ADVERTISEMENT

ಮಾನವೀಯತೆ ಇಲ್ಲದ ಸಾಧನೆಗೆ ಬೆಲೆಯಿಲ್ಲ: ನಟ ರಮೇಶ ಅರವಿಂದ್ ಕಿವಿಮಾತು

ಚಲನಚಿತ್ರ ನಟ ರಮೇಶ ಅರವಿಂದ್ ಅಭಿಮತ * ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 6 ಜನವರಿ 2023, 21:35 IST
Last Updated 6 ಜನವರಿ 2023, 21:35 IST
ಸಮ್ಮೇಳನದಲ್ಲಿ ಮಾತನಾಡಿದ ಚಿತ್ರನಟ ರಮೇಶ್‌ ಅರವಿಂದ್‌
ಸಮ್ಮೇಳನದಲ್ಲಿ ಮಾತನಾಡಿದ ಚಿತ್ರನಟ ರಮೇಶ್‌ ಅರವಿಂದ್‌   

ನಕ–ಶರೀಫ–ಸರ್ವಜ್ಞ ವೇದಿಕೆ (ಹಾವೇರಿ): ‘ಫಸಲು ಇಲ್ಲದ ಬೆಳೆ, ಮಾನವೀಯತೆ ಇಲ್ಲದ ಸಾಧನೆಗೆ ಬೆಲೆಯಿಲ್ಲ. ಆದ್ದರಿಂದ ಎಷ್ಟೇ ಎತ್ತರಕ್ಕೆ ಬೆಳೆದರೂ ಮಾನವೀಯತೆಯಿಂದಲೇ ವರ್ತಿಸಬೇಕು’ ಎಂದು ಚಲನಚಿತ್ರ ನಟ ರಮೇಶ ಅರವಿಂದ್ ಕಿವಿಮಾತು ಹೇಳಿದರು.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಎರಡು ಸಾವಿರ ವರ್ಷ ಇತಿಹಾಸ ಇರುವ ಭಾಷೆ ನಮ್ಮದು. ಕನ್ನಡ ಲೋಕವು ವಿಶ್ವವ್ಯಾಪಿ ಇರುವ ವಿಸ್ಮಯವಾಗಿದೆ. ಜಗತ್ತಿನ ವಿವಿಧೆಡೆ ನೆಲೆಸಿರುವ ಕನ್ನಡಿಗರು ತಮ್ಮ ಸಾಧನೆಯಿಂದ ಕನ್ನಡದ ಕೀರ್ತಿಯನ್ನು ಸಾರುತ್ತಿದ್ದಾರೆ. ಕಲಿಕೆ ಜಾಸ್ತಿಯಾಗಬೇಕು’ ಎಂದರು.

ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ‘ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮೌಲ್ಯ ಕುಸಿಯುತ್ತಿದೆ. ಮಾನವೀಯ ಮೌಲ್ಯಗಳು ಅರ್ಥ ಕಳೆದುಕೊಳ್ಳುತ್ತಿವೆ. ಈ ಬಗ್ಗೆ ನಾವೆಲ್ಲರೂ ಚಿಂತನೆ ಮಾಡಬೇಕು. ದುರಾಸೆ ಎಂಬ ರೋಗವನ್ನು ಅಳಿಸಿ ಹಾಕಬೇಕು. ನಮ್ಮಲ್ಲಿ ಆಕಾಂಕ್ಷೆಗಳು ಇರಬೇಕು. ಆದರೆ, ಕೋಟಿಗಟ್ಟಲೆ ಹಣವನ್ನು ಜೇಬಿಗೆ ಇಳಿಸುವ ದುರಾಸೆ ಇರಬಾರದು. ಕನ್ನಡಿಗರ ಪ್ರಾಮಾಣಿಕತೆ, ಈ ನೆಲದ ಮೌಲ್ಯಗಳು ಏನೆಂಬುದನ್ನು ಜಗತ್ತಿಗೆ ತೋರಿಸಬೇಕು’ ಎಂದು ಹೇಳಿದರು.

ADVERTISEMENT

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ‘ಇತ್ತೀಚಿನ ದಿನಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳು ಅಧಿಕವಾಗುತ್ತಿವೆ. ಆದರೂ ಕನ್ನಡ ಭಾಷೆಯ ಬಗೆಗಿನ ಅಭಿಮಾನಕ್ಕೆ ಕುಂದು ಬಂದಿಲ್ಲ. ಕನ್ನಡ ಭಾಷೆ ತಾಯಿ ಭಾಷೆಯಾಗಿದ್ದು, ಶ್ರೀಮಂತವಾಗಿದೆ. ಶಾಸ್ತ್ರೀಯ ಸ್ಥಾನಮಾನಕ್ಕೆ ಒಳಗಾಗಿರುವ ಈ ಭಾಷೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗೋಣ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.