ADVERTISEMENT

ಅಧಿಕಾರಿಗಳ ವಿರುದ್ಧ ಶಾಸಕ ಕಿಡಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 7:45 IST
Last Updated 15 ಫೆಬ್ರುವರಿ 2012, 7:45 IST

ಹಿರೇಕೆರೂರ: ಅಧಿಕಾರಿಗಳು ಗುತ್ತಿಗೆದಾರರ ಜೊತೆಗೆ ಶಾಮೀಲಾಗಿರುವುದರಿಂದ ತಾಲ್ಲೂಕಿನಲ್ಲಿ ನಡೆಯುತ್ತಿರುವ ಬಹುತೇಕ ಅಭಿವೃದ್ಧಿ ಕಾಮಗಾರಿಗಳು ಕಳಪೆಯಾಗಿವೆ. ಅಧಿಕಾರಿಗಳು ಜನತೆಯ ಹಿತಾಸಕ್ತಿಯನ್ನು ಮರೆತು ಗುತ್ತಿಗೆದಾರರ ಹಿತ ಕಾಯುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಬಿ.ಸಿ.ಪಾಟೀಲ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅಧಿಕಾರಿಗಳ ಕಾರ್ಯವೈಖರಿಯನ್ನು ಶಾಸಕರು ತೀವ್ರ ತರಾಟೆಗೆ ತೆಗೆದುಕೊಂಡರು.

`ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ತಾವರಗಿ-ರಟ್ಟೀಹಳ್ಳಿ ರಸ್ತೆ ಕಾಮಗಾರಿ ರೂ.28ಲಕ್ಷ ವೆಚ್ಚದಲ್ಲಿ ನಡೆಯುತ್ತಿದ್ದು, ಸಂಪೂರ್ಣ ಕಳಪೆಯಾಗಿದೆ ಎಂಬ ದೂರುಗಳು ಬಂದಿವೆ. ಇದನ್ನು ಪರಿಶೀಲನೆ ನಡೆಸಿ ವರದಿ ಸಲ್ಲಿಸಿರಿ~ ಎಂದು ಸಭೆಯಲ್ಲಿದ್ದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಬಿ.ತುರಮರಿಗೆ ಶಾಸಕರು ಸೂಚಿಸಿದರು. ಸಭೆಯಿಂದ ನಿರ್ಗಮಿಸಿದ ಎಂ.ಬಿ.ತುರಮರಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವಾಪಸು ಸಭೆಗೆ ಹಾಜರಾಗಿ `ಕಾಮಗಾರಿ ಸ್ಥಗಿತಗೊಳಿಸಲು ಸೂಚಿಸಿದ್ದೇನೆ~ ಎಂದು ಶಾಸಕರಿಗೆ ವಿವರ ನೀಡಿದರು.


ತಾಲ್ಲೂಕಿಗೆ ಬರುವ ಅನುದಾನದ ಸಮರ್ಪಕ ಬಳಕೆಗೆ ಅಧಿಕಾರಿಗಳು ಶ್ರಮಿಸಬೇಕು. ತಾಲ್ಲೂಕಿನಲ್ಲಿ ನಡೆಯುವ ಎಲ್ಲ ಕಾಮಗಾರಿಗಳ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು. ಸಭೆಗಳಿಗೆ ಅಧಿಕಾರಿಗಳು ಸಕಾಲದಲ್ಲಿ ತಪ್ಪದೇ ಸೂಕ್ತ ಮಾಹಿತಿಯೊಂದಿಗೆ ಹಾಜರಾಗಬೇಕು.
 

ತಪ್ಪಿದಲ್ಲಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ತಿಳಿಸಿದ ಶಾಸಕರು, ಹಿರೇಕೆರೂರ ಪಟ್ಟಣದ ಜನತೆಗೆ ಫ್ಲೋರೈಡ್ ಮುಕ್ತವಾದ ನೀರನ್ನು ಒದಗಿಸುವ ಉದ್ದೇಶದಿಂದ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಪೂರೈಸುವ ಕಾಮಗಾರಿ 2008-09ನೇ ಸಾಲಿನಿಂದಲೂ ಸತತ ನಡೆಯುತ್ತಿದ್ದು, ನಿಧಾನ ಗತಿಯ ಈ ಕಾಮಗಾರಿಯು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವನ್ನು ತೋರುತ್ತದೆ ಎಂದು ದೂರಿದರು.

ಹಳ್ಳೂರು ಮತ್ತು ಪುರದಕೇರಿ ಗ್ರಾಮಗಳ ಸಮೀಪ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ಮಾಫಿಯಾ ನಡೆಯುತ್ತಿದೆ. ಅಲ್ಲಿ ಮರಳಿಗಾಗಿ ಹಾಹಾಕಾರ ಏರ್ಪಟ್ಟಿದೆ. ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಿ.ಸಿ.ಪಾಟೀಲ ಒತ್ತಾಯಿಸಿದರು.

ಮೇದೂರು ಗ್ರಾಮದಲ್ಲಿ ನಿರ್ಮಿತಿ ಕೇಂದ್ರದಿಂದ ರೂ.2.50ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದ್ದಾರೆ. ಆದರೆ ಗ್ರಾಮದಲ್ಲಿ ನಿರ್ಮಿತಿ ಕೇಂದ್ರದಿಂದ ಯಾವುದೇ ಕಾಮಗಾರಿ ನಡೆದಿಲ್ಲ ಎಂದು ಸದಸ್ಯ ಪಾಲಾಕ್ಷಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT


ತಾಲ್ಲೂಕಿನಾದ್ಯಂತ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ವ್ಯಾಪಕವಾಗಿ ನಡೆಯುತ್ತಿದೆ. ಕೆಲವು ಗ್ರಾಮಗಳಲ್ಲಿ ಮದ್ಯ ಮಾರಾಟಕ್ಕೆ ಹರಾಜು ಕೂಡ ನಡೆದಿವೆ. ಅಬಕಾರಿ ಇಲಾಖೆ ಕಣ್ಣುಮುಚ್ಚಿಕೊಂಡು ಕುಳಿತಿದೆ ಎಂದು ಸಭೆಯಲ್ಲಿದ್ದ ಬಹುತೇಕ ಸದಸ್ಯರು ಆರೋಪಿಸಿದರು.

ಸಭೆಗೆ ಕೈಗಾರಿಕಾ ವಿಸ್ತೀರ್ಣಾಧಿಕಾರಿ, ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಹಾಗೂ ಕೆಎಂಎಫ್ ಅಧಿಕಾರಿಗಳು ಗೈರು ಹಾಜರಾಗಿದ್ದರು. ಇವರ ವಿರುದ್ಧ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ಪತ್ರ ಬರೆಯಲು ಠರಾವು ಪಾಸು ಮಾಡಲಾಯಿತು.

ತಾ.ಪಂ. ಅಧ್ಯಕ್ಷ ಶಿವಪ್ಪ ಗಡಿಯಣ್ಣನವರ, ಉಪಾಧ್ಯಕ್ಷೆ ನಿರ್ಮಲಾ ಗುಬ್ಬಿ, ಜಿ.ಪಂ. ಸದಸ್ಯರಾದ ಬಸವರಾಜ ಬೇವಿನಹಳ್ಳಿ, ಸುಜಾತಾ ಕೊಟಗಿಮನಿ, ಶಾಂತಮ್ಮ ಹಾದಿಮನಿ, ಬಸಮ್ಮ ಅಬಲೂರ, ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಮಾಳಿಗೇರ, ತಹಶೀಲ್ದಾರ ಇಸ್ಮಾಯಿಲ್‌ಸಾಬ್ ಶಿರಹಟ್ಟಿ ಇತರರು ಹಾಜರಿದ್ದರು.
ಸಂತಾಪ: ಸಚಿವ ವಿ.ಎಸ್.ಆಚಾರ್ಯ ನಿಧನಕ್ಕೆ ಸಭೆಯ ಮಧ್ಯದಲ್ಲಿ ಸಂತಾಪ ಸೂಚಿಸಿ, ಒಂದು ನಿಮಿಷ ಮೌನ ಆಚರಿಸಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.