
ಹಾವೇರಿ: ಮಹಾರಾಷ್ಟ್ರದಲ್ಲಿ 528 ಎಕರೆ ಜಮೀನಿನಲ್ಲಿ ಕೃಷಿ ಮಾಡಿ ಯಶಸ್ವಿಯಾಗಿರುವ ಮಾಜಿ ಸೈನಿಕರು, ಇದೀಗ ಹಾವೇರಿಯಲ್ಲಿ ರೈತರಿಗೆ ಕೃಷಿ ಸಲಹೆಗಳನ್ನು ನೀಡಲು ಹೊಸ ‘ಕೃಷಿ ಸೇವಾ ಕೇಂದ್ರ’ ಆರಂಭಿಸುತ್ತಿದ್ದಾರೆ. ಸೇವಾ ಕೇಂದ್ರವನ್ನು ಭಾನುವಾರ ರೈತರ ಬಳಕೆಗೆ ಮುಕ್ತಗೊಳಿಸಲಾಯಿತು.
ಸೇನೆಯಿಂದ ನಿವೃತ್ತರಾದ ಮಾಜಿ ಸೈನಿಕರೇ ಸೇರಿಕೊಂಡು ‘ವೆಂಕಟೇಶ್ವರ ಕೋ ಆಪರೇಟಿವ್ ಪವರ್ ಆ್ಯಂಡ್ ಅಗ್ರೊ ಪ್ರೊಸೆಸಿಂಗ್ ಕಂಪನಿ’ ಸ್ಥಾಪಿಸಿದ್ದಾರೆ. ಇದರಡಿ ಕೃಷಿ ಕೆಲಸ ಹಾಗೂ ರೈತರ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ. ಹಾವೇರಿಯ ಬಸವೇಶ್ವರನಗರದಲ್ಲಿ ಕಚೇರಿ ತೆರೆಯಲಾಗಿದ್ದು, 9 ಸಾವಿರ ರೈತರು ಈಗಾಗಲೇ ಸದಸ್ಯತ್ವ ನೋಂದಣಿ ಮಾಡಿಸಿದ್ದಾರೆ.
ಕೇಂದ್ರವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಸಂಸದ ಬಸವರಾಜ ಬೊಮ್ಮಾಯಿ, ‘ಪ್ರಧಾನಿ ನರೇಂದ್ರ ಮೋದಿ ಅವರು ನೈಸರ್ಗಿಕ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ರೈತರು ತಮ್ಮ ಪೂರ್ವಜರ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಹೆಚ್ಚಿನ ಉತ್ಪಾದನೆ ಮಾಡಬೇಕು. ಮಾಜಿ ಸೈನಿಕರು ಕಟ್ಟಿರುವ ಈ ಕಂಪನಿ, ರೈತರನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಸೈನಿಕರ ಮೇಲೆ ವಿಶ್ವಾಸ ಹೆಚ್ಚಿರುತ್ತದೆ. ಅದನ್ನು ಕಂಪನಿ ಉಳಿಸಿಕೊಳ್ಳಬೇಕು’ ಎಂದರು.
2 ಲಕ್ಷ ಸದಸ್ಯರು: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಆರಂಭವಾದ ಕಂಪನಿ, ಇಂದು ದೇಶದಾದ್ಯಂತ ಕಚೇರಿಗಳನ್ನು ಹೊಂದಿದೆ. ಕಂಪನಿಯಲ್ಲಿ 2 ಲಕ್ಷ ರೈತರು ಸದಸ್ಯತ್ವ ಪಡೆದಿದ್ದಾರೆ. ಸಬ್ಸಿಡಿ ದರದಲ್ಲಿ ಬೀಜ, ಔಷಧಿ, ಗೊಬ್ಬರ ಪಡೆಯುತ್ತಿದ್ದಾರೆ. ಜೊತೆಗೆ, ಕೀಟನಾಶಕ ಖರೀದಿ ಮೇಲೆಯೇ ವಿಮೆ ಸೌಲಭ್ಯ ನೀಡಲಾಗುತ್ತಿದೆ.
‘ನಮ್ಮ ಕಂಪನಿಯು ಸರ್ಕಾರ ಹಾಗೂ ಖಾಸಗಿಯವರ ಸಹಕಾರವಿಲ್ಲದೇ, ಸದಸ್ಯರ ಮೂಲಕ ಸ್ವಾವಲಂಬಿಯಾಗಿ ಬೆಳೆಯುತ್ತಿದೆ. ರೈತರ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಮೆಕ್ಕೆಜೋಳವನ್ನು ಎಂಎಸ್‌ಪಿ ದರದಲ್ಲಿ ಖರೀದಿಸಿ, ಇಥೆನಾಲ್ ಮಾಡುವ ಕಾರ್ಖಾನೆಯನ್ನು ಸೊಲ್ಲಾಪುರದಲ್ಲಿ ನಿರ್ಮಿಸಲಾಗುತ್ತಿದೆ’ ಎಂದು ಮಾಜಿ ಸೈನಿಕರು ತಿಳಿಸಿದರು.
ಕಂಪನಿಯ ಶಿವಾಜಿ ಶ್ಯಾಮರಾವ್ ಡೋಲೆ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.