ADVERTISEMENT

ಮದುವೆ ಕರೆಯೋಲೆಯಲ್ಲಿ ‘ಮತದಾನ ಜಾಗೃತಿ’

ಮದುವೆಗೂ ಬನ್ನಿ, ಪ್ರಾಮಾಣಿಕರನ್ನು ಆರಿಸಿ ತನ್ನಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 8:28 IST
Last Updated 17 ಏಪ್ರಿಲ್ 2018, 8:28 IST
ಮತದಾರರ ಗುರುತಿನ ಚೀಟಿ ಮಾದರಿಯ ಮದುವೆಯ ಆಹ್ವಾನ ಪತ್ರಿಕೆ
ಮತದಾರರ ಗುರುತಿನ ಚೀಟಿ ಮಾದರಿಯ ಮದುವೆಯ ಆಹ್ವಾನ ಪತ್ರಿಕೆ   

ಹಾವೇರಿ: ಮತದಾನ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ‘ಮತದಾರರ ಗುರುತಿನ ಚೀಟಿ’ ಮಾದರಿಯಲ್ಲಿ ತಮ್ಮ ಮದುವೆ ಕರೆಯೋಲೆ (ಆಮಂತ್ರಣ ಪತ್ರಿಕೆ) ಮುದ್ರಿಸಿರುವ ಹಾನಗಲ್ ತಾಲ್ಲೂಕಿನ ಉಪ್ಪಣಸಿಯ ಸಿದ್ದಪ್ಪ, ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಎಂ.ವಿ. ಮತ್ತು ಎಸ್ಪಿ ಕೆ.ಪರಶುರಾಂ ಅವರಿಗೆ ಸೋಮವಾರ ಕರೆಯೋಲೆ ನೀಡಿ ಆಹ್ವಾನಿಸಿದರು.

ಗೋವಾದಲ್ಲಿ ರೈಲ್ವೆ ಇಲಾಖೆಯ ತಾಂತ್ರಿಕ ಸಿಬ್ಬಂದಿ ಆಗಿರುವ ಸಿದ್ದಪ್ಪ, ಏ.27ರಂದು ಉಪ್ಪಣಸಿಯಲ್ಲಿ ರಾಣೆಬೆನ್ನೂರು ತಾಲ್ಲೂಕಿನ ಕಸುಗೂರಿನ ಜ್ಯೋತಿ ಜೊತೆ ದಾಂಪತ್ಯಕ್ಕೆ ಕಾಲಿಡಲಿದ್ದಾರೆ.

‘ದೊಡ್ಡ ಚಿಕ್ಕಣ್ಣನವರ ಬಂಧುಗಳ ಮದುವೆ ಸಂಭ್ರಮ’ ಎಂಬ ತಲೆಬರಹದಡಿ, ಮತದಾರರ ಗುರುತಿನ ಸಂಖ್ಯೆ ಮಾದರಿಯಲ್ಲಿ ‘ಎಸ್.ಜೆ.ಎಂ.ಆರ್.ಜಿ. 27042018’(ಸಿದ್ದಪ್ಪ ಜ್ಯೋತಿ ಮ್ಯಾರೇಜ್ 27 ಏಪ್ರಿಲ್ 2018) ಎಂದು ಮುದ್ರಿಸಿದ್ದಾರೆ. ಮತದಾರರ ಹೆಸರಿನ ಸ್ಥಳದಲ್ಲಿ ವಧು–ವರರ ಹೆಸರು ಹಾಗೂ ಜನ್ಮ ದಿನಾಂಕದ ಸ್ಥಳದಲ್ಲಿ ಮದುವೆ ದಿನಾಂಕ ಮುದ್ರಿಸಿದ್ದಾರೆ.

ADVERTISEMENT

ಉಳಿದಂತೆ ಮದುವೆ ನಡೆಯುವ ಸ್ಥಳ ಹಾಗೂ ಕುಟುಂಬದ ಹೆಸರುಗಳನ್ನು ಪ್ರಕಟಿಸಿದ್ದು, ಕೆಳಗಡೆ ಮತದಾನ ಜಾಗೃತಿಯ ಜೊತೆಗೆ, ‘ಜೀವ ಉಳಿಸಲು ರಕ್ತದಾನ’, ‘ದೇಶ ಕಟ್ಟಲು ಮತದಾನ’, ‘ಮತದಾನ ಮಹಾದಾನ’, ‘ಭವಿಷ್ಯದ ರಾಷ್ಟ್ರ ನಿರ್ಮಾಣಕ್ಕೆ ಕಾರಣ’ ಹಾಗೂ ‘ಮತ ಮಾರಿಕೊಳ್ಳುವ ಹೇಡಿಗಳು ನಾವಲ್ಲ, ಮತವೆಂಬ ಅಸ್ತ್ರ ಬಳಿ ಪ್ರಾಮಾಣಿಕರನ್ನು ಆರಿಸುವ ಪ್ರಬುದ್ಧರು ನಾವು’ ಎಂಬ ಮತದಾರರ ಜಾಗೃತಿ ಸಂದೇಶಗಳನ್ನೂ ಮುದ್ರಿಸಿದ್ದಾರೆ.

‘ಎಲ್ಲರೂ ಮದುವೆಗೆ ತಪ್ಪದೇ ಬನ್ನಿ, ಮತದಾನ ಕಡ್ಡಾಯವಾಗಿ ಮಾಡಿ’ ಎಂಬ ಮನವಿ ಸಾಲುಗಳೂ ಇದ್ದು, ವಿನ್ಯಾಸದಲ್ಲಿ ಮತದಾರರ ಗುರುತಿನ ಚೀಟಿಯಂತಿರುವ ‘ಕರೆಯೋಲೆ’ಯು ಬಂಧು ಮಿತ್ರರನ್ನು ಕಲ್ಯಾಣ ಮಂಟಪದ ಜೊತೆಗ ಮತಗಟ್ಟೆಗೂ ಕರೆಯುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.