ADVERTISEMENT

ಬ್ಯಾಡಗಿ: 32 ಹೆಕ್ಟೇರ್‌ ಬೆಳೆ ಹಾನಿ

ರೈತರಿಗೆ ಶೀಘ್ರ ಪರಿಹಾರದ ಭರವಸೆ ನೀಡಿದ ತಹಶೀಲ್ದಾರ್

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 5:13 IST
Last Updated 13 ಆಗಸ್ಟ್ 2021, 5:13 IST
ಬ್ಯಾಡಗಿ ತಾಲ್ಲೂಕಿನ ಶಿಡೆನೂರ ಬಳಿ ಗುರುವಾರ ಹೊಲದಲ್ಲಿ ನೀರು ನಿಂತು ಹಾನಿಯಾದ ಬೆಳೆ ಸಮೀಕ್ಷೆಯನ್ನು ತಹಶೀಲ್ದಾರ್ ರವಿಕುಮಾರ ಕೊರವರ ನೇತೃತ್ವದ ತಂಡ ನಡೆಸಿತು
ಬ್ಯಾಡಗಿ ತಾಲ್ಲೂಕಿನ ಶಿಡೆನೂರ ಬಳಿ ಗುರುವಾರ ಹೊಲದಲ್ಲಿ ನೀರು ನಿಂತು ಹಾನಿಯಾದ ಬೆಳೆ ಸಮೀಕ್ಷೆಯನ್ನು ತಹಶೀಲ್ದಾರ್ ರವಿಕುಮಾರ ಕೊರವರ ನೇತೃತ್ವದ ತಂಡ ನಡೆಸಿತು   

ಬ್ಯಾಡಗಿ: ತಾಲ್ಲೂಕಿನಲ್ಲಿ ಕಳೆದ ತಿಂಗಳಿನಿಂದ ಸುರಿಯುತ್ತಿರುವ ಸತತ ಮಳೆಗೆ ಹೊಲದಲ್ಲಿ ನೀರು ನಿಂತು 25 ಹೆಕ್ಟೇರ್‌ ಮೆಕ್ಕೆಜೋಳ ಹಾಗೂ 7.2ಹೆಕ್ಟೇರ್‌ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ತಹಶೀಲ್ದಾರ್‌ ರವಿಕುಮಾರ ಕೊರವರ ಹೇಳಿದರು.

ತಾಲ್ಲೂಕಿನ ಚಿಕ್ಕಬಾಸೂರ, ಹಿರೇನಂದಿಹಳ್ಳಿ, ಹೆಡಿಗ್ಗೊಂಡ ಹಾಗೂ ಇನ್ನಿತರ ಗ್ರಾಮಗಳಿಗೆ ಗುರವಾರ ತೆರಳಿ ಬೆಳೆ ಹಾನಿ ಸಮೀಕ್ಷೆ ನಡೆಸಿದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದರು. ನೀರು ಕಡಿಮೆಯಾದರೆ ಬೆಳೆಯಲ್ಲಿ ಚೇತರಿಕೆ ಕಂಡು ಬರಲಿದೆ. ಬೆಳೆ ಹಾನಿಗೊಂಡ ರೈತರ ವಿವರ ಪಡೆದು ಸರ್ಕಾರದ ಆದೇಶದಂತೆ ಅತೀ ಶೀಘ್ರದಲ್ಲಿ ಪರಿಹಾರದ ಹಣವನ್ನು ಬ್ಯಾಂಕ್‌ ಖಾತೆಗೆ ನೇರವಾಗಿ ಸಂದಾಯ ಮಾಡಲಾಗುವುದು ಎಂದು ಭರವಸೆ ನೀಡಿದರು.

ಇಂದು ಕಂದಾಯ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಸಮೀಕ್ಷೆ ಕಾರ್ಯ ನಡೆದಿದ್ದು, ಸಹಾಯಕ ಕೃಷಿ ನಿರ್ದೇಶಕ ಎ.ಡಿ. ವೀರಭದ್ರಪ್ಪ, ಕೃಷಿ ಅಧಿಕಾರಿಗಳಾದ ಮಂಜುನಾಥ ಹಾಗೂ ನಾಗರಾಜ, ಗ್ರಾಮ ಲೆಕ್ಕಾಧಿಕಾರಿ ಹೇಮಾ ಗಳಗನಾಥ ಹಾಗೂ ಇನ್‌ಶೂರೆನ್ಸ್‌ ಕಂಪನಿಯ ಪ್ರತಿನಿಧಿ ಶಿವಯೋಗಿ ಪಾಲ್ಗೊಂಡಿದ್ದರು.

ADVERTISEMENT

ಮಳೆಯಿಂದ ತಾಲ್ಲೂಕಿನಲ್ಲಿ 60ಕ್ಕೂ ಹೆಚ್ಚು ಮನೆಗಳಿಗೆ ಭಾಗಶ: ಹಾನಿಯಾಗಿದೆ. ಈಗಾಗಲೆ ₹ 12.4 ಲಕ್ಷ ಪರಿಹಾರದ ಹಣವನ್ನು ಮಂಜೂರ ಮಾಡಿ ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ.

ತಾಲ್ಲೂಕಿನಲ್ಲಿ ವಾಡಿಕೆಯಂತೆ ಜುಲೈನಲ್ಲಿ 129 ಮಿ.ಮೀ ಹಾಗೂ ಆಗಸ್ಟ್‌ನಲ್ಲಿ 96 ಮಿ.ಮೀ ಮಳೆಯಾಗಬೇಕಾಗಿತ್ತು. ಆದರೆ ಜುಲೈನಲ್ಲಿ 210 ಮೀ.ಮೀ ಮತ್ತು ಆಗಸ್ಟ್‌ನಲ್ಲಿ ಇದುವರೆಗೆ 50 ಮೀ.ಮೀ ಮಳೆ ಸುರಿದಿದೆ. ಸತತ ಮಳೆಯಿಂದ ಬೆಳೆಗಳಲ್ಲಿ ನೀರು ನಿಂತು ಮೆಕ್ಕೆಜೋಳದ ಬೆಳೆ ಹೆಚ್ಚು ಹಾನಿಯಾಗಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.