ನಂದಿನಿ ಹೆದ್ದುರ್ಗ
ಆಲೂರು ತಾಲ್ಲೂಕಿನ ಪಾಳ್ಯ ಹೋಬಳಿ ಹೆದ್ದುರ್ಗ ಎಂಬ ಪುಟ್ಟ ಹಳ್ಳಿಯಿಂದ ಬೆಳೆದ ಕೃಷಿಕ ಮಹಿಳೆ ನಂದಿನಿ ಕಾಫಿ ಬೆಳೆಗಾರರ ಪರ ಹೋರಾಟದಲ್ಲಿ ದಾಖಲೆ ನಿರ್ಮಿಸಿದವರು.
2019 ರಲ್ಲಿ ಕಾಫಿ ಬೆಳೆಗಾರರ ಸಂಸ್ಥೆಯ ಕಾರ್ಯದರ್ಶಿಯಾಗಿದ್ದ ಅವರು, ತಮ್ಮ ಅವಧಿಯಲ್ಲಿ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿ ಸೇರಿದಂತೆ ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರೇ ಆಯ್ಕೆಯಾಗುವಂತೆ ಮಾಡಿದ್ದರು.
ಅತಿವೃಷ್ಟಿಯಲ್ಲಿ ಕಾಫಿ ಬೆಳೆಯನ್ನು ಸೇರ್ಪಡೆ ಮಾಡಬೇಕೆಂದು ಹೋರಾಟ ನಡೆಸಿ ಯಶಸ್ವಿಯಾದವರು. ಕಾಫಿ ಬೆಳೆಗೆ ಅತಿವೃಷ್ಟಿ ಪರಿಹಾರ ದೊರೆಯುವಂತೆ ಮಾಡಿದ್ದೇ ಅವರ ಸಾಧನೆ. ಆ ಮೂಲಕ ಕಾಫಿ ಬೆಳೆಗಾರರ ಸಂಘಟನೆಯಲ್ಲಿ ಮಹಿಳೆಯರೂ ಸಕ್ರಿಯವಾಗಿ ಕಾರ್ಯನಿರ್ವಹಿಸಬಲ್ಲರು ಎಂಬುದನ್ನು ನಿರೂಪಿಸಿದರು. ಸಾಹಿತ್ಯ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ಅವರು, ದ್ವಿತೀಯ ಪಿಯುಸಿವರೆಗೂ ಓದಿದ್ದಾರೆ. ಪತಿಯೊಂದಿಗೆ ಕಾಫಿ ತೋಟ ನಿರ್ವಹಿಸುತ್ತಿದ್ದಾರೆ.
ಸ್ಥಳೀಯ ದಿನಪತ್ರಿಕೆಗಳಿಗೆ ಮಣ್ಣು, ಕೃಷಿಗೆ ಸಂಬಂಧಿಸಿದ ಅಂಕಣ ಬರಹಗಳನ್ನು ಬರೆಯುವುದರೊಂದಿಗೆ ಬರಹಗಾರರಾಗಿ ಹೊರ ಹೊಮ್ಮಿದರು. ಹಲವು ಕವನ ಸಂಕಲನಗಳ ಜೊತೆಗೆ ಲಲಿತ ಪ್ರಬಂಧಗಳ ಸಂಕಲನ ‘ಬ್ರೂನೋ ದಿ ಡಾರ್ಲಿಂಗ್’ ಮೂಲಕವೂ ಗಮನ ಸೆಳೆದಿದ್ದಾರೆ.
2020 ರಲ್ಲಿ ಜಿಲ್ಲಾ ಕಾಫಿ ಬೆಳೆಗಾರರ ಸಂಘ, 2021 ರಲ್ಲಿ ರಾಜ್ಯ ಕಾಫಿ ಬೆಳೆಗಾರರ ಸಂಘದ ನಿರ್ದೇಶಕರಾಗಿದ್ದ ಅವರು, 2025-26 ಸಾಲಿಗೆ ಕರ್ನಾಟಕ ಬೆಳೆಗಾರರ ಸಂಘಕ್ಕೆ ನಿರ್ದೇಶಕಿಯಾಗಿ ಮರು ಆಯ್ಕೆಯಾಗಿದ್ದಾರೆ. ಜಿಲ್ಲೆಯ ಸಂಸ್ಕೃತಿ ಮತ್ತು ಇತಿಹಾಸ ಅಧ್ಯಯನ, ಮಲೆನಾಡಿನ ವಿವಿಧ ವಿವಾಹ ಪದ್ಧತಿಗಳ ವಿವರವಾದ ಪುಸ್ತಕಗಳನ್ನು ಹೊರತರುವ ತಯಾರಿಯಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.