ADVERTISEMENT

ಲೂಟಿಕೋರರಿಂದಲೇ ಗೂಂಡಾ ಕಾಯಿದೆ!

ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 9:28 IST
Last Updated 4 ಜನವರಿ 2018, 9:28 IST

ರಾಣೆಬೆನ್ನೂರು: ‘ಕಳೆದ ನಾಲ್ಕೂವರೆ ವರ್ಷ ರಾಜ್ಯದಲ್ಲಿ ಮರಳು ಮಾಫಿಯಾ ಮೂಲಕ ಲೂಟಿ ನಡೆಸಿದ ಕಾಂಗ್ರೆಸ್ಸಿಗರು, ಈಗ ಮರಳು ಅಕ್ರಮ ಗಣಿಗಾರಿಕೆಯನ್ನು ಗೂಂಡಾ ಕಾಯಿದೆ ತರಲು ತೀರ್ಮಾನಿಸಿದ್ದಾರೆ’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಇಲ್ಲಿ ಲೇವಡಿ ಮಾಡಿದರು.

‘ಹಾಗಿದ್ದರೆ ಗೂಂಡಾ ಕಾಯಿದೆ ಅಡಿ ಯಾರನ್ನು ಬಂಧಿಸಬೇಕು’ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ ಅವರು, ‘ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮರಳು ಅಕ್ರಮ ಸಾಗಾಣಿಕೆ ತಡೆಗಟ್ಟುವ ಬಗ್ಗೆ ಸಚಿವರು ಮಾತನಾಡುತ್ತಿದ್ದಾರೆ. ಮತದಾರರು ರಾತ್ರಿ ಕಂಡ ಬಾವಿಗೆ ಹಗಲು ಹೋಗಿ ಬೀಳುವುದಿಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ಈಶ್ವರಪ್ಪ ವ್ಯಂಗ್ಯವಾಡಿದರು.

‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಚುನಾವಣಾ ಪ್ರಚಾರ ನಡೆಸಿದ ಎಲ್ಲೆಡೆ ಬಿಜೆಪಿ ಜಯಭೇರಿ ಬಾರಿಸಿದೆ. ಈಚೆಗೆ ಗುಜರಾತ್‌ ಮತ್ತು ಹಿಮಾಚಲ ಪ್ರದೇಶದಲ್ಲೂ ಜಯ ಗಳಿಸಿದೆ. ದೇಶದ 19 ರಾಜ್ಯಗಳಲ್ಲಿ ಚುಕ್ಕಾಣಿ ಹಿಡಿದಿದೆ. 20ನೇ ರಾಜ್ಯವಾಗಿ ಕರ್ನಾಟಕದಲ್ಲಿ ಜಯ ಗಳಿಸಲಿದೆ ಎಂದು ಭವಿಷ್ಯ ನುಡಿದರು.

ADVERTISEMENT

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಆಡಳಿತಾವಧಿಯಲ್ಲಿ ದೇಶದ 18 ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತದಲ್ಲಿತ್ತು, ಆದರೆ, ಪ್ರಧಾನಿ ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ಬಿಜೆಪಿ 19 ರಾಜ್ಯಗಳಲ್ಲಿ ಈಗಾಗಲೇ ಅಧಿಕಾರದಲ್ಲಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಮಿತ್‌ಷಾ ಬಗ್ಗೆ ನಡುಕ ಹುಟ್ಟುವಂತೆ ಮಾಡಿದೆ ಎಂದರು.

‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಹಾಗೂ ರಾಜ್ಯ ಘಟಕದ ಅಧ್ಯಕ್ಷರು ಅಭ್ಯರ್ಥಿಗಳ ಆಯ್ಕೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ’ ಎಂದು ಶಿಗ್ಗಾವಿ–ಸವಣೂರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು? ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ: ಈಶ್ವರಪ್ಪ ಅವರು ನಗರದ ಭಾವೈಕ್ಯ ದೇವಿ ಚೌಡೇಶ್ವರಿ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಸೋಮಣ್ಣ ಬೇವಿನಮರದ, ನಾಗೇಂದ್ರ ಕಟಕೋಳ, ಗಂಗಾಧರ, ಬಸವರಾಜ ರೊಡ್ಡನವರ, ಕೆ.ಶಿವಲಿಂಗಪ್ಪ, ಡಾ.ಬಿ.ಎಸ್‌.ಕೇಲಗಾರ, ಎನ್‌.ಬಿ.ಪಾಟೀಲ, ವೀರಣ್ಣ ಅಂಗಡಿ, ಭಾರತಿ ಜಂಬಗಿ, ಸಿದ್ದು ಚಿಕ್ಕಬಿದರಿ, ಬಸವರಾಜ ಲಕ್ಷ್ಮೇಶ್ವರ, ಬಸವರಾಜ ಹಾದಿಮನಿ, ವಿರೂಪಾಕ್ಷಪ್ಪ ಬಳ್ಳಾರಿ, ಜಿಲ್ಲಾ ಪಂಚಾಯ್ತಿ ಸದಸ್ಯ ನೀಲಪ್ಪ ಎಂ. ಈಟೇರ, ಪ್ರಕಾಶ ಪೂಜಾರ ಮತ್ತು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.