ADVERTISEMENT

163 ಸದಸ್ಯ ಸ್ಥಾನಕ್ಕೆ ಸ್ಪರ್ಧೆ: ಜಿಲ್ಲೆಯ 63 ಕ್ಷೇತ್ರಗಳಲ್ಲಿ ಸ್ಪರ್ಧೆ

ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ವೇಳಾಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 14:32 IST
Last Updated 12 ಮಾರ್ಚ್ 2021, 14:32 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಹಾವೇರಿ: ಜಿಲ್ಲೆಯ 12 ಗ್ರಾಮ ಪಂಚಾಯಿತಿಗಳ 63 ಕ್ಷೇತ್ರಗಳ 163 ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಚುನಾವಣಾ ವೇಳಾ ಪಟ್ಟಿ ಪ್ರಕಟಿಸಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಜಿಲ್ಲೆಯ ಎಂಟು ತಾಲ್ಲೂಕುಗಳ223 ಗ್ರಾಮ ಪಂಚಾಯತಿಗಳ ಪೈಕಿ 209 ಗ್ರಾಮ ಪಂಚಾಯತಿಗಳಿಗೆ ಈಗಾಗಲೇ ಸಾರ್ವತ್ರಿಕ ಚುನಾವಣೆ ನಡೆಸಲಾಗಿದೆ. ಉಳಿದ 14 ಗ್ರಾಮ ಪಂಚಾಯಿತಿಗಳ ಪೈಕಿ ಮೇ-2021ಕ್ಕೆ ಅವಧಿ ಮುಕ್ತಾಯಗೊಳ್ಳುವ ರಾಣೆಬೆನ್ನೂರು ತಾಲ್ಲೂಕಿನ 6, ಹಾನಗಲ್ ತಾಲ್ಲೂಕಿನ 3, ಬ್ಯಾಡಗಿ ತಾಲ್ಲೂಕಿನ 2 ಹಾಗೂ ಶಿಗ್ಗಾವಿ ತಾಲ್ಲೂಕಿನ 1 ಸೇರಿ ಒಟ್ಟು 12 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ.

ರಾಣೆಬೆನ್ನೂರು ತಾಲ್ಲೂಕಿನ 27-ಅಂತರವಳ್ಳಿ, 28-ಕುಪ್ಪೇಲೂರ, 30-ಮಾಳನಾಯಕನಹಳ್ಳಿ, 31-ಸುಣಕಲ್ಲಬಿದರಿ, 32-ತುಮ್ಮಿನಕಟ್ಟಿ ಹಾಗೂ 33-ಜೋಯಿಸರಹಳ್ಳಿ ಗ್ರಾ.ಪಂ.ನ 33 ಕ್ಷೇತ್ರಗಳ 83 ಸದಸ್ಯ ಸ್ಥಾನಗಳಿಗೆ, ಹಾನಗಲ್ ತಾಲ್ಲೂಕಿನ 10-ಹುಲ್ಲತ್ತಿ, 38-ಹಾವಣಗಿ ಹಾಗೂ 40-ಕೂಡಲ ಗ್ರಾ.ಪಂ.ನ 15 ಕ್ಷೇತ್ರಗಳ 41 ಸದಸ್ಯ ಸ್ಥಾನಗಳಿಗೆ, ಬ್ಯಾಡಗಿ ತಾಲ್ಲೂಕಿನ 5-ತಡಸ ಹಾಗೂ 8-ಕಾಗಿನೆಲೆ ಗ್ರಾ.ಪಂ.ಗಳ 10 ಕ್ಷೇತ್ರಗಳ 30 ಸದಸ್ಯ ಸ್ಥಾನಗಳಿಗೆ ಹಾಗೂ ಶಿಗ್ಗಾವಿ ತಾಲ್ಲೂಕಿನ 15-ಹನುಮರಹಳ್ಳಿ ಗ್ರಾ.ಪಂ.ನ 5 ಕ್ಷೇತ್ರಗಳ 9 ಸದಸ್ಯ ಸ್ಥಾನಗಳಿಗೆ ಚುನಾವಣೆ ಜರುಗಲಿದೆ.

ADVERTISEMENT

ಚುನಾವಣೆ ಕಾರ್ಯಕ್ಕೆ ಜಿಲ್ಲೆಯಲ್ಲಿ 12 ಚುನಾವಣಾಧಿಕಾರಿಗಳನ್ನು ಹಾಗೂ 12 ಸಹಾಯಕ ಚುನಾವಣಾಧಿಕಾರಿಗಳನ್ನು ಈಗಾಗಲೇ ನೇಮಕ ಮಾಡಿ ಸೂಕ್ತ ತರಬೇತಿ ನೀಡಲಾಗಿದೆ. ಈ ಚುನಾವಣೆಯು ಪಕ್ಷರಹಿತ ಚುನಾವಣೆಯಾಗಿರುತ್ತದೆ. ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿಗಳನ್ನು ಮುದ್ರಿಸಲಾಗುತ್ತಿದ್ದು, ಸಾರ್ವಜನಿಕರ ಪರಿಶೀಲನೆಗೆ ಇಟ್ಟು ಅಂತಿಮಗೊಳಿಸಲಾಗಿದೆ.

ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆಯ ಪ್ರಯುಕ್ತ ಮಾದರಿ ನೀತಿಸಂಹಿತೆಯು ಚುನಾವಣೆ ನಡೆಯುವ ತಾಲ್ಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾರ್ಚ್‌ 15ರಿಂದ ಮಾರ್ಚ್‌ 31ರ ಸಂಜೆ 5 ಗಂಟೆವರೆಗೆ ಜಾರಿಯಲ್ಲಿರುತ್ತದೆ. ಈ ನೀತಿಸಂಹಿತೆಯು ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಹಾಗೂ ನಗರಪಾಲಿಕೆ ಮಹಾನಗರ ಪಾಲಿಕೆಗಳಿಗೆ ಅನ್ವಯಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.