ADVERTISEMENT

ಕೊರೊನಾ ವೈರಸ್: ಮಾಹಿತಿ ಕೇಂದ್ರ ಆರಂಭಿಸಲು ಸೂಚನೆ

ವಿದೇಶದಿಂದ ಬಂದ ಪ್ರಯಾಣಿಕರ ವಿವರ ಸಂಗ್ರಹಿಸಿ: ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 13:22 IST
Last Updated 20 ಮಾರ್ಚ್ 2020, 13:22 IST
ಹಾವೇರಿಯ ರೈಲ್ವೆ ನಿಲ್ದಾಣದಲ್ಲಿ ಕೊರೊನಾ ವೈರಸ್‌ ಸೋಂಕಿನ ಬಗ್ಗೆ ಕರಪತ್ರ ಪ್ರಯಾಣಿಕರಿಗೆ ನೀಡಿ ಜಾಗೃತಿ ಮೂಡಿಸುತ್ತಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿ  –ಪ್ರಜಾವಾಣಿ ಚಿತ್ರ 
ಹಾವೇರಿಯ ರೈಲ್ವೆ ನಿಲ್ದಾಣದಲ್ಲಿ ಕೊರೊನಾ ವೈರಸ್‌ ಸೋಂಕಿನ ಬಗ್ಗೆ ಕರಪತ್ರ ಪ್ರಯಾಣಿಕರಿಗೆ ನೀಡಿ ಜಾಗೃತಿ ಮೂಡಿಸುತ್ತಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿ  –ಪ್ರಜಾವಾಣಿ ಚಿತ್ರ    

ಹಾವೇರಿ: ವಿದೇಶದಲ್ಲಿ ನೆಲೆಸಿರುವ ಅಥವಾ ಬೇರೆ ಕಾರಣಗಳಿಗೆ ವಿದೇಶಕ್ಕೆ ತೆರಳಿರುವ ಜಿಲ್ಲೆಯ ಜನರು ಮರಳಿ ಜಿಲ್ಲೆಗೆ ಬರುತ್ತಿದ್ದಾರೆ. ಇಂತಹ ಜನರ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಇವರುಗಳನ್ನು ಸೂಕ್ತ ವ್ಯದ್ಯಕೀಯ ತಪಾಸಣೆಗೆ ಒಳಪಡಿಸಬೇಕಾಗಿರುವುದಿಂದ ಪ್ರತಿಯೊಂದು ತಹಶೀಲ್ದಾರ್‌ ಕಚೇರಿ ಹಾಗೂ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಮಾಹಿತಿ ಕೇಂದ್ರ ಆರಂಭಿಸಲು ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಸೂಚನೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ (ಕೋವಿಡ್-19) ವೈರಸ್ ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಮಾಹಿತಿ ಕೇಂದ್ರಗಳಲ್ಲಿ ವಿದೇಶದಿಂದ ಬಂದವರ ಮಾಹಿತಿಯನ್ನು ಸಂಗ್ರಹಿಸಿ ಆರೋಗ್ಯ ಇಲಾಖೆಗೆ ತಿಳಿಸಬೇಕು. ಈ ಕುರಿತು ಎಲ್ಲ ವಿವರಗಳನ್ನು ಒಳಗೊಂಡ ಒಂದು ವಹಿಯನ್ನು ನಿರ್ವಹಿಸಬೇಕು ಹಾಗೂ ಎಲ್ಲ ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ ಕಾರ್ಯಾಲಯಗಳಲ್ಲಿ 24x7 ಸಹಾಯವಾಣಿಯನ್ನು ತೆರೆಯಲು ಸೂಚಿಸಿದ್ದಾರೆ.

ಆರೋಗ್ಯ ಇಲಾಖೆಯಿಂದ ರೈಲ್ವೆ ಹಾಗೂ ಬಸ್ ನಿಲ್ದಾಣಗಳಲ್ಲಿ ‘ಥರ್ಮಲ್ ಸ್ಕ್ರೀನಿಂಗ್’ ವ್ಯವಸ್ಥೆ ಮಾಡಲಾಗಿದೆ. ಹಾವೇರಿ ಮತ್ತು ರಾಣೆಬೆನ್ನೂರು ರೈಲು ನಿಲ್ದಾಣಗಳಲ್ಲಿ ಬೇರೆ ಬೇರೆ ರಾಜ್ಯಗಳಿಂದ ಸುಮಾರು 100ರಿಂದ 200 ಜನರು ಆಗಮಿಸುತ್ತಾರೆ. ಪ್ರಯಾಣಿಕರು ರೈಲಿನಿಂದ ಇಳಿದ ತಕ್ಷಣ ಥರ್ಮಲ್ ಸ್ಕ್ರೀನಿಂಗ್ ಕೇಂದ್ರಕ್ಕೆ ತೆರಳಿ ಪರೀಕ್ಷಿಸಿಕೊಳ್ಳಬೇಕು. ಆದರೆ ರೈಲು ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಜನದಟ್ಟಣೆ ಹೆಚ್ಚಾಗಿ ಕೆಲವು ಪ್ರಯಾಣಿಕರು ಪರೀಕ್ಷೆ ಮಾಡಿಸಿಕೊಳ್ಳದೇ ನಿಲ್ದಾಣಗಳಿಂದ ಹೊರಹೋಗುತ್ತಿದ್ದಾರೆ ಹಾಗೂ ಥರ್ಮಲ್ ಸ್ಕ್ರೀನಿಂಗ್ ಕೇಂದ್ರಗಳಲ್ಲಿ ಹೆಚ್ಚಿನ ಜನದಟ್ಟಣೆಯಾಗುವುದರಿಂದ ವ್ಯವಸ್ಥಿತವಾಗಿ ಪರೀಕ್ಷಿಸಿಲು ಆರೋಗ್ಯ ಇಲಾಖೆ ಸಿಬ್ಬಂದಿಗೆ ತೊಂದರೆಯಾಗುತ್ತಿದೆ ಹಾಗೂ ಬಸ್ ನಿಲ್ದಾಣಗಳಲ್ಲಿಯೂ ಸಹ ಇದೇ ಸಮಸ್ಯೆ ಉಂಟಾಗುತ್ತಿದೆ.

ADVERTISEMENT

ಹಾವೇರಿ ಮತ್ತು ರಾಣೆಬೆನ್ನೂರು ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಿಗೆ, ಹಾವೇರಿ ಜಿಲ್ಲಾ ಆಸ್ಪತ್ರೆ ಹಾಗೂ ಎಲ್ಲ ತಾಲ್ಲೂಕುಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗಿರುವ ಐಸೋಲೇಶನ್ ವಾರ್ಡ್‍ಗಳಿಗೆ ದಿನದ 24 ಗಂಟೆ ಪೊಲೀಸ್ ಸಿಬ್ಬಂದಿ ನಿಯೋಜನೆಗೆ ಕ್ರಮ ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಹೆಲ್ತ್‌ ಡೆಸ್ಕ್‌

ಕೊರೊನಾ ವೈರಸ್ ಹರಡದಂತೆ ನಿಯಂತ್ರಣಕ್ಕಾಗಿ ಜಿಲ್ಲಾಧಿಕಾರಿ ಸರ್ಕಾರಿ ಕಚೇರಿಗಳು ಕೈಗೊಳ್ಳಬಹುದಾದ ಮಾರ್ಗಸೂಚಿಗಳನ್ನು ಈಗಾಗಲೇ ಹೊರಡಿಸಿದ್ದು, ಸರ್ಕಾರಿಗೆ ಕಚೇರಿಗೆ ಭೇಟಿ ನೀಡುವ ಸಾರ್ವಜನಿಕರ ಮಾಹಿತಿ ಹಾಗೂ ತಪಾಸಣೆಗಾಗಿ ಜಿಲ್ಲಾಧಿಕಾರಿಗಳ ಕಚೇರಿಯ ಮುಖ್ಯದ್ವಾರದ ಬಳಿ ಹೆಲ್ಪ್‌ಡೆಸ್ಕ್‌ಗಳನ್ನು ಸ್ಥಾಪಿಸಿ ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ.

ಕಚೇರಿಗೆ ಭೇಟಿ ನೀಡುವ ಸಾರ್ವಜನಿಕರ ಮಾಹಿತಿ ಹಾಗೂ ತಪಾಸಣೆ ಕೈಗೊಳ್ಳಲಾಗುತ್ತಿದೆ. ಈ ಮಾದರಿಯಲ್ಲಿ ಹೆಚ್ಚು ಜನರು ಭೇಟಿ ನೀಡುವ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲೂ ಹೆಲ್ತ್‌ ಡೆಸ್ಕ್‌ ಸ್ಥಾಪಿಸಿ ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. ಆರ್.ಟಿ.ಒ ಕಚೇರಿಗೆ ಬರುವ ಸಾರ್ವಜನಿಕರ ಮಾಹಿತಿ, ತಪಾಸಣೆ ಹಾಗೂ ಕೊರೊನಾ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಂದಿನಿಂದ ಚಾಲನಾ ಪ್ರಮಾಣಪತ್ರ ಹಾಗೂ ಕಲಿಕಾ ಪ್ರಾಯೋಗಿಕ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬಯೋಮೆಟ್ರಿಕ್ ಒಳಪಡುವ ಎಲ್ಲ ಕೆಲಸಗಳನ್ನು ಸ್ಥಗಿತಗೊಳಿಸಿ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.