ಹಾವೇರಿ: ಇಲ್ಲಿಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ 375 ಅಭ್ಯರ್ಥಿಗಳಿಗೆ ಕೆಲಸ ಸಿಕ್ಕಿದ್ದು, ಅವರೆಲ್ಲರಿಗೂ ಸ್ಥಳದಲ್ಲಿಯೇ ನೇಮಕಾತಿ ಆದೇಶ ಪತ್ರ ವಿತರಿಸಿರುವುದಾಗಿ ಆಯೋಜಕರು ತಿಳಿಸಿದ್ದಾರೆ.
ರಾಜ್ಯ ಪದವೀಧರರ ಹಿತರಕ್ಷಣಾ ವೇದಿಕೆ ಹಾಗೂ ಉತ್ತರ ಕನ್ನಡ ಜಿಲ್ಲಾ ಶಿಕ್ಷಕ ಶಿಕ್ಷಕಿಯರ ನಿರಂತರ ಸಹಾಯವಾಣಿ ಸಹಯೋಗದಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿತ್ತು. ಟಾಟಾ ಎಐಜಿ, ಟೊಯೊಟಾ, ಟಾಟಾ ಸ್ಟೀಲ್ ಹಾಗೂ ಶಿಕ್ಷಣ ಸಂಸ್ಥೆಗಳು ಸೇರಿದಂತೆ 60ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಭಾಗವಹಿಸಿದ್ದರು.
ಅಭ್ಯರ್ಥಿಗಳನ್ನು ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಆಯ್ಕೆ ಮಾಡಿಕೊಂಡ ಕಂಪನಿ ಪ್ರತಿನಿಧಿಗಳು, ಹಲವರಿಗೆ ಸ್ಥಳದಲ್ಲಿಯೇ ಉದ್ಯೋಗ ಹಾಜರಾತಿ ಪತ್ರಗಳನ್ನು ವಿತರಿಸಿದರು.
‘ಹಾವೇರಿ ಹಾಗೂ ಸುತ್ತಮುತ್ತಲಿನ ಅಭ್ಯರ್ಥಿಗಳಿಗೆ ಅನುಕೂಲವಾಗಲೆಂದು ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿತ್ತು. 35 ಅಂಗವಿಕರು ಸೇರಿದಂತೆ 375 ಮಂದಿಗೆ ಉದ್ಯೋಗ ಸಿಕ್ಕಿದೆ’ ಎಂದು ರಾಜ್ಯ ಪದವೀಧರರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ರಾಘವೇಂದ್ರ ಬಾಸೂರು ತಿಳಿಸಿದರು.
‘ಪ್ರತಿಷ್ಠಿತ ಕಂಪನಿಗಳ ಜೊತೆಯಲ್ಲಿಯೇ ಗಾರ್ಮೆಂಟ್ಸ್ ಕಾರ್ಖಾನೆಗಳು, ಶಾಲಾ–ಕಾಲೇಜು ನಡೆಸುವ ಶಿಕ್ಷಣ ಸಂಸ್ಥೆಯವರು ಮೇಳದಲ್ಲಿ ಭಾಗವಹಿಸಿದ್ದರು. ಶಿಕ್ಷಣ ಸಂಸ್ಥೆಗಳಿಗೆ ಸುಮಾರು 60 ಮಂದಿ ನೇಮಕಗೊಂಡಿದ್ದಾರೆ. ಅವರಿಗೂ ಸ್ಥಳದಲ್ಲಿಯೇ ಆದೇಶದ ಪತ್ರ ನೀಡಲಾಗಿದೆ’ ಎಂದು ಹೇಳಿದರು.
ಸರ್ಕಾರಿ ಉದ್ಯೋಗಕ್ಕಾಗಿ ಕಾಲಹರಣ ಬೇಡ: ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ‘ಸರ್ಕಾರಿ ನೌಕರಿಯೇ ಬೇಕೆಂದು ಅಭ್ಯರ್ಥಿಗಳು ಕಾಲಹರಣ ಮಾಡಬಾರದು. ಸಿಕ್ಕ ಉದ್ಯೋಗವನ್ನು ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಮಾಡಿ ಸುಂದರವಾದ ಜೀವನ ನಡೆಸಬೇಕು’ ಎಂದರು.
ಕಾರ್ಯಕ್ರಮದಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರು ಮತ್ತು ಸಂಸ್ಥೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್ ಪಾಟೀಲ, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಸೋನಾಲಿ ಕ್ಷೀರಸಾಗರ, ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಚೇತನಕುಮಾರ, ಶಂಕರ ಮೆಹರವಾಡೆ, ತಾರಕೇಶ ಮಠದ, ಎಂ.ಎಂ ಮೈದೂರ, ಪ್ರಭು ಬಿಷ್ಟನಗೌಡ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.