ADVERTISEMENT

ಹಬ್ಬದಲ್ಲೂ ಕಾಣದ ನಿರೀಕ್ಷಿತ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 6:56 IST
Last Updated 23 ಅಕ್ಟೋಬರ್ 2017, 6:56 IST

ಹಾವೇರಿ: ದೀಪಾವಳಿ ಬಂದರೆ ನಗರದ ಮಾರುಕಟ್ಟೆಯಲ್ಲಿ ‘ಲಕ್ಷ್ಮಿ’ ಪೂಜೆಯ ಸಡಗರ. ಎಲ್ಲ ಉದ್ಯಮ, ವಹಿವಾಟುಗಳು ರಂಗೇರುತ್ತವೆ. ಆದರೆ, ಈ ಬಾರಿ ಮಾತ್ರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬರ, ನೋಟು ರದ್ದತಿ, ಜಿಎಸ್‌ಟಿ ಮತ್ತಿತರ ಕಾರಣಗಳಿಂದ ಸ್ವಲ್ಪ ಮಂಕು ಕವಿದಿತ್ತು. ಸಂಪ್ರದಾಯಕ್ಕೆ ಕಟ್ಟುಬಿದ್ದು ಆಚರಣೆಗಾಗಿ ಖರೀದಿಗಳು ನಡೆದಿವೆ. ಹೊರತು ಪಡಿಸಿ, ಎಂದಿನ ಅಬ್ಬರ ಇರಲಿಲ್ಲ.

ನಾಗರ ಪಂಚಮಿ ಬಳಿಕ ಹಬ್ಬಗಳು ಶುರು. ಆಗ ಖರೀದಿಯೂ ಹೆಚ್ಚುವ ಕಾರಣ ಮಾರುಕಟ್ಟೆ ಚೇತರಿಸಿಕೊಳ್ಳಲು ಶುರುವಾಗುತ್ತದೆ. ಇಲ್ಲಿನ ಮಾರುಕಟ್ಟೆ ಕೃಷಿಯನ್ನು ಅವಲಂಬಿಸಿದೆ. ಈ ಬಾರಿ ಮುಂಗಾರಿನ ಆರಂಭಿಕ ಮೂರು ತಿಂಗಳು ಉತ್ತಮ ಮಳೆಯಾಗದ ಪರಿಣಾಮ ಮಾರುಕಟ್ಟೆಯೂ ಕಳೆಗುಂದಿತ್ತು. ಇತ್ತ ರೈತರು ಅಲ್ಪಸ್ವಲ್ಪ ಬೆಳೆದ ಬೆಳೆಯೂ ಸೆಪ್ಟೆಂಬರ್‌ನ ಭಾರಿ ಮಳೆಗೆ ಹಾನಿಯಾಯಿತು. ಇದು ದಸರಾ ಹಾಗೂ ದೀಪಾವಳಿ ಮಾರಕಟ್ಟೆಯ ಮೇಲೆ ನೇರ ಪರಿಣಾಮ ಬೀರಿದೆ.

ಹಬ್ಬಗಳಲ್ಲಿ ರಿಯಾಯಿತಿ, ಉಡುಗೊರೆ, ವಿನಾಯಿತಿ, ದರ ಕಡಿತ ಮಾರಾಟ, ಲಾಟರಿ, ಒಂದಕ್ಕೊಂದು ಉಚಿತ ಮತ್ತಿತರ ಕೊಡುಗೆಗಳ ಮೂಲಕ ಗ್ರಾಹಕರನ್ನು ಆಕರ್ಷಿಸಲಾಗುತ್ತದೆ. ಈ ಬಾರಿಯೂ ವಿವಿಧ ಮಳಿಗೆಗಳು, ಅಂಗಡಿಗಳು, ವರ್ತಕರು ಇಂತಹ ತಂತ್ರಗಳನ್ನು ಅನುಸರಿಸಿದ್ದರು. ವಿದ್ಯುತ್‌ ದೀಪದ ಅಲಂಕಾರ, ಜಾಹೀರಾತು ಫಲಕ, ವಿವಿಧ ಶೃಂಗಾರ ಮಾಡಿ ಅಲಂಕರಿಸಿದ್ದರು. ಆದರೂ ನಿರೀಕ್ಷಿತ ವ್ಯಾಪಾರ ಕೈ ಹಿಡಿಯಲಿಲ್ಲ.

ADVERTISEMENT

‘ಈ ಬಾರಿ ದೀಪಾವಳಿ ಮಾರುಕಟ್ಟೆಯು ಶೇ 40ಕ್ಕೂ ಹೆಚ್ಚು ಕುಸಿತ ಕಂಡಿದೆ. ಹಬ್ಬದಲ್ಲಿ ರೈತಾಪಿ ಜನತೆ ಹೆಚ್ಚಿನ ಖರೀದಿ ಮಾಡುತ್ತಾರೆ. ಜನರ ಕೈಯಲ್ಲಿ ಹಣವಿಲ್ಲದ ಕಾರಣ ಮಿತಿಯೊಳಗೆ ಖರೀದಿ ಮಾಡಿದ್ದಾರೆ’ ಎಂದು ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್ ಮಳಿಗೆಯ ವಿಜಯಕುಮಾರ್ ಗೊಡಚಿ ತಿಳಿಸಿದರು.

‘ಹಾವೇರಿ ನಗರ ಪ್ರದೇಶವಾದರೂ, ಕೃಷಿ ಆಧರಿತ ಮಾರುಕಟ್ಟೆ. ಕಳೆದ ವರ್ಷಾಂತ್ಯದಲ್ಲಿ ನೋಟು ರದ್ಧತಿಗೆ ಮಾರುಕಟ್ಟೆ ಕುಸಿತ ಕಂಡಿತು. ಸಾಮಾನ್ಯ ಜನತೆ ಪರದಾಡಿದರು. ಚೇತರಿಸಿಕೊಳ್ಳುವ ಮೊದಲೇ ಜಿ.ಎಸ್.ಟಿ ಜಾರಿಗೊಂಡಿತು. ಈ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಹೀಗಾಗಿ ಲೆಕ್ಕ ಪರಿಶೋಧಕರು, ಉದ್ಯಮಿಗಳು, ವಿತರಕರು ಸೇರಿದಂತೆ ಎಲ್ಲರಿಗೂ ಗೊಂದಲ ಉಂಟಾಗಿದೆ. ಇದೂ ಮಾರುಕಟ್ಟೆ ಮೇಲೆ ಹೊಡೆತ ನೀಡಿದೆ’ ಎಂದು ಉದ್ಯಮಿ ಶಿವಪ್ರಸಾದ್ ಬಸೇಗಣ್ಣಿ ಅಭಿಪ್ರಾಯ ವ್ಯಕ್ತಪಡಿಸಿದರು.

‘ಈ ಬಾರಿ ಮುಂಗಾರು ಮಳೆ ವಿಳಂಬವಾಗಿದೆ. ದೀಪಾವಳಿ ವೇಳೆಗೆ ಇಳುವರಿ ರೈತರ ಕೈಗೆ ಬಂದಿಲ್ಲ. ಇದರಿಂದಾಗಿ ವಾಹನ ಖರೀದಿ ಕಡಿಮೆಯಾಗಿದೆ. ಅಲ್ಲದೇ, ಡಿಸೆಂಬರ್‌ನಲ್ಲಿ ಇಳುವರಿ ಬಂದು, ಕೈಗೆ ಹಣ ಬಂದರೂ ವಾಹನ ಖರೀದಿಗೆ ಮುಂದಾಗುವುದಿಲ್ಲ. ಹೊಸ ವರ್ಷದಲ್ಲಿ ನೋಂದಣಿ ಮಾಡಿಸಲು ಕಾಯುತ್ತಾರೆ. ಈ ಕಾರಣದಿಂದಾಗಿ ವಾಹನ ಮಾರುಕಟ್ಟೆಯು ಜನವರಿ ಬಳಿಕ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ’ ಎನ್ನುತ್ತಾರೆ ಹೀರೊ ಶೋ ರೂಂನ ರಾಹುಲ್ ದೇಸಾಯಿ.

ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್, ಗೃಹೋಪಯೋಗಿ ವಸ್ತುಗಳು, ವಾಹನಗಳ ಖರೀದಿ ಇತ್ಯಾದಿಗಳ ಮೇಲೆ ಪರಿಣಾಮ ಬೀರಿದೆ. ಆದರೆ, ಸಾಂಪ್ರದಾಯಿಕ ಹಾಗೂ ಆಚರಣೆಗಳಿಗೆ ಮೊರೆ ಹೋದ ಜನತೆ ಬಟ್ಟೆ ಖರೀದಿ, ದವಸ–ಧಾನ್ಯ , ಪಟಾಕಿ ಮತ್ತಿತರ ಖರೀದಿ ಮಾಡಿದ್ದಾರೆ. ಹೀಗಾಗಿ ದೈನಂದಿನ ಮಾರುಕಟ್ಟೆ ಎಂದಿನಂತೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.