ಅಕ್ಕಿಆಲೂರ: ಸಾರ್ವತ್ರಿಕ ಚುನಾವಣೆ ವಿಧಾನಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಸಮೀಪದ ಅರಳೇಶ್ವರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಬುಧವಾರ ಶಾಲಾ ಚುನಾವಣೆ ನಡೆಸುವ ಮೂಲಕ ಚುನಾವಣೆಯ ಕಾರ್ಯ ವಿಧಾನಗಳನ್ನು ಪ್ರಾಯೋಗಿಕವಾಗಿ ತಿಳಿಸಲಾಯಿತು.
ಅಧಿಸೂಚನೆ ಪ್ರಕಟಣೆ, ನೀತಿ ಸಂಹಿತೆ, ಉಮೇದುವಾರಿಕೆಯ ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂದಕ್ಕೆ ಪಡೆಯುವುದು, ಪ್ರಚಾರ, ನಿಷೇದಾಜ್ಞೆ, ಮತದಾನ, ಮತ ಎಣಿಕೆ, , ವಿಜಯೋತ್ಸವ, ಪ್ರಮಾಣ ಪತ್ರ ವಿತರಣೆ, ಪ್ರಮಾಣ ವಚನ ಬೋಧನೆ... ಹೀಗೆ ಒಂದು ಸಾರ್ವತ್ರಿಕ ಚುನಾವಣೆ ನಡೆದ ಸಂದರ್ಭದಲ್ಲಿನ ಎಲ್ಲ ಹಂತಗಳೂ ಇಲ್ಲಿ ನಡೆದು ಚುನಾವಣೆ ಬಗೆಗೆ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ತಿಳುವಳಿಕೆ ಮೂಡಿಸಲಾಯಿತು.
ಪ್ರಧಾನ ಮಂತ್ರಿ ಸೇರಿದಂತೆ ಶಾಲಾ ಸಂಸತ್ತಿನ ವಿವಿಧ ಒಟ್ಟು 11 ಖಾತೆಗಳಿಗೆ 17 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದರು. ನಿಗದಿತ ಠೇವಣಿಯೊಂದಿಗೆ ಉಮೇದುವಾರಿಕೆಯ ನಾಮಪತ್ರಗಳು ಸಲ್ಲಿಕೆಯಾದವು. ಕೆಲವು ಅಭ್ಯರ್ಥಿಗಳ ಮನಒಲಿಸಿ ನಾಮಪತ್ರ ವಾಪಸ್ ಪಡೆಸುವಲ್ಲಿ ಇನ್ನುಳಿದ ಅಭ್ಯರ್ಥಿಗಳು ಯಶಸ್ವಿಯಾಗುವ ಮೂಲಕ ಜಾಣ್ಮೆ ಮೆರೆದರು.
ನಾಮಪತ್ರ ವಾಪಸ್ ಪಡೆಯುವ ವಿಧಾನ ಮುಕ್ತಾಯಗೊಂಡ ಬಳಿಕ ಪ್ರಚಾರ ಕಾರ್ಯದಲ್ಲಿ ಧುಮುಕಿದ ಅಭ್ಯರ್ಥಿಗಳು ಬಣ್ಣ ಬಣ್ಣದ ಮಾತುಗಳೊಂದಿಗೆ ತಮಗೆ ಮತ ಚಲಾಯಿಸುವಂತೆ ಮತದಾರರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದ ದೃಶ್ಯ ಕಂಡುಬಂದಿತು. ಕೆಲವು ಅಭ್ಯರ್ಥಿಗಳು ಒಂದು ಹೆಜ್ಜೆ ಮುಂದೆ ಹೋಗಿ ಕರಪತ್ರ ಮುದ್ರಿಸಿ ರಾಜಕೀಯ ಖದರು ಮೆರೆದರು.
ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಶಾಂತಯುತ ಮತದಾನಕ್ಕೆ ಅವಕಾಶ ಕಲ್ಪಿಸಲು 5 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಅಭ್ಯರ್ಥಿಗಳ ವಿವರಗಳುಳ್ಳ ಪತ್ರವನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ಸಾಲಾಗಿ ನಿಂತು ಬೆರಳಿಗೆ ಶಾಹಿ ಹಚ್ಚಿಸಿಕೊಂಡು ಮತ ಒಲಾಯಿಸುವಲ್ಲಿ ವಿದ್ಯಾರ್ಥಿಗಳು ಹೊಸ ಹುಮ್ಮಸ್ಸಿನಿಂದ ಭಾಗವಹಿಸಿದ್ದು ಕಂಡು ಬಂದಿತು.
ಕೆಲವು ವಿದ್ಯಾರ್ಥಿಗಳು ಸಹಾಯಕ ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಗಮನ ಸೆಳೆದರೆ, ಇನ್ನು ಕೆಲವು ವಿದ್ಯಾರ್ಥಿಗಳು ಮತಗಟ್ಟೆ ಹಾಗೂ ಏಣಿಕೆ ಕೇಂದ್ರಗಳಲ್ಲಿ ಏಜೆಂಟ್‌ರಾಗಿ ಕೆಲಸ ನಿರ್ವಹಿಸಿದ್ದು ವಿಶೇಷವೆನಿಸಿತು.
ಕೆಲವು ವಿದ್ಯಾರ್ಥಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಮತ ಎಣಿಕೆ ಕಾರ್ಯ ಮುಕ್ತಾಯಗೊಂಡು ಫಲಿತಾಂಶ ಪ್ರಕಟಗೊಂಡ ಸಂದರ್ಭದಲ್ಲಿ ವಿಜಯೋತ್ಸವ ಆಚರಣೆಯ ಸಡಗರದಲ್ಲಿ ವಿಜೇತ ಅಭ್ಯರ್ಥಿಗಳು ನಿರತರಾಗಿದ್ದು ಕಾಣಸಿಕ್ಕಿತು. ಶಾಲೆಯ ಮುಖ್ಯಶಿಕ್ಷಕ ಟಿ.ಶಿವಕುಮಾರ ಮುಖ್ಯ ಚುನಾವಣಾಧಿಕಾರಿಯಾಗಿ, ಶಿಕ್ಷಕರಾದ ಬಿ.ಎಂ.ಉದ್ದೇಗೌಡ್ರ, ಪ್ರಭಾ ಪಾಂಡುರಂಗ, ಅಕ್ಷಯಾ ಗುನಗಾ, ದೀಪಾ ಜಾಂಬೇಕರ, ರೇಷ್ಮಾ ನದಾಫ್ ಮತಗಟ್ಟೆ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.