ADVERTISEMENT

ಕಾಫಿ ನಾಡಿನಿಂದ ಏಲಕ್ಕಿ ನಾಡಿಗೆ

ಕೊನೆಗೂ ಸಿಕ್ಕ ಕನ್ನಡದ ತೇರು: ಸಾಹಿತ್ಯಾಸಕ್ತರ ಸಂತಸ

ವಿಜಯ್ ಹೂಗಾರ
Published 9 ಜನವರಿ 2014, 6:22 IST
Last Updated 9 ಜನವರಿ 2014, 6:22 IST

ಹಾವೇರಿ: ದಾರ್ಶನಿಕರ, ಸಾಹಿತಿಗಳ ಬೀಡು, ಏಲಕ್ಕಿ ಕಂಪಿನ ನಾಡು ಹಾವೇರಿ ಜಿಲ್ಲೆಗೆ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯದ ಭಾಗ್ಯ ಸಿಕ್ಕಿದೆ. ನಾಲ್ಕೈದು ವರ್ಷಗಳಿಂದ ಕನ್ನಡದ ತೇರು ಎಳೆಯಲು ಸಿಗದೇ ಜಿಲ್ಲೆಯ ಜನರಲ್ಲಿ ಮೂಡಿದ ಬೇಸರಕ್ಕೆ ಕೊನೆಗೂ ಮುಕ್ತಿ ದೊರೆತಿದೆ.

ರಾಜ್ಯದಲ್ಲಿ ಇಲ್ಲಿವರೆಗೆ ನಡೆದ 80 ಸಮ್ಮೇಳನಗಳಲ್ಲಿ ಹಾವೇರಿ ಜಿಲ್ಲೆ ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲಾಗಿತ್ತಲ್ಲದೇ, ಕೆಲ ಜಿಲ್ಲೆಗಳು ಎರಡೆರಡು ಬಾರಿ ಸಮ್ಮೇಳನ ನಡೆಸಿದ್ದವು. ಸಮ್ಮೇಳನ ನಡೆಸಲು ಎಲ್ಲ ಅರ್ಹತೆ ಹೊಂದಿದ್ದರೂ, ಯಾಕೆ ಜಿಲ್ಲೆಯನ್ನು ಕಡೆಗಣಿಸಲಾಗುತ್ತಿದೆ ಎಂಬುದು ಮಾತ್ರ ಉತ್ತರ ಸಿಗಲಾರದ ಪ್ರಶ್ನೆಯಾಗಿತ್ತು.
 
2010 ಫೆಬ್ರುವರಿ 18 ರಂದು ಗದಗನಲ್ಲಿ ಆರಂಭವಾದ ೭೬ನೇ ಸಮ್ಮೇಳನದಿಂದ ಹಿಡಿದು ವಿಜಾಪುರದಲ್ಲಿ ನಡೆದ 79ನೇ ಸಮ್ಮೇಳನದವರೆಗೆ ಜಿಲ್ಲೆಗೆ ಸಮ್ಮೇಳನ ಸಿಗಲಿದೆ ಎಂಬ ನಿರೀಕ್ಷೆಯಿತ್ತು. ಕೊನೆ ಘಳಿಗೆಯಲ್ಲಿ ಅದು ಹುಸಿಯಾದಾಗ ಬೇಸರದಿಂದಲೇ ಜಿಲ್ಲೆಯ ಜನರು ಮುಂದಿನ ಬಾರಿಯಾದರೂ ಸಿಗಲಿ ಎನ್ನುವ ಆಶಾಭಾವನೆ ಇಟ್ಟುಕೊಂಡು ಪ್ರಯತ್ನ ಮುಂದುವರೆಸಿದ್ದರು. ಕೊಡಗಿನಲ್ಲಿ ನಡೆದ ಸಮ್ಮೇಳನದಲ್ಲಿ ಕೊನೆಗೂ 81ನೇ ಸಮ್ಮೇಳನ ಹಾವೇರಿ ಜಿಲ್ಲೆಗೆ ಘೋಷಣೆಯಾಗಿದೆ. ಆ ಮೂಲಕ ಬಹುದಿನಗಳ ಆಸೆ ಈಡೇರಿದಂತಾಗಿದೆ.

ಪ್ರಯತ್ನಕ್ಕೆ ಫಲ: ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಸಬೇಕು ಜಿಲ್ಲೆಯ ಸಾಹಿತ್ಯಾಸಕ್ತರು, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕ ಎಲ್ಲಿಲ್ಲದ ಪ್ರಯತ್ನ ನಡೆಸುತ್ತಲೇ ಬಂದಿತ್ತು. ಹಿಂದಿನ ಕಸಾಪ ಅಧ್ಯಕ್ಷ ಮಾರುತಿ ಶಿಡ್ಲಾಪುರ ಅವರ ಅವಧಿಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ಗೆ ವಿದ್ಯಾರ್ಥಿಗಳು, ಸಂಘ, ಸಂಸ್ಥೆಗಳು, ಸಾಹಿತಿಗಳು, ವೈದ್ಯರು, ರಾಜಕೀಯ ಮುಖಂಡರು ಸೇರಿದಂತೆ ಸಾವಿರಾರು ಜನರು ೧೦,೦೦೦ ಪತ್ರಗಳನ್ನು ಬರೆದು ಒತ್ತಾಯಿಸಿದ್ದರು.

ಅಷ್ಟೇ ಅಲ್ಲದೇ ಜಿಲ್ಲೆಯಲ್ಲಿ ನಡೆದ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಹಾವೇರಿಗೆ ಸಾಹಿತ್ಯ ಸಮ್ಮೇಳನ ನೀಡಬೇಕು ಎಂಬ ಒತ್ತಾಯದ ನಿರ್ಣಯಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿತ್ತು. ಆದರೆ, ಕಾರ್ಯಕಾರಿ ಮಂಡಳಿ ಸದಸ್ಯರ ಒಲವು ಗಳಿಸುವಲ್ಲಿ ಜಿಲ್ಲಾ ಕಸಾಪ ಘಟಕ ವಿಫಲವಾಗುತ್ತಿತ್ತು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ. ಮಾಸಣಗಿ ತಮ್ಮ ಅಧಿಕಾರವಧಿಯ ಮೊದಲ ವರ್ಷದಿಂದಲೇ ಸಮ್ಮೇಳನ ಜಿಲ್ಲೆಗೆ ತರಬೇಕೆಂದು ಪ್ರಯತ್ನ ನಡೆಸಿದ್ದರು. ಮೊದಲ ಪ್ರಯತ್ನದಲ್ಲಿ ವಿಫಲವಾಗಿದ್ದರೂ ಎರಡನೇ ಯತ್ನದಲ್ಲಿ ಯಶಸ್ಸು ಸಾಧಿಸಿದ್ದಕ್ಕೆ ಸಂತಸವಾಗಿದೆ ಎಂದು ಜಿ.ಬಿ.ಮಾಸಣಗಿ ಹೇಳಿದ್ದಾರೆ.

ಸಾಹಿತ್ಯದ ಕಣಜ: ದಾರ್ಶನಿಕರ ತವರೂರು, ಸಾಹಿತಿ, ಸಂಗೀತ, ಹೋರಾಟ ದಿಗ್ಗಜರ ನೆಲವೀಡು ಎಂದು ಕರೆಸಿಕೊಳ್ಳುವ ಹಾವೇರಿ ಜಿಲ್ಲೆ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದ ಕಣಜವಾಗಿದೆ.

ದಾಸ ಶ್ರೇಷ್ಠ ಕನಕದಾಸರು, ತ್ರಿಪದಿ ಕವಿ ಸರ್ವಜ್ಞ, ಸಂತ ಶಿಶುವಿನಾಳ ಷರೀಫರು, ಶರಣ ಅಂಬಿಗರ ಚೌಡಯ್ಯ, ಗಾನಯೋಗಿ ಪಂಚಾಕ್ಷರಿ ಗವಾಯಿ, ಪಂ. ಪುಟ್ಟರಾಜ ಕವಿಗವಾಯಿ, ಕಾದಂಬರಿ ಪಿತಾಮಹ ಗಳಗನಾಥ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿ.ಕೃ.ಗೋಕಾಕ, ಶಾಂತಕವಿ, ಗಾನವಿದುಷಿ ಗಂಗೂಬಾಯಿ ಹಾನಗಲ್ಲ, ಕನ್ನಡ ಶಬ್ದಕೋಶದ ಜನಕ ರಾಕು, ಆಧುನಿಕ ವಚನಕಾರ ಡಾ. ಮಹದೇವ ಬಣಕಾರ, ನಾಡೋಜ ಪಾಟೀಲ ಪುಟ್ಟಪ್ಪ, ಸ್ವಾತಂತ್ರ್ಯ ಸೇನಾನಿ ಗುದ್ಲೆಪ್ಪ ಹಳ್ಳಿಕೇರಿ, ಪ್ರೊ. ಚಂಪಾ ಈ ನೆಲಮೂಲ ಸಂಸ್ಕೃತಿಯಿಂದಲೇ ಬೆಳಗಿದ ದೀಪಗಳು. 

ವಿರಾಟ ನಗರ ಹಾನಗಲ್ಲ, ವಾಣಿಜ್ಯ ನಗರಿ ರಾಣೆಬೆನ್ನೂರು, ನವಾಬರ ನಾಡು ಸವಣೂರು, ಬಹಮನಿ ಸುಲ್ತಾನರ ಬಂಕಾಪುರ, ಪತ್ರಿಕಾರಂಗದ ಮೈಲುಗಲ್ಲು ಎನಿಸಿರುವ ಶತಮಾನ ದಾಟಿದ ಅಗಡಿಯ ‘ಸದ್ಭೋದ ಚಂದ್ರಿಕೆ’ ಇಲ್ಲಿಯ ಐತಿಹಾಸಿಕ ಶ್ರೀಮಂತಿಕೆಯನ್ನು ಕೂಗಿ ಹೇಳುತ್ತಿವೆ. ಸಾಹಿತ್ಯಿಕ, ಸಾಂಸ್ಕೃತಿಕ, ಧಾರ್ಮಿಕ, ಸಂಗೀತ ಕ್ಷೇತ್ರಗಳಿಗೆ ಹಾಗೂ ಸ್ವಾತಂತ್ರ್ಯ ಹೋರಾಟಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ ಯಾಲಕ್ಕಿ ಕಂಪಿನ ನಾಡು, ಮರಿಕಲ್ಯಾಣ ಎಂದೇ ಖ್ಯಾತಿ ಪಡೆದ ಹಾವೇರಿಗೆ 81ನೇ ಸಾಹಿತ್ಯ ಸಮ್ಮೇಳನ ನಡೆಸುವ ಸೌಭಾಗ್ಯ ದೊರೆತಿರುವುದು ಈ ನೆಲದ ದಿಗ್ಗಜರಿಗೆ ಸಂದ ಗೌರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.