ADVERTISEMENT

ಹಾವೇರಿ ಜಿಲ್ಲೆಯಲ್ಲಿ ಶೇ 74.43ರಷ್ಟು ಮುಂಗಾರು ಬಿತ್ತನೆ

ಸಂತೋಷ ಜಿಗಳಿಕೊಪ್ಪ
Published 22 ಜೂನ್ 2025, 4:50 IST
Last Updated 22 ಜೂನ್ 2025, 4:50 IST
ಹಾವೇರಿ ತಾಲ್ಲೂಕಿನ ಬಸಾಪುರ ಬಳಿಯ ಜಮೀನಿನಲ್ಲಿ ಗೋವಿನ ಜೋಳದ ಬೆಳೆಯ ನಡುವೆ ರೈತರು ಇತ್ತೀಚೆಗೆ ಎಡೆಕುಂಟಿ ಹೊಡೆದರು
ಹಾವೇರಿ ತಾಲ್ಲೂಕಿನ ಬಸಾಪುರ ಬಳಿಯ ಜಮೀನಿನಲ್ಲಿ ಗೋವಿನ ಜೋಳದ ಬೆಳೆಯ ನಡುವೆ ರೈತರು ಇತ್ತೀಚೆಗೆ ಎಡೆಕುಂಟಿ ಹೊಡೆದರು   

ಹಾವೇರಿ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ಉತ್ತಮ ರೀತಿಯಲ್ಲಿ ಸುರಿಯುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ಹುಮ್ಮಸ್ಸು ನೀಡಿದೆ. ಉತ್ತಮ ಮಳೆಯಿಂದಾಗಿ ಕೃಷಿ ಭೂಮಿ ಹದವಾಗಿದ್ದು, ಬೀಜ ಬಿತ್ತನೆಯಲ್ಲಿ ಉತ್ತಮ ಪ್ರಗತಿ ಕಂಡುಬಂದಿದೆ.

ರೈತಾಪಿ ನಾಡಾಗಿರುವ ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿಯುತ್ತಿದ್ದಂತೆ, ರೈತರು ಭೂಮಿ ಹದಗೊಳಿಸುವ ಕೆಲಸ ಶುರು ಮಾಡಿದ್ದರು. ಜೂನ್ ಮೊದಲ ವಾರದಲ್ಲಿ ಮಳೆ ಬಿಡುವು ನೀಡಿದ್ದರಿಂದ, ಬೀಜ ಬಿತ್ತನೆ ಕಾರ್ಯ ಆರಂಭಿಸಿದ್ದರು.

ಕೃಷಿ ಇಲಾಖೆ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಈಗಾಗಲೇ ಶೇ 74.43ರಷ್ಟು ಬಿತ್ತನೆ ಪೂರ್ಣಗೊಂಡಿದೆ. ಜೂನ್ ಎರಡನೇ ವಾರದಿಂದ ಬಿಡುವು ನೀಡುತ್ತ ಮಳೆ ಸುರಿಯುತ್ತಿದ್ದರಿಂದ ಬಿತ್ತನೆ ಕಾರ್ಯಕ್ಕೆ ರೈತರು ವಿರಾಮ ನೀಡಿದ್ದಾರೆ. ಮಳೆ ಕಡಿಮೆಯಾಗುತ್ತಿದ್ದಂತೆ ಬಿತ್ತನೆ ಕಾರ್ಯ ಪುನಃ ಚುರುಕುಗೊಳುವುದಾಗಿ ರೈತರು ಹೇಳಿದರು.

ADVERTISEMENT

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಗೋವಿನ ಜೋಳ, ಶೇಂಗಾ, ಸೋಯಾಬಿನ್, ಭತ್ತ, ತೊಗರಿ, ಹೆಸರು, ಅಲಸಂದಿ, ಹತ್ತಿ, ಕಬ್ಬು, ಜೋಳ ಹಾಗೂ ಇತರೆ ಬೆಳೆ ಬೆಳೆಯಲಾಗುತ್ತದೆ. ಗೋವಿನ ಜೋಳ, ಸೋಯಾಬಿನ್ ಬೆಳೆ ಪ್ರದೇಶ ಹೆಚ್ಚಿದ್ದು, ಬಹುತೇಕ ಕಡೆಗಳಲ್ಲಿ ಬಿತ್ತನೆ ಪೂರ್ಣಗೊಂಡಿದೆ.

‘ಮುಂಗಾರು ಮಳೆ ಉತ್ತಮ ರೀತಿಯಲ್ಲಿ ಆರಂಭಗೊಂಡಿದೆ. ಜಿಲ್ಲೆಯಲ್ಲಿ 3.14 ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶವಿದೆ. ಈ ಪೈಕಿ 2.34 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ (ಶೇ 74.43ರಷ್ಟು) ಈಗಾಗಲೇ ಬಿತ್ತನೆ ಪೂರ್ಣಗೊಂಡಿದೆ. ಉಳಿದ ಪ್ರದೇಶಗಳಲ್ಲಿ ಬಿತ್ತನೆ ಕೆಲಸ ಪ್ರಗತಿಯಲ್ಲಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಳೆ ಆಶ್ರಿತದಲ್ಲಿ 2.50 ಲಕ್ಷ ಹೆಕ್ಟೇರ್ ಹಾಗೂ ನೀರಾವರಿಯಲ್ಲಿ 63,769 ಹೆಕ್ಟೇರ್‌ ಪ್ರದೇಶಗಳಲ್ಲಿ ಬಿತ್ತನೆ ಗುರಿಯಿದೆ. ಈಗಾಗಲೇ, ಮಳೆ ಆಶ್ರಿತದಲ್ಲಿ 2.04 ಲಕ್ಷ ಹೆಕ್ಟೇರ್ (ಶೇ 81.6) ಹಾಗೂ ನೀರಾವರಿಯಲ್ಲಿ 29,408 (ಶೇ 46.1) ಹೆಕ್ಟೇರ್ ಬಿತ್ತನೆ ಮುಕ್ತಾಯಗೊಂಡಿದೆ’ ಎಂದು ಹೇಳಿದರು.

ಜಿಲ್ಲೆಯಲ್ಲಿ ಏಕದಳ, ದ್ವಿದಳ ಧಾನ್ಯ, ಎಣ್ಣೆಕಾಳುಗಳು, ವಾಣಿಜ್ಯ ಬೆಳೆಗಳ ಬಿತ್ತನೆ ನಡೆಯುತ್ತದೆ. ಜಿಲ್ಲೆಯಲ್ಲಿ ರೈತರ ಸಂಖ್ಯೆ ಹೆಚ್ಚಿರುವುದರಿಂದ, ಕೃಷಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಬಿತ್ತನೆ ಪ್ರದೇಶಕ್ಕೆ ತಕ್ಕಂತೆ ಬೀಜ ಹಾಗೂ ಗೊಬ್ಬರ ಪೂರೈಕೆಗೂ ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

26,944 ಮೆ.ಟನ್. ಗೊಬ್ಬರ ಸಂಗ್ರಹ: ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಅಗತ್ಯವಿರುವ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ಕೃಷಿ ಇಲಾಖೆಯ ಬಳಿ 26,944 ಮೆಟ್ರಿಕ್ ಟನ್ ರಸಗೊಬ್ಬರ ಸಂಗ್ರಹವಿದೆ.

‘12,927 ಮೆ.ಟನ್ ಯೂರಿಯಾ, 1568 ಮೆ.ಟನ್ ಡಿಎಪಿ, 1262 ಮೆ.ಟನ್ ಎಂಒಪಿ, 10891 ಮೆ.ಟನ್ ಕಾಂಪ್ಲೆಕ್ಸ್ ಹಾಗೂ 296 ಮೆ.ಟನ್ ಎಸ್‌ಎಸ್‌ಪಿ ರಸಗೊಬ್ಬರ ದಾಸ್ತಾನಿದೆ’ ಎಂದು ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಮಾಹಿತಿ ನೀಡಿದರು.

ಡಿಎಪಿ ಹಾಗೂ ಯೂರಿಯಾ ಗೊಬ್ಬರ ಪೂರೈಕೆ ನಿಧಾನಗತಿಯಲ್ಲಿದ್ದು ರೈತರು ಪರ್ಯಾಯ ಸಂಯುಕ್ತ ರಸಗೊಬ್ಬರಗಳನ್ನು ಬಳಸಬೇಕು
ಮಲ್ಲಿಕಾರ್ಜುನ ಜಂಟಿ ನಿರ್ದೇಶಕ ಕೃಷಿ ಇಲಾಖೆ
‘ಮೊಳಕೆಯೊಡೆಯದ ಬೀಜಗಳು’
ಮುಂಗಾರು ಪೂರ್ವ ಮಳೆ ಉತ್ತಮವಾಗಿದ್ದನ್ನು ನಂಬಿಕೊಂಡು ಹಲವು ರೈತರು ಬಿತ್ತನೆ ಕೆಲಸ ಪೂರ್ಣಗೊಳಿಸಿದ್ದಾರೆ. ಆದರೆ ಮುಂಗಾರು ಆರಂಭದ ದಿನಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿತ್ತು. ಇದರಿಂದಾಗಿ ಹಲವು ರೈತರ ಜಮೀನಿನಲ್ಲಿ ಬೀಜಗಳು ಮೊಳಕೆಯೊಡೆದಿಲ್ಲವೆಂಬ ದೂರುಗಳು ಕೇಳಿಬರುತ್ತಿವೆ. ಹಾವೇರಿ ರಾಣೆಬೆನ್ನೂರು ಹಾನಗಲ್ ಬ್ಯಾಡಗಿ ಹಿರೇಕೆರೂರು ರಟ್ಟೀಹಳ್ಳಿ ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನ ಹಲವು ಜಮೀನುಗಳಲ್ಲಿ ಬೆಳೆ ಮೊಳಕೆಯೊಡೆಯುವಲ್ಲಿ ವ್ಯತ್ಯಾಸ ಕಂಡುಬಂದಿದೆ. ಇದರ ಜೊತೆಯಲ್ಲಿ ಅಲ್ಲಲ್ಲಿ ಬೆಳೆಗಳಿಗೆ ರೋಗವೂ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ರೈತರು ಕೃಷಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ‘ನಮ್ಮ ಜಮೀನಿನಲ್ಲಿ ಏಕಕಾಲ ಗೋವಿನ ಜೋಳ ಬಿತ್ತನೆ ಮಾಡಿದ್ದೆವು. ನೀರಿನ ಕೊರತೆಯಿಂದ ಜಮೀನಿನ ಹಲವು ಕಡೆ ಬೀಜ ಮೊಳಕೆಯೊಡೆದಿಲ್ಲ. ಅಂಥ ಕಡೆಗಳಲ್ಲಿ ಪುನಃ ಬೀಜಗಳನ್ನು ಹಾಕುತ್ತಿದ್ದೇವೆ’ ಎಂದು ಬ್ಯಾಡಗಿ ರೈತ ಶಂಕ್ರಣ್ಣ ಚಕ್ರಸಾಲಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.