
ಹಾಸನ: ಆಲೂರು, ಬೇಲೂರು ತಾಲ್ಲೂಕು ಹಾಗೂ ಹಾಸನ ತಾಲ್ಲೂಕಿನ ಕಟ್ಟಾಯ ಹೋಬಳಿಗೆ ನೀರಾವರಿ ಸೌಲಭ್ಯ ಒದಗಿಸಲು ನಿರ್ಮಿಸಲಾಗಿರುವ ಸುಮಾರು 100 ಕಿ.ಮೀ.ಉದ್ದದ ಯಗಚಿ ಮುಖ್ಯ ನಾಲೆ ಹಾಗೂ ವಿಸ್ತರಣಾ ನಾಲೆಗಳು ಹಾಳಾಗಿದ್ದು, ನೀರು ಸಿಗದೇ ರೈತರು ಪರಿತಪಿಸುವಂತಾಗಿದೆ.
ಸಕಲೇಶಪುರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಆಲೂರು ತಾಲ್ಲೂಕು ಹಾಗೂ ಹಾಸನ ತಾಲ್ಲೂಕಿನ ಕಟ್ಟಾಯ ಹೋಬಳಿಯ ರೈತರು ಈ ನಾಲೆಯ ಫಲಾನುಭವಿಗಳು. ಆದರೆ, ಈ ನಾಲೆಗಳಲ್ಲಿ ನೀರು ಹರಿಯುವುದನ್ನು ಮಾತ್ರ ನೋಡಿಲ್ಲ. ಹಾಗಾಗಿ ಮತ್ತೆ ಕೊಳವೆಬಾವಿಗಳನ್ನು ಅವಲಂಬಿಸಿಯೇ ಕೃಷಿ ಮಾಡುವ ಅನಿವಾರ್ಯತೆ ಎದುರಾಗಿದೆ.
ನಾಲೆಗಳ ಹೂಳು ತೆಗೆದು, ದುರಸ್ತಿ ಮಾಡಿದಲ್ಲಿ ರೈತರಿಗೆ ಅನುಕೂಲ ಆಗಲಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಶಾಸಕ ಸಿಮೆಂಟ್ ಮಂಜು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ನಾಲ್ಕು ದಶಕಗಳಿಂದ ಯಗಚಿ ನಾಲೆಗಳು ಸಂಪೂರ್ಣ ಹೂಳು ತುಂಬಿವೆ. ಯಗಚಿ ಮುಖ್ಯ ನಾಲೆಯಲ್ಲಿ ಮಾತ್ರ ಸ್ವಲ್ಪ ನೀರು ಹರಿಯುತ್ತಿದೆ. ವಿಭಜಿತ ನಾಲೆಯಲ್ಲಿ ನೀರು ಹರಿಯುತ್ತಿಲ್ಲ. ಜಲಾಶಯ ತುಂಬಿದ್ದರೂ ನಾಲೆಗಳಲ್ಲಿ ನೀರು ಹರಿಯದೇ ರೈತರಿಗೆ ಪ್ರಯೋಜನವಾಗುತ್ತಿಲ್ಲ. ವಾಟೆಹೊಳೆ, ಯಗಚಿ ಜಲಾಶಯಗಳಲ್ಲಿ ನೀರಿದ್ದರೂ, ನೀರು ಸಿಗದಂತಹ ಪರಿಸ್ಥಿತಿ ರೈತರು ಎದುರಿಸುತ್ತಿದ್ದಾರೆ.
ರೈತರು ವರ್ಷದಲ್ಲಿ ಮೂರು ಬಾರಿ ತರಕಾರಿ ಬೆಳೆಯುತ್ತಿದ್ದು, ಎರಡು ಬಾರಿ ಮುಸುಕಿನ ಜೋಳ ಬೆಳೆಯುತ್ತಾರೆ. ಯಗಚಿ ನಾಲೆಯಲ್ಲಿ ನೀರು ಹರಿದರೆ, ಕಟ್ಟಾಯ, ಆಲೂರು ತಾಲ್ಲೂಕಿನ ರೈತರು ಬೆಳೆಯನ್ನು ಮತ್ತಷ್ಟು ಸಮೃದ್ಧವಾಗಿ ಬೆಳೆಯಬಹುದು.
ಆದರೆ, ಜಲಾಶಯಗಳಿದ್ದರೂ, ನಾಲೆಗಳ ಹೂಳಿನಿಂದಾಗಿ ರೈತರು ನೀರಾವರಿಯನ್ನೇ ಮರೆಯುವಂತಾಗಿದೆ. ಮಳೆ ಬಿಟ್ಟರೆ, ಕೊಳವೆಬಾವಿಗಳಿಗೆ ಮಾರು ಹೋಗಿ ಕೈ ಸುಟ್ಟುಕೊಳ್ಳುತ್ತಿದ್ದಾರೆ. ಕೂಡಲೇ ನಾಲೆಗಳು ದುರಸ್ತಿ ಕೈಗೊಂಡಲ್ಲಿ ಅನುಕೂಲ ಆಗಲಿದೆ ಎನ್ನುವುದು ರೈತರ ಮನವಿ.
ಯಗಚಿ ಜಲಾಶಯದ ಮುಖ್ಯ ನಾಲೆ ಮತ್ತು ವಿತರಣಾ ನಾಲೆಗಳ ದುರಸ್ತಿಕರಣ ಮತ್ತು ಭೂಮಿ ಕಳೆದುಕೊಂಡಿರುವ ರೈತರಿಗೆ ಪರಿಹಾರ ಒದಗಿಸುವ ಕುರಿತು ವಿಧಾನಸಭೆಯಲ್ಲೂ ಪ್ರಸ್ತಾಪಿಸಿರುವ ಶಾಸಕ ಸಿಮೆಂಟ್ ಮಂಜು, ನೀರಾವರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನ ಸೆಳೆದಿದ್ದಾರೆ.
20 ವರ್ಷವಾದರೂ ಸಿಗದ ಪರಿಹಾರ
ನಾಲೆಗಳ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಂಡು ಸುಮಾರು 15–20 ವರ್ಷ ಕಳೆದಿವೆ. ಆದರೆ, ಇದುವರೆಗೆ ಸುಮಾರು 40 ಕುಟುಂಬಗಳಿಗೆ ಭೂಸ್ವಾಧೀನದ ಪರಿಹಾರ ಸಿಕ್ಕಿಲ್ಲ. ಅದಕ್ಕಾಗಿ ಕೆಲ ರೈತರು ಕೋರ್ಟ್ ಮೊರೆ ಹೋಗಿದ್ದು, ಸರ್ಕಾರಿ ಅಧಿಕಾರಿಗಳ ವಾಹನ, ಕಚೇರಿ ಸಾಮಗ್ರಿಗಳ ಜಪ್ತಿಗೂ ಆದೇಶ ನೀಡಲಾಗಿದೆ.
ಕಟ್ಟಾಯ ಹೋಬಳಿಯಲ್ಲಿ ನಾಲೆಗಳಲ್ಲಿ ನೀರು ಹರಿಯುತ್ತಿಲ್ಲ. ಮೇಲಾಗಿ ಭೂಮಿಯನ್ನು ಕೊಟ್ಟವರಿಗೆ ಪರಿಹಾರವೂ ಸಿಕ್ಕಿಲ್ಲ. ಹಾಗಾಗಿ ಕೆಲ ರೈತರು ನಾಲೆಗಳನ್ನು ಮುಚ್ಚಿ, ಸಾಗುವಳಿ ಮಾಡುತ್ತಿದ್ದಾರೆ. ಇದನ್ನು ಸರಿಪಡಿಸಲು ಪರಿಹಾರ ಒದಗಿಸಬೇಕು. ಜೊತೆಗೆ ನಾಲೆಗಳ ದುರಸ್ತಿ ಮಾಡಬೇಕು. ಹಾಗಾದಲ್ಲಿ ಮಾತ್ರ ಕಟ್ಟಾಯ ಹೋಬಳಿ ರೈತರಿಗೆ ನೀರಾವರಿ ಸೌಲಭ್ಯ ಸಿಗಲು ಸಾಧ್ಯ ಎನ್ನುತ್ತಾರೆ ಶಾಸಕ ಸಿಮೆಂಟ್ ಮಂಜು.
ಯಗಚಿ ಮುಖ್ಯನಾಲೆ ಹಾಗೂ ವಿತರಣಾ ನಾಲೆಗಳು ಹಾಳಾಗಿವೆ. ಇದರಿಂದ ಜಲಾಶಯಗಳಿದ್ದರೂ ರೈತರಿಗೆ ನೀರಾವರಿ ಸೌಲಭ್ಯ ದೊರೆಯುತ್ತಿಲ್ಲ. ಕೂಡಲೇ ನಾಲೆ ದುರಸ್ತಿ ಮಾಡಬೇಕು.– ಸಿಮೆಂಟ್ ಮಂಜು, ಶಾಸಕ
100 ಕಿ.ಮೀ. ಉದ್ದದ ಯಗಚಿ ನಾಲೆಯಿಂದ 37 ಸಾವಿರ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಸಿಗಲಿದೆ. ಹಣಕಾಸು ಲಭ್ಯತೆ ಆಧರಿಸಿ, ನಾಲೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.– ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.