ADVERTISEMENT

ವಿದ್ಯಾರ್ಥಿಗಳಿಗೆ ಎಸ್‌ಬಿಐನಿಂದ ಸೋಲಾರ್ ದೀಪದ ಕೊಡುಗೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2012, 5:40 IST
Last Updated 2 ಜೂನ್ 2012, 5:40 IST
ವಿದ್ಯಾರ್ಥಿಗಳಿಗೆ ಎಸ್‌ಬಿಐನಿಂದ ಸೋಲಾರ್ ದೀಪದ ಕೊಡುಗೆ
ವಿದ್ಯಾರ್ಥಿಗಳಿಗೆ ಎಸ್‌ಬಿಐನಿಂದ ಸೋಲಾರ್ ದೀಪದ ಕೊಡುಗೆ   

ಮುಗಳಿ (ಹಾವೇರಿ ಜಿಲ್ಲೆ): ಕೃಷಿ ಸಾಲವನ್ನು ಸೂಕ್ತ ಸಮಯದಲ್ಲಿ ಮರುಪಾವತಿಸಿದ ಹಾವೇರಿ ಜಿಲ್ಲೆ ಶಿಗ್ಗಾಂವ ತಾಲ್ಲೂಕಿನ ಮುಗಳಿ ಗ್ರಾಮಕ್ಕೆ ವಿಶಿಷ್ಟ ರೀತಿಯಲ್ಲಿ ನೆರವಾಗಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನಿರ್ಧರಿಸಿದೆ.

ಮುಗಳಿ ಗ್ರಾಮದಲ್ಲಿ 100ರಿಂದ 120ರಷ್ಟು ರೈತರಿದ್ದು, ಇವರೆಲ್ಲ ಬ್ಯಾಂಕಿಂಗ್‌ಗಾಗಿ ಎಸ್‌ಬಿಐ ಶಿಗ್ಗಾಂವ ಶಾಖೆಯನ್ನು ಅವಲಂಬಿಸಿದ್ದಾರೆ. ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದರೂ 2010-11ನೇ ಸಾಲಿನಲ್ಲಿ ಪಡೆದ ಸಾಲವನ್ನು ಇಲ್ಲಿನ ರೈತರು ಸೂಕ್ತ ಸಮಯದಲ್ಲಿ ಮರುಪಾವತಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಎಸ್‌ಬಿಐ ಈ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕದ ಶಾಲೆಗೆ ಸೌರ ದೀಪ ಮತ್ತು ಎಲ್ಲ ಎಂಟು ತರಗತಿ ಕೊಠಡಿಗಳಿಗೆ ಗುಣಮಟ್ಟದ ಡೆಸ್ಕ್ ನೀಡಿದೆ.

ಶಾಲೆಯ ಎಲ್ಲ 268 ವಿದ್ಯಾರ್ಥಿಗಳಿಗೆ ಎಸ್‌ಬಿಐ ತಲಾ ಒಂದು ಸೋಲಾರ್ ದೀಪ ವಿತರಿಸಿದೆ. ಅಲ್ಲದೆ ಶಾಲೆಯ ಎಲ್ಲ ಎಂಟು ತರಗತಿಗಳಿಗೆ ಡೆಸ್ಕ್ ನೀಡಿದೆ. ಇತ್ತೀಚೆಗೆ ಶಾಲಾ ಪರಿಸರದಲ್ಲಿ ಹಾವೇರಿ ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ ಅವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೋಲಾರ್ ದೀಪ ಮತ್ತು ಡೆಸ್ಕ್ ವಿತರಿಸಲಾಯಿತು.
 
ಬ್ಯಾಂಕ್‌ನ ಬೆಂಗಳೂರು ವೃತ್ತದ ಮುಖ್ಯ ಮಹಾ ಪ್ರಬಂಧಕ ಅಶ್ವಿನಿ ಮೆಹ್ರಾ, ಮಹಾಪ್ರಬಂಧಕ ಕೆ.ಎಂ. ತ್ರಿವೇದಿ, ಉಪ ಮಹಾಪ್ರಬಂಧಕ ವೇಣುಗೋಪಾಲ ರೆಡ್ಡಿ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.