿಎದುರಾಗಬಹುದು ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.