ಶಿಗ್ಗಾವಿ: ನಮ್ಮಲ್ಲಿರುವ ಪ್ರತಿಷ್ಠೆಗಳನ್ನು ದೂರ ಮಾಡುವ ಜೊತೆಗೆ ಸಮಾಜದ ಹಿತದೃಷ್ಠಿಯನ್ನು ಅರಿತು ಕೆಲಸ ಮಾಡಿದಾಗ ಮಾತ್ರ ಬಂಜಾರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಅಲ್ಲದೆ ಸರ್ವರಲ್ಲಿ ಸಂಘಟನಾತ್ಮಕ ಮನೋಭಾವನೆ ಬೆಳೆಯಬೇಕು ಎಂದು ಬಂಕಾಪುರ ಪುರಸಭೆ ಮುಖ್ಯಾಧಿಕಾರಿ ಡಿ.ಎನ್. ಧರಣೇಂದ್ರಕುಮಾರ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಬೆಂಗಳೂರು ಮತ್ತು ಆಲ್ ಇಂಡಿಯಾ ಬಂಜಾರ ಸೇವಾ ಸಂಘ ಹಾವೇರಿ ಇವರ ಸಹಯೋಗದಲ್ಲಿ ನಡೆದ ತಾಂಡಾಗಳ ನಿವಾಸಿಗಳಿಗೆ ಅರಿವು ಮತ್ತು ಜಾಗೃತಿ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.
ಬಂಜಾರ ಸಮಾಜ ಆರ್ಥಿಕವಾಗಿ ಪ್ರಬಲವಿಲ್ಲದ ಕಾರಣ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಪಾಲಕರು ಜಾಗೃತರಾಗಿ ಮಕ್ಕಳಿಗೆ ಶಿಕ್ಷಣ ನೀಡಿದಾಗ ಮಾತ್ರ ಭವಿಷ್ಯತ್ವದಲ್ಲಿ ಸಮಾಜ ಬೆಳವಣಿಗೆಯಾಗಲು ಸಾಧ್ಯವಿದೆ ಎಂಬ ಅರಿಕೆ ಮೂಡಬೇಕಾಗಿದೆ. ಅಲ್ಲದೆ ಸರ್ಕಾರದ ಪ್ರತಿಯೊಂದು ಇಲಾಖೆಗಳ ಮೂಲಕ ಸಮಾಜಕ್ಕೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ತಿಳಿದುಕೊಂಡು ಅವುಗಳ ಸದುಪಯೋಗ ಪಡೆಯಲು ಮುಂದಾಗಬೇಕು ಎಂದರು.
ಜಿಲ್ಲಾ ಕಾರ್ಯದರ್ಶಿ ಆರ್.ಎಂ.ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಂಜಾತ ಸಮಾಜದಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಉದ್ಯೋಗದಲ್ಲಿದ್ದಾರೆ. ಇನ್ನುಳಿದ ಸಾವಿರಾರು ಸಂಖ್ಯೆಯಷ್ಟು ಜನರು ಕೂಲಿ, ಕೃಷಿ ಕಾರ್ಮಿಕರಾಗಿ ಕಷ್ಟಕರವಾದ ಜೀವನ ನಡೆಸುತ್ತಿದ್ದಾರೆ. ಅಂತವರಿಗೆ ಆರ್ಥಿಕ ನೆರವು ನೀಡುವದು ಅವಶ್ಯವಾಗಿದೆ. ಬಂಜಾರ ಸಮುದಾಯದ ಜನರಿಗೆ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ನಡೆಸಿದೆ ಎಂದರು.
ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಮ್.ಸುಂಕದ ಅಧ್ಯಕ್ಷತೆ ವಹಿಸಿದ್ದರು.ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಹರ್ಜಪ್ಪ ಲಮಾಣಿ ಮಾತನಾಡಿದರು.
ತಾಲ್ಲೂಕು ಬಂಜಾರ ಸಂಘದ ಅಧ್ಯಕ್ಷ ದ್ಯಾಮಲಪ್ಪ ಲಮಾಣಿ, ಬಂಜಾರವಾಣಿ ವಾರ ಪತ್ರಿಕೆ ಸಂಪಾದಕ ಮಲ್ಲೇಶ ನಾಯ್ಕ್, ಎನ್.ಡಿ. ಮರಿಗೌಡ್ರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಲ್.ಎಸ್.ಭಜಂತ್ರಿ ಹಾಗೂ ತಾಲ್ಲೂಕಿನ ವಿವಿಧ ತಾಂಡಾಗಳ ಮುಖಂಡರು ಉಪಸ್ಥಿತರಿದ್ದರು.
ರುದ್ರಪ್ಪ ಲಮಾಣಿ ಪ್ರಾರ್ಥಿಸಿದರು. ಸುಧೀರ ಲಮಾಣಿ ಸಾಗತಿಸಿದರು. ಎಲ್.ಎಸ್.ಲಮಾಣಿ ನಿರೂಪಿಸಿದರು. ಛತ್ರಪ್ಪ ಲಮಾಣಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.