ADVERTISEMENT

ಹಾವೇರಿ: ಪರೀಕ್ಷೆ ಬರೆದ 8,725 ಅನಕ್ಷರಸ್ಥರು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 8:33 IST
Last Updated 23 ಫೆಬ್ರುವರಿ 2026, 8:33 IST
ಹಾವೇರಿ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ವತಿಯಿಂದ ಭಾನುವಾರ ಜರುಗಿದ ಪರೀಕ್ಷೆಗೆ ಹಾಜರಾಗಿದ್ದ ಅನಕ್ಷರಸ್ಥರು 
ಹಾವೇರಿ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ವತಿಯಿಂದ ಭಾನುವಾರ ಜರುಗಿದ ಪರೀಕ್ಷೆಗೆ ಹಾಜರಾಗಿದ್ದ ಅನಕ್ಷರಸ್ಥರು    

ಹಾವೇರಿ: ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲೆಯಾದ್ಯಂತ ಭಾನುವಾರ ಹಮ್ಮಿಕೊಂಡಿದ್ದ ಅಕ್ಷರದ ಸಾಮಾನ್ಯ ಜ್ಞಾನದ ಪರೀಕ್ಷೆಗೆ 8,725 ಅನಕ್ಷರಸ್ಥರು ಹಾಜರಾದರು.

ಜಿಲ್ಲೆಯಲ್ಲಿರುವ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡಲು ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ‘ಸಾವಿರ ಗ್ರಾಮ ಪಂಚಾಯಿತಿ ಕಾರ್ಯಕ್ರಮ’ದ ಅಂಗವಾಗಿ ಸಂಜೆ ತರಗತಿಗಳನ್ನು ನಡೆಸಲಾಗುತ್ತಿದೆ. ಈ ತರಗತಿಗೆ ಹಾಜರಾಗಿದ್ದ ಅನಕ್ಷರಸ್ಥರು ಭಾನುವಾರ ಪರೀಕ್ಷೆ ಬರೆದರು.

ಜಿಲ್ಲೆಯ 21 ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕಾರ್ಯಕ್ರಮದ ತರಗತಿಗಳು ನಡೆದಿದ್ದವು. ಅಲ್ಲಿಯ ಅನಕ್ಷರಸ್ಥರು, ಭಾನುವಾರ ಪರೀಕ್ಷೆ ಎದುರಿಸಿದರು.

ADVERTISEMENT

ಬೆಳಿಗ್ಗೆ 8.30ರಿಂದ 10.30ರ ವರೆಗೆ ಮೊದಲನೇ ಪರೀಕ್ಷೆ ನಡೆಯಿತು. ಬೆಳಿಗ್ಗೆ 11.30ರಿಂದ  1.30ರ ವರೆಗೆ ಎರಡನೇ ಅವಧಿಯ ಪರೀಕ್ಷೆ ಹಾಗೂ ಮಧ್ಯಾಹ್ನ 2.30ರಿಂದ 4.30ರ ವರೆಗೆ ಮೂರನೇ ಅವಧಿಯ ಪರೀಕ್ಷೆ ಜರುಗಿತು. ಪರೀಕ್ಷಾರ್ಥಿಗಳು ತಮಗೆ ಬಿಡುವಿದ್ದಾಗ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿ ಪರೀಕ್ಷೆ ಬರೆದರು.

‘ಜಿಲ್ಲೆಯ 101 ಪರೀಕ್ಷಾ ಕೇಂದ್ರಗಳಲ್ಲಿ 440 ಕೊಠಡಿ ಮೇಲ್ವಿಚಾರಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಇಲಾಖೆಯಿಂದ ಪ್ರಶ್ನೆಪತ್ರಿಕೆಗಳನ್ನು ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಡಯಟ್‌ನಿಂದ ಸರಬರಾಜು ಮಾಡಲಾಗಿತ್ತು. ಮೊದಲ ಅವಧಿಯಲ್ಲಿ ಅತೀ ಹೆಚ್ಚಿನ ಕಲಿಕಾರ್ಥಿಗಳು ಆಗಮಿಸಿ ಪರೀಕ್ಷೆ ಬರೆದರು’ ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಬಿ.ಎಂ. ಬೇವಿನಮರದ ಹೇಳಿದರು.

‘ಪ್ರತಿಯೊಬ್ಬರ ಜೀವನದಲ್ಲಿ ಪರೀಕ್ಷೆ ಎನ್ನುವುದು, ಭವಿಷ್ಯ ಬದಲಿಸುವ ಪಥವಾಗಿರುತ್ತದೆ. ಅಕ್ಷರ ಜ್ಞಾನ ಪಡೆದವರ ಕಲಿಕೆಯನ್ನು ಖಾತರಿಪಡಿಸಲು ಈ ಪರೀಕ್ಷೆ ನಡೆಸಲಾಗಿದೆ. ಇದಕ್ಕಾಗಿ ಅನಕ್ಷರಸ್ಥರಿಗೆ ಬಾಳಿಗೆ ಬೆಳಕು, ಸವಿಬರಹ ಪುಸ್ತಕಗಳನ್ನು ಹಾಗೂ ಪೆನ್ಸಿಲ್, ರಬ್ಬರ್, ನೋಟ್‌ಪುಸ್ತಕ ಇತ್ಯಾದಿ ಕಲಿಕಾ ಸಾಮಗ್ರಿಗಳನ್ನು ನೀಡಿ, ಆರು ತಿಂಗಳು ಕಲಿಕಾಭ್ಯಾಸ ಮಾಡಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.