
ಬ್ಯಾಡಗಿ: ‘ವ್ಯಸನ ರಹಿತ ಸಮಾಜ ನಿರ್ಮಾಣಕ್ಕೆ ದೃಢ ಸಂಕಲ್ಪ ಮಾಡಲಾಗಿದ್ದು, ‘ರೇವಣಸಿದ್ದೇಶ್ವರ ಜೋಳಿಗೆ ದುಶ್ಚಟಗಳ ಭಿಕ್ಷೆ’ ಎಂಬ ಘೋಷವಾಕ್ಯದೊಂದಿಗೆ ಜನಾಂದೋಲನ ಆರಂಭಿಸಿದ್ದೇವೆ’ ಎಂದು ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಮಾಸಣಗಿ ಗ್ರಾಮದಲ್ಲಿ ಕನಕ ಜಯಂತಿ ಅಂಗವಾಗಿ ಈಚೆಗೆ ಆಯೋಜಿಸಿದ್ದ ಸದ್ಭಾವನಾ ನಡಿಗೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ವ್ಯಸನ ರಹಿತ ಸಮಾಜ ನಿರ್ಮಾಣಕ್ಕೆ ಯುವಕರು ಶ್ರಮಿಸಬೇಕು. ವ್ಯಸನಕ್ಕೀಡಾದವರನ್ನು ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿ, ಸಮಾಜದ ಮುಖ್ಯವಾಹಿನಿಗೆ ತರಬೇಕು. ಇದು ನಾಗರಿಕ ಸಮಾಜದ ಕರ್ತವ್ಯವಾಗಿದೆ’ ಎಂದರು.
‘ಖಿನ್ನತೆಯಿಂದ ದುಃಖ ಉಂಟಾಗಿ ವ್ಯಕ್ತಿಯ ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ. ದುಶ್ಚಟಗಳಿಂದ ಹಲವಾರು ಕುಟುಂಬಗಳು ಬೀದಿ ಪಾಲಾಗಿವೆ. ಇದನ್ನು ತಡೆಯಲು, ಕನಕ ಗುರುಪೀಠವು ವ್ಯಸನ ರಹಿತ ಸಮಾಜ ನಿರ್ಮಾಣಕ್ಕೆ ಮಂದಾಗಿದೆ’ ಎಂದು ಹೇಳಿದರು.
ಕುರುಬರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ ಆನ್ವೆರಿ, ತಾಲ್ಲೂಕು ಘಟಕದ ಅಧ್ಯಕ್ಷ ಚಿಕ್ಕಪ್ಪ ಹಾದಿಮನಿ, ಮಲ್ಲಿಕಾರ್ಜುನ ಕರಲಿಂಗಣ್ಣನವರ, ಬಸವರಾಜ ಬನ್ನಿಹಟ್ಟಿ, ಶಿವಪ್ಪ ಕುಮ್ಮೂರ, ನಿಂಗರಾಜ ಗಡ್ಡದವರ, ಮಲ್ಲಪ್ಪ ಕರ್ಜಗಿ, ನಿಂಗಪ್ಪ ಹೆಗ್ಗಣ್ಣನವರ, ಉಳಿವೆಪ್ಪ ಮುಳಗುಂದ, ನಾಗಪ್ಪ ಬನ್ನಿಹಟ್ಟಿ, ಮಹದೇವಪ್ಪ ಪಡಿಯಣ್ಣನವರ ಇದ್ದರು.
ಜನರಲ್ಲಿ ಅರಿವು ಮೂಡಿಸಲು ಕರೆ
‘ಕೂಲಿ ಕಾರ್ಮಿಕರ ಕುಟುಂಬಗಳು ಬಡತನದಿಂದ ಬಳಲುತ್ತಿದ್ದು ಅವರು ಹೊಸ ಬದುಕು ರೂಪಿಸಿಕೊಳ್ಳಲು ಸ್ವಾವಲಂಬಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಚಿಕ್ಕ ವಯಸ್ಸಿನಲ್ಲೇ ಹಲವರು ದುಶ್ಚಟಗಳಿಗೆ ಬಲಿಯಾಗುತ್ತಿದ್ದು ಅವರಲ್ಲಿ ಅರಿವು ಮೂಡಿಸಬೇಕು. ಈ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದು ರೇವಣಸಿದ್ಧ ಶಾಂತವೀರ ಸ್ವಾಮೀಜಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.