ರಾಣೆಬೆನ್ನೂರು: ನಗರದ ತಹಶೀಲ್ದಾರ್ ಕಚೇರಿ ಎದುರುಗಡೆ ಪದವಿ ಕಾಲೇಜುಗಳ ಉಪನ್ಯಾಸಕರ ನೇಮಕಾತಿಯಲ್ಲಿ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಮಂಗಳವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಘಟಕದಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ನಂತರ ತಹಶೀಲ್ದಾರ್ ಆರ್.ಎಚ್.ಭಾಗವಾನ್ ಅವರಿಗೆ ಮನವಿ ಸಲ್ಲಿಸಿದರು.
ನಗರ ಕಾರ್ಯದರ್ಶಿ ಯಲ್ಲಮ್ಮ ಆರ್.ಎಂ ಮಾತನಾಡಿ, ‘3000ಕ್ಕಿಂತ ಹೆಚ್ಚು ಉಪನ್ಯಾಸಕರು ಈಗಾಗಲೇ ನಿವೃತ್ತಿ ಪಡೆದಿದ್ದು, ಇನ್ನು ಕೇವಲ ಕಾಯಂ ಉಪನ್ಯಾಸಕರೊಂದಿಗೆ 12,000 ಅತಿಥಿ ಉಪನ್ಯಾಸಕರ ಸೇವಾ ನೆರವಿನಿಂದ ಪದವಿ ತರಗತಿಗಳು ಜರುಗುತ್ತಿವೆ. ಕರ್ನಾಟಕದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ಪಡೆಯುವುದು ವಿದ್ಯಾರ್ಥಿಗಳ ಹಕ್ಕು ಮುಂದುವರಿದು ಗುಣಮಟ್ಟದ ಶಿಕ್ಷಣ ನೀಡುವಿಕೆಯ ಖಾತರಿ ಪಡಿಸಿಕೊಳ್ಳುವುದು ಸರ್ಕಾರದ ಕರ್ತವ್ಯವಾಗಿದೆ’ ಎಂದರು.
‘ತಮ್ಮ ಕರ್ತವ್ಯ ಪ್ರಜ್ಞೆಯನ್ನು ಮರೆತಂತಿರುವ ಸರ್ಕಾರಗಳು ಪದವಿ ಹಂತದಲ್ಲಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕಾಯಂ ಉಪನ್ಯಾಸಕರ, ಅರ್ಹ ಉಪನ್ಯಾಸಕರ ನೇಮಕಾತಿಯಲ್ಲಿ ದೃಢ ನಿಲುವು ತೆಗೆದುಕೊಳ್ಳದಿರುವುದು ಕಳವಳಕಾರಿಯ ಸಂಗತಿ’ ಎಂದು ದೂರಿದರು.
‘2025–26ನೇ ಸಾಲಿನಲ್ಲಿ ಖಾಲಿ ಇರುವ 12,000 ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು 55,000 ಅರ್ಜಿಗಳು ಸಲ್ಲಿಕೆ ಆಗಿರುತ್ತವೆ. ಈಗಾಗಲೇ ನಮ್ಮ ಎಲ್ಲಾ ವಿಶ್ವವಿದ್ಯಾಲಯಗಳ ತರಗತಿಗಳು ಪ್ರಾರಂಭವಾಗಿ 2 ತಿಂಗಳು ಕಳೆದರೂ ಇಲ್ಲಿಯವರೆಗೆ ಅತಿಥಿ ಉಪನ್ಯಾಸಕರ ನೇಮಕಾತಿ ಆಗದೆ ಇರುವ ಕಾರಣ ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯ ತರಗತಿಗಳು ನಡೆಯುತ್ತಿಲ್ಲ’ ಎಂದರು.
ರಾಜ್ಯದ ಪದವಿ ಕಾಲೇಜುಗಳಿಗೆ ಕಾಯಂ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳುವಷ್ಟು ಯೋಗ್ಯತೆ ರಾಜ್ಯ ಸರ್ಕಾರಕ್ಕೆ ಇಲ್ಲದಿರುವುದು ದುರದೃಷ್ಟಕರ. ಉಪನ್ಯಾಸಕರ ನೇಮಕಾತಿಗೆ ತಕ್ಷಣ ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.
ನಗರ ಸಹ ಕಾರ್ಯದರ್ಶಿ ಬಸವರಾಜ್ ಬನ್ನಿಹಟ್ಟಿ, ನಗರ ಸಹ ಕಾರ್ಯದರ್ಶಿ ಸುಶ್ಮಿತಾ ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿಗಳಾದ ದರ್ಶನ್, ಭರತ್, ಚೇತನ್, ರಾಜೇಶ್, ಸಬ್ ಕಿರಣ್, ಪೂಜಾ, ಸಹನಾ, ಚೇತನಾ, ಸ್ವಪ್ನಾ, ಕಾಲೇಜಿನ ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.