ADVERTISEMENT

ಚಿರತೆ ಆವಸ್ಥಾನದಲ್ಲೇ ಸಿಬ್ಬಂದಿ ‘ಕ್ಯಾಂಪ್’

ಹರ್ಷವರ್ಧನ ಪಿ.ಆರ್.
Published 5 ಜುಲೈ 2017, 7:24 IST
Last Updated 5 ಜುಲೈ 2017, 7:24 IST
ಹಿರೇಕೆರೂರ ತಾಲ್ಲೂಕಿನ ಕಮಲಾಪುರದ ಅರಣ್ಯದಲ್ಲಿ ‘ಕ್ಯಾಂಪ್’ ಮಾಡಿರುವ ಅರಣ್ಯ ಇಲಾಖೆ ಸಿಬ್ಬಂದಿ
ಹಿರೇಕೆರೂರ ತಾಲ್ಲೂಕಿನ ಕಮಲಾಪುರದ ಅರಣ್ಯದಲ್ಲಿ ‘ಕ್ಯಾಂಪ್’ ಮಾಡಿರುವ ಅರಣ್ಯ ಇಲಾಖೆ ಸಿಬ್ಬಂದಿ   

ಹಾವೇರಿ: ಮೀಸಲು ಅರಣ್ಯ ಒತ್ತುವರಿ ಯನ್ನು ತಡೆಗಟ್ಟುವ ಸಲುವಾಗಿ ಜಿಲ್ಲೆಯಲ್ಲಿ ಬೀಡುಬಿಟ್ಟಿರುವ ಅರಣ್ಯ ಇಲಾಖೆ ಸಿಬ್ಬಂದಿ, ಹಿರೇಕೆರೂರು ತಾಲ್ಲೂಕಿನ ಕಮಲಾಪುರ, ತಡಸನಹಳ್ಳಿ ಹಾಗೂ ದೂದಿಹಳ್ಳಿಯಲ್ಲಿನ ಚಿರತೆ ಆವಸ್ಥಾನದ ಪ್ರದೇಶದಲ್ಲೇ  ಮಂಗಳ ವಾರದಿಂದ ‘ಕ್ಯಾಂಪ್‌’ ಹಾಕಿದ್ದಾರೆ.

ಜಿಲ್ಲೆಯಲ್ಲಿ ಮರಗಳನ್ನು ಕಡಿಯುವ, ಅರಣ್ಯ ಪ್ರದೇಶ ಒತ್ತುವರಿ, ಸಾಗುವಳಿ ಮಾಡುವ ಬೆಳವಣಿಗೆಗಳು ದಿನೇ ದಿನೇ ಹೆಚ್ಚುತ್ತಿರುವುದರಿಂದ  ಐದು ಕಡೆ ಕ್ಯಾಂಪ್ ಮಾಡಲು ಅರಣ್ಯ ಇಲಾಖೆ ಯೋಜಿಸಿತ್ತು. ಇಲಾಖಾ ಅನುಮತಿ ಅನ್ವಯ ಮೂರು ಕಡೆಗಳಲ್ಲಿ ಮಂಗಳ ವಾರದಿಂದ ಹಗಲು–ರಾತ್ರಿ ಗಸ್ತು ಹಾಗೂ ‘ಕ್ಯಾಂಪ್’ ಆರಂಭಿಸಿದ್ದಾರೆ. ಈ ಪೈಕಿ ಕಮಲಾಪುರದಲ್ಲಿ ಸೋಮವಾರ ದಿಂದಲೇ ಮೊಕ್ಕಾಂ ಹೂಡಿದ್ದರು.

ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ಅರಣ್ಯಕ್ಕೆ ಹೊಂದಿಕೊಂಡಿರುವ ಈ ಅರಣ್ಯ ಪ್ರದೇಶದ ಬಳಿಯೇ ತುಂಗಾ ಮೇಲ್ದಂಡೆ ಕಾಲುವೆ ಹಾದು ಹೋಗಿದೆ. ಇದರಿಂದ ಸುತ್ತಲ ಪ್ರದೇಶವು ಚಿರತೆಯ ಆವಾಸ ಸ್ಥಾನವಾಗಿದೆ.  ಸುತ್ತಲಿನ ಕಡೂರು ಮತ್ತಿತರ ಗ್ರಾಮಗಳಲ್ಲಿ ಈಚೆಗೆ ಚಿರತೆ ದಾಳಿ ನಡೆಸಿದ್ದು, ಗ್ರಾಮಕ್ಕೆ ಬಂದಿದ್ದ ಐದು ಚಿರತೆಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿದಿತ್ತು. ಕಡೂರು ಗ್ರಾಮದ ಬಳಿ ಈಗಲೂ ಬೋನು ಇರಿಸಲಾಗಿದೆ.

ADVERTISEMENT

ಅರಣ್ಯ ಇಲಾಖೆಯ ಹಿರೇಕೆರೂರು, ಹಾನಗಲ್ ಮತ್ತು ಧಾರವಾಡದ ಸಂಚಾರ ದಳಗಳ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ    ಸಿಬ್ಬಂದಿ ಯನ್ನು ಸ್ಥಳಕ್ಕೆ ನಿಯೋಜಿಸ ಲಾಗಿದೆ.

‘ಈ ಪ್ರದೇಶದಲ್ಲಿ ನಾವು ಪ್ರತಿನಿತ್ಯ ಹಗಲು ಗಸ್ತು ಮಾಡುತ್ತೇವೆ. ಚಿರತೆ ದಾಳಿಯ ಅಪಾಯದ ಕಾರಣ ರಾತ್ರಿ ಹೊರಗೆ ಹೋಗದಂತೆ ಗ್ರಾಮಸ್ಥರಿಗೂ ಸೂಚನೆ ನೀಡುತ್ತೇವೆ. ಆದರೆ,ಈಗ ನಾವೇ ಅನಿವಾರ್ಯವಾಗಿ ಚಿರತೆ ಆವಸ್ಥಾನದಲ್ಲಿ ಬೀಡು ಬಿಡಬೇಕಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಿಬ್ಬಂದಿಯೊಬ್ಬರು ತಿಳಿಸಿದರು.

‘ಜಿಲ್ಲೆಯ ಐದು ಸ್ಥಳಗಳಲ್ಲಿ ‘ಕ್ಯಾಂಪ್’ ಆರಂಭಿಸಲು ಪ್ರಸ್ತಾವ ಕಳುಹಿಸಿದ್ದೆವು. ಈ ಪೈಕಿ ಮೂರು ಕಡೆ ಕ್ಯಾಂಪ್ ಆರಂಭಿಸಿದ್ದೇವೆ. ಸಿಬ್ಬಂದಿ ಕೊರತೆಯ ಕಾರಣ ಸಮೀಪದ ಧಾರವಾಡ ಮತ್ತು ಗದಗದಿಂದಲೂ ಸಿಬ್ಬಂದಿಯನ್ನು ಕರೆಸಿದ್ದೇವೆ’ ಎಂದು ಉಪ  ವಲಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್‌ ವೃಷ್ಣಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.