ADVERTISEMENT

ಎತ್ತಿನಹೊಳೆ; 2027ರ ವೇಳೆಗೆ ಯೋಜನೆ ಪೂರ್ಣ: ಡಿ.ಕೆ. ಶಿವಕುಮಾರ್‌

ಪ್ರಾಯೋಗಿಕ ನೀರು ಹರಿಸುವಿಕೆಗೆ ಚಾಲನೆ ನೀಡಿದ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2024, 20:09 IST
Last Updated 28 ಆಗಸ್ಟ್ 2024, 20:09 IST
ಸಕಲೇಶಪುರ ತಾಲ್ಲೂಕಿನ ಕೆಸವನಹಳ್ಳಿಯ ಕುಂಬರಡಿ ಕಾಫಿ ಎಸ್ಟೇಟ್ ಬಳಿ ಎತ್ತಿನಹೊಳೆ ಯೋಜನೆಯ ಪರೀಕ್ಷಾರ್ಥ ನೀರು ಹರಿಸುವ ಕಾರ್ಯಾಚರಣೆಯನ್ನು ಬುಧವಾರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪರಿಶೀಲಿಸಿದರು
ಸಕಲೇಶಪುರ ತಾಲ್ಲೂಕಿನ ಕೆಸವನಹಳ್ಳಿಯ ಕುಂಬರಡಿ ಕಾಫಿ ಎಸ್ಟೇಟ್ ಬಳಿ ಎತ್ತಿನಹೊಳೆ ಯೋಜನೆಯ ಪರೀಕ್ಷಾರ್ಥ ನೀರು ಹರಿಸುವ ಕಾರ್ಯಾಚರಣೆಯನ್ನು ಬುಧವಾರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪರಿಶೀಲಿಸಿದರು   

ಸಕಲೇಶಪುರ: ‘ಎತ್ತಿನಹೊಳೆ ಯೋಜನೆಯಡಿ ಒಟ್ಟು 8 ವಿಯರ್‌ (ಚೆಕ್‌ಡ್ಯಾಂ)ಗಳಲ್ಲಿ 5 ವಿಯರ್‌ಗಳಿಗೆ ಚಾಲನೆ ನೀಡಲಾಗಿದೆ. 1,500 ಕ್ಯೂಸೆಕ್ಸ್ ನೀರನ್ನು ಮೇಲಕ್ಕೆ ಎತ್ತಲಾಗಿದೆ. ನೀರು ಕಡಿಮೆ ಆಗುವ ಮೊದಲು ಶುಭದಿನ ನೋಡಿ ಮುಖ್ಯಮಂತ್ರಿಯಿಂದ ಚಾಲನೆ ಮಾಡಿಸಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ತಾಲ್ಲೂಕಿನ ಕೆಸವನಹಳ್ಳಿಯ ಕುಂಬರಡಿ ಕಾಫಿ ಎಸ್ಟೇಟ್ ಬಳಿ ಎತ್ತಿನಹೊಳೆ ಯೋಜನೆಯ ಪರೀಕ್ಷಾರ್ಥ ನೀರು ಹರಿಸುವಿಕೆಗೆ ಬುಧವಾರ ಚಾಲನೆ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘2024ರ ಜುಲೈ ಅಂತ್ಯದರೆಗೆ ₹16,152 ಕೋಟಿ ಆರ್ಥಿಕ ಪ್ರಗತಿ ಸಾಧಿಸಲಾಗಿದ್ದು, 2027 ರ ಮಾರ್ಚ್‌ 31 ರ ವೇಳೆಗೆ ಯೋಜನೆಯನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ’ ಎಂದು ತಿಳಿಸಿದರು.

‘ಯೋಜನೆಯಿಂದ 24.01 ಟಿಎಂಸಿ ನೀರನ್ನು 7 ಜಿಲ್ಲೆಗಳಿಗೆ ಕುಡಿಯಲು ಪೂರೈಸಲಾಗುವುದು. ಬರಪೀಡಿತ 29 ತಾಲ್ಲೂಕಿನ 38 ಪಟ್ಟಣ ಹಾಗೂ 6,657 ಗ್ರಾಮಗಳ ಸುಮಾರು 75.59 ಲಕ್ಷ ಜನ ಮತ್ತು ಜಾನುವಾರುಗಳಿಗೆ 14.056 ಟಿಎಂಸಿ ನೀರನ್ನು ಒದಗಿಸಲಾಗುವುದು. 527 ಕೆರೆಗಳಿಗೆ 9.953 ಟಿಎಂಸಿ ನೀರನ್ನು ಹರಿಸುವುದು ಮುಖ್ಯ ಉದ್ದೇಶ’ ಎಂದರು.

ADVERTISEMENT

‘ಕಾಲುವೆ ಒಟ್ಟು 252.87 ಕಿ.ಮೀ ಉದ್ದವಿದ್ದು, ಆ ಪೈಕಿ 164 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಈ ಮಧ್ಯೆ 42 ಕಿ.ಮೀ. ನಂತರ ಅರಣ್ಯ ಮತ್ತು ಭೂಸ್ವಾಧೀನ ಸಮಸ್ಯೆಯಿಂದಾಗಿ ಕಾಮಗಾರಿ ಪೂರ್ಣಗೊಂಡಿಲ್ಲ. ಹೀಗಾಗಿ 32.50 ಕಿ.ಮೀ. ನಂತರ ನೀರನ್ನು ವೇದಾ ವ್ಯಾಲಿ ಮೂಲಕ 132.50 ಕಿ.ಮೀ ದೂರದ ವಾಣಿವಿಲಾಸ ಸಾಗರಕ್ಕೆ ತಾತ್ಕಾಲಿಕವಾಗಿ ಹರಿಸುವ ಉದ್ದೇಶವಿದೆ’ ಎಂದು ಮಾಹಿತಿ ನೀಡಿದರು.

‘ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಜೂನ್ 1ರಿಂದ ಆಗಸ್ಟ್ 20ರವರೆಗೆ ಒಟ್ಟು 13.34 ಟಿಎಂಸಿ ನೀರಿನ ಹರಿವು ದಾಖಲಾಗಿದೆ‘ ಎಂದು ತಿಳಿಸಿದರು.

ಸಕಲೇಶಪುರ ತಾಲ್ಲೂಕಿನ ಕೆಸವನಹಳ್ಳಿಯ ಕುಂಬರಡಿ ಕಾಫಿ ಎಸ್ಟೇಟ್ ಬಳಿ ಎತ್ತಿನಹೊಳೆ ಯೋಜನೆಯ ಪರೀಕ್ಷಾರ್ಥ ನೀರು ಹರಿಸುವ ಕಾರ್ಯಾಚರಣೆಯನ್ನು ಬುಧವಾರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪರಿಶೀಲಿಸಿದರು.
₹23251 ಕೋಟಿ ಮೊತ್ತದ ಮಹತ್ವಾಕಾಂಕ್ಷಿ ಯೋಜನೆಯ ಮೊದಲನೇ ಹಂತದಲ್ಲಿ ಏತ ಮತ್ತು ವಿದ್ಯುತ್ ಪೂರೈಕೆ ಕಾಮಗಾರಿಗಳಲ್ಲಿ ಅಚಡಣೆ ಉದ್ಭವಿಸಿದ್ದರಿಂದ ವಿಳಂಬವಾಗಿತ್ತು
ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.