ADVERTISEMENT

ಕೊರೊನಾ ಮುಕ್ತ ಭಾರತಕ್ಕಾಗಿ ಹಾವೇರಿಯಿಂದ ಅಯೋಧ್ಯೆಗೆ ಸೈಕ್ಲಿಂಗ್

5540 ಕಿ.ಮೀ. ಸೈಕಲ್‌ ಯಾತ್ರೆ ಸಂಪನ್ನ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 12:42 IST
Last Updated 9 ಆಗಸ್ಟ್ 2021, 12:42 IST
ವಿವೇಕಾನಂದ ಇಂಗಳಗಿ
ವಿವೇಕಾನಂದ ಇಂಗಳಗಿ   

ಹಾವೇರಿ: ‘ಏಲಕ್ಕಿ ಕಂಪಿನ ನಗರಿ’ ಹಾವೇರಿಯಿಂದ ರಾಮ ಜನ್ಮಭೂಮಿ ‘ಅಯೋಧ್ಯೆ’ವರೆಗಿನ 2 ಸಾವಿರ ಕಿ.ಮೀ. ಅಂತರವನ್ನು ಕೇವಲ 18 ದಿನಗಳಲ್ಲಿ ‘ಸೈಕಲ್‌ ಯಾತ್ರೆ’ ಮೂಲಕ ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇನೆ ಎಂದು ನಗರದ ಸೈಕ್ಲಿಸ್ಟ್‌ ವಿವೇಕಾನಂದ ಇಂಗಳಗಿ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೊರೊನಾ ಮುಕ್ತ ಭಾರತಕ್ಕಾಗಿ ಕೈಗೊಂಡ ಸೈಕಲ್‌ ಯಾತ್ರೆಯಲ್ಲಿ ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣ, ದೆಹಲಿ, ಉತ್ತರಾಖಂಡ ಸೇರಿದಂತೆ ಒಟ್ಟು 8 ರಾಜ್ಯಗಳಲ್ಲಿ ಒಟ್ಟು 5540 ಕಿ.ಮೀ. ಪ್ರಯಾಣವನ್ನು ಕ್ರಮಿಸಿದ್ದೇನೆ. ಒಟ್ಟು 106 ದಿನಗಳ ಸೈಕಲ್‌ ಯಾತ್ರೆಯಲ್ಲಿ ಕೊರೊನಾ ತಡೆಗಟ್ಟುವುದು ಮತ್ತು ದೇಶಭಕ್ತಿಯ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇನೆ ಎಂದರು.

ಅಯೋಧ್ಯೆ ತಲುಪಿ ಅಲ್ಲಿ ಶ್ರೀರಾಮನ ದರ್ಶನ ಪಡೆದ ನಂತರ ಕಾಶಿ, ಪ್ರಯಾಗ, ಲಕ್ನೋ, ಆಗ್ರಾದ ತಾಜ್‌ ಮಹಲ್‌, ಮಥುರಾ, ಬೃಂದಾವನ, ಗೋವರ್ಧನ ಗಿರಿ ಮುಂತಾದ ಸ್ಥಳಗಳಿಗೂ ಭೇಟಿ ನೀಡಿ ಬಂದಿದ್ದೇನೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಭೇಟಿ ಸಾಧ್ಯವಾಗಲಿಲ್ಲ. ರುದ್ರಪ್ರಯಾಗದ ಸಮೀಪ ಭಾರಿ ಭೂಕುಸಿತ ಉಂಟಾಯಿತು. ಸಮೀಪದಲ್ಲೇ ಇದ್ದ ನಾನು ಅದೃಷ್ಟವಶಾತ್‌ ಪಾರಾದೆ’ ಎಂದರು.

ADVERTISEMENT

‘ನಾನು ರಾಣೆಬೆನ್ನೂರಿನ ಆರ್‌ಟಿಇಎಸ್‌ ಕಾಲೇಜಿನಲ್ಲಿ ಅಂತಿಮ ವರ್ಷದ ಕಾನೂನು ಪದವಿ ಅಧ್ಯಯನ ಮಾಡುತ್ತಿದ್ದೇನೆ. ನನ್ನ ಸೈಕಲ್ ಯಾತ್ರೆಗೆ ಪ್ರೋತ್ಸಾಹ ಮತ್ತು ಸಹಕಾರ ನೀಡಿದ ಹಾವೇರಿ ಸೈಕಲ್ ಕ್ಲಬ್‌, ಆರ್‌.ಎಸ್‌.ಎಸ್‌, ವಿಶ್ವ ಹಿಂದೂ ಪರಿಷತ್‌ ಮತ್ತು ಬಿಜೆಪಿ ಕಾರ್ಯಕರ್ತರು, ಸ್ವಯಂ ಸೇವಕರ ನೆರವನ್ನು ಎಂದಿಗೂ ಮರೆಯುವುದಿಲ್ಲ. ಚಲನಚಿತ್ರಗಳಲ್ಲಿ ನಟಿಸಲು ಒಂದೆರಡು ಅವಕಾಶಗಳು ಸಿಕ್ಕಿವೆ. ಖಾಸಗಿ ವಾಹಿನಿಯ ಬಿಗ್‌ ಬಾಸ್‌ ಕಾರ್ಯಕ್ರಮದಲ್ಲೂ ಭಾಗವಹಿಸುವ ಆಕಾಂಕ್ಷೆ ಇದೆ’ ಎಂದರು.

ಡಿಸೆಂಬರ್‌ನಲ್ಲಿ ಹಾವೇರಿಯಿಂದ ಒಂದು ಸಾವಿರ ಕಿ.ಮೀ. ದೂರದಲ್ಲಿರುವ ಕನ್ಯಾಕುಮಾರಿವರೆಗೆ ಸೈಕಲ್‌ ಯಾತ್ರೆ ಕೈಗೊಳ್ಳಲು 20 ಜನರ ತಂಡ ಸಿದ್ಧತೆ ನಡೆಸುತ್ತಿದೆ. ವಿವಿಧ ಜಿಲ್ಲೆಗಳಿಂದ ಉತ್ಸಾಹಿ ಸೈಕ್ಲಿಸ್ಟ್‌ಗಳು ಭಾಗವಹಿಸಲಿದ್ದಾರೆ. ಜನವರಿ 12ರಂದು ಸ್ವಾಮಿ ವಿವೇಕಾನಂದರ ಜಯಂತಿಯನ್ನು ಕನ್ಯಾಕುಮಾರಿಯಲ್ಲಿ ಆಚರಿಸುವ ಉದ್ದೇಶ ಹೊಂದಿದ್ದೇವೆ. ಮುಂದಿನ ವರ್ಷ 12 ಜ್ಯೋತಿರ್ಲಿಂಗಗಳ ಯಾತ್ರೆಯನ್ನು ಮೋಟಾರ್‌ ಬೈಕ್‌ನಲ್ಲಿ ಕೈಗೊಳ್ಳಲಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹಾವೇರಿ ಸೈಕಲ್ ಕ್ಲಬ್‌ ಚೇರ್ಮನ್‌ ರಾಮ ಮೋಹನ ರಾವ್‌, ಕಲಾವಿದ ಗಣೇಶ ರಾಯ್ಕರ್‌, ವಿನಾಯಕ ಕುಂಬಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.