ADVERTISEMENT

ಪಾರದರ್ಶಕತೆಯತ್ತ ‘ಹಾವೇರಿ ಪೊಲೀಸ್‌’

ಹರ್ಷವರ್ಧನ ಪಿ.ಆರ್.
Published 7 ಜುಲೈ 2017, 9:32 IST
Last Updated 7 ಜುಲೈ 2017, 9:32 IST
ಹಾವೇರಿ ಜಿಲ್ಲಾ ಪೊಲೀಸ್ ವೆಬ್‌ಸೈಟ್
ಹಾವೇರಿ ಜಿಲ್ಲಾ ಪೊಲೀಸ್ ವೆಬ್‌ಸೈಟ್   

ಹಾವೇರಿ: ಜಿಲ್ಲಾ ಪೊಲೀಸ್ ‘ಪಾರದರ್ಶಕತೆ’ ಮತ್ತು ‘ಜನಸ್ನೇಹಿ’ಯತ್ತ ಮಹತ್ವದ ಹೆಜ್ಜೆ ಇರಿಸಿದ್ದು, ‘ಹಾವೇರಿ ಜಿಲ್ಲಾ ಪೊಲೀಸ್ ವೆಬ್‌ಸೈಟ್’  (https://www.haveripolice.co)  ಶುಕ್ರವಾರ ಲೋಕಾರ್ಪಣೆಯಾಗಲಿದೆ.

2017 ಜ.7ರಂದು ಹಾವೇರಿ ಎಸ್ಪಿಯಾಗಿ ಅಧಿಕಾರಿ ಸ್ವೀಕರಿಸಿದ ಸಿ.ವಂಶಿಕೃಷ್ಣ ಅವರು ತಂತ್ರಜ್ಞಾನ ಬಳಕೆ ಮೂಲಕ ಇಲಾಖೆಗೆ  ‘ಪಾರದರ್ಶಕತೆ’ ಹಾಗೂ ‘ಜನಸ್ನೇಹಿ’ ಸ್ವರೂಪ ನೀಡುತ್ತಿದ್ದಾರೆ. ಇದರ ಭಾಗವಾದ ‘ವೆಬ್‌ಸೈಟ್’ ಅನ್ನು ಇಲ್ಲಿನ ಜಿಲ್ಲಾ ಪೊಲೀಸ್ ಕಚೇರಿ ಮುಂಭಾಗದ ಕವಾಯತು ಮೈದಾನದಲ್ಲಿ ಶುಕ್ರವಾರ ನಡೆಯುವ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದ ವೇಳೆ ಪೊಲೀಸ್ ಮಹಾ ನಿರೀಕ್ಷಕ (ಐ.ಜಿ.) ಡಾ.ಎಂ.ಎ .ಸಲೀಂ ಲೋಕಾರ್ಪಣೆ ಮಾಡಲಿದ್ದಾರೆ.

ಈ ವೆಬ್‌ಸೈಟ್‌ನಲ್ಲಿ ಪೊಲೀಸ್ ಧ್ಯೇಯೋದ್ದೇಶಗಳು, ಜಿಲ್ಲೆಯ ಸಂಕ್ಷಿಪ್ತ ಪರಿಚಯ, ಜಿಲ್ಲೆಯ ಪೊಲೀಸ್ ಅಧಿಕಾರಿಗಳ ವಿವರ, ಪ್ರಮುಖ ಕಾರ್ಯಕ್ರಮಗಳ ಫೋಟೊ, ಇಲಾಖೆಯ ಶ್ರೇಣೀಕೃತ ವ್ಯವಸ್ಥೆ, ಇಲಾಖೆಯ ವಿವಿಧ ವಿಭಾಗಗಳು, ಪೊಲೀಸ್ ಉಪವಿಭಾಗ, ವೃತ್ತಗಳು, ಠಾಣೆಗಳು ಸೇರಿದಂತೆ ಎಲ್ಲ ಮಾಹಿತಿ ಹಾಗೂ ಹಿರಿಯ ಅಧಿಕಾರಿಗಳ ಸಂಪರ್ಕದ ಮೊಬೈಲ್ ಹಾಗೂ ದೂರವಾಣಿ ಸಂಖ್ಯೆಗಳು ಇರಲಿವೆ.

ADVERTISEMENT

ಎಸ್ಪಿಗಳ ಮಾಹಿತಿ:
ಜಿಲ್ಲೆ ಆರಂಭದ 24 ಆಗಸ್ಟ್ 1997ರಂದು ಅಧಿಕಾರ ಸ್ವೀಕರಿಸಿದ ಕೆ.ವಿ. ಗಗನದೀಪ್ ಅವರಿಂದ ಪ್ರಸ್ತುತ ಸಿ. ವಂಶಿಕೃಷ್ಣ ತನಕ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (ಎಸ್ಪಿ)ಹೆಸರು ಹಾಗೂ ಅವಧಿಯ ಮಾಹಿತಿಗಳಿವೆ.

ಸಂಚಾರ: ಸಂಚಾರದ ನಿಯಮಾವಳಿಗಳು ಹಾಗೂ ದಂಡಗಳ ವಿವರವೂ ಲಭ್ಯ. ಸಂಚಾರ ನಿಯಮಾವಳಿಯ ಸಂಕೇತ ಹಾಗೂ ಸಂಜ್ಞೆಗಳಿವೆ. ಸಾರ್ವಜನಿಕರಿಗೆ ಅಷ್ಟಾಗಿ ಪರಿಚಿತವಲ್ಲದ ಇಲಾಖೆಯೊಳಗಿನ ವಿವಿಧ ವಿಭಾಗಗಳು ಹಾಗೂ ಅದರ ಕರ್ತವ್ಯದ ಬಗ್ಗೆ ಸ್ಪಷ್ಟ ಉಲ್ಲೇಖಗಳಿವೆ.

ಇಲಾಖೆಯ ಸುತ್ತೋಲೆ, ಆದೇಶಗಳನ್ನೂ ಲಗತ್ತಿಸಲಾಗಿದೆ. ಅಲ್ಲದೇ, ಸಕಾಲ, ಪೊಲೀಸ್‌ ದೂರು ಪ್ರಾಧಿಕಾರದ ಬಗ್ಗೆಯೂ ಮಾಹಿತಿ ಇದೆ. ಇಲಾಖೆಯೊಳಗಿನ ಪ್ರತಿ ವಿಭಾಗಗಳ ಕರ್ತವ್ಯ ಹಾಗೂ ಕಾರ್ಯನಿರ್ವಹಣೆ ಬಗ್ಗೆ ವಿವರಗಳಿವೆ.

ಇದರೊಂದಿಗೆ ಪ್ರತಿನಿತ್ಯ ದಾಖಲಾದ ಕೇಸುಗಳ ಮಾಹಿತಿ, ಪತ್ರಿಕಾ ಪ್ರಕಟಣೆ, ಕಾನೂನು ತಿದ್ದುಪಡಿಗಳು, ತುರ್ತು ಸಹಾಯವಾಣಿಯ ವಿವರಗಳು, ನಾಪತ್ತೆಯಾದವರ ವಿವರ ಇರಲಿವೆ. ಪ್ರತಿ ಠಾಣೆಗಳ ನಕಾಶೆಯನ್ನು ವಿವಿಧ ವರ್ಣಗಳಲ್ಲಿ ನೀಡಲಾಗಿದೆ. ಪೊಲೀಸ್ ಹಾಗೂ ಜಿಲ್ಲೆಯ ಸಮಗ್ರ ಚಿತ್ರಣವನ್ನು ಒಳಗೊಂಡ ‘ವೆಬ್‌ಸೈಟ್’ ಮಾಹಿತಿ ಕಣಜವೂ ಆಗಿದೆ.

‘ನೊಂದವರಿಗೆ ನೇರ ನೆರವು’
ಈ ವೆಬ್‌ಸೈಟ್ ಮೂಲಕ ನೀವು ನಿಮ್ಮ ಪೊಲೀಸ್ ಠಾಣೆ ಹಾಗೂ ವಾರ್ಡ್ ವ್ಯಾಪ್ತಿಗೆ ನಿಯೋಜಿಸಲಾದ ಗಸ್ತು ಪೊಲೀಸ್ ಹಾಗೂ ಅವರ ಮೊಬೈಲ್ ಸಂಖ್ಯೆಯನ್ನು ಪಡೆಯಬಹುದು. ಅವರ ಮೇಲಿನ ಉಸ್ತುವಾರಿ ಅಧಿಕಾರಿ ಮಾಹಿತಿಯೂ ಲಭ್ಯ.

ಸ್ಥಳೀಯವಾಗಿ ನಿಮ್ಮ ದೂರುಗಳನ್ನು ನಿರಾಕರಿಸಿದರೂ, ನಿಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆ ನೋಂದಾಯಿಸುವ ಮೂಲಕ ನೇರವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಬಹುದು.

* *

ನಗರದ ಸಿ.ಸಿ. ಟಿವಿ ಕ್ಯಾಮೆರಾ ವ್ಯವಸ್ಥೆ ಬಳಸಿಕೊಂಡು, ಕಾನೂನು ಉಲ್ಲಂಘಿಸಿದವರ ಮೇಲೆ ದಂಡ ವಿಧಿಸಿ ಮನೆಗೆ ನೋಟಿಸ್ ಕಳುಹಿಸುವ ವ್ಯವಸ್ಥೆ ಬರಲಿದೆ
ಸಿ. ವಂಶಿಕೃಷ್ಣ
ಎಸ್ಪಿ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.