
ಹಾವೇರಿ: ಅಪಘಾತ ಹಾಗೂ ಆರೋಗ್ಯದ ತುರ್ತು ಸಂದರ್ಭಗಳಲ್ಲಿ ಜನರನ್ನು ಆಸ್ಪತ್ರೆಗೆ ಉಚಿತವಾಗಿ ಕರೆದೊಯ್ಯುವ ಉದ್ದೇಶದಿಂದ ರಾಜ್ಯಾದ್ಯಂತ ‘108 ಆರೋಗ್ಯ ಕವಚ’ ಸೇವೆ ಆರಂಭಿಸಲಾಗಿದೆ. ಈ ಸೇವೆಯನ್ನು ಸರ್ಕಾರದ ಸುಪರ್ದಿಗೆ ಪಡೆಯುವ ಪ್ರಕ್ರಿಯೆ ನಡೆಯುತ್ತಿರುವ ದಿನಗಳಲ್ಲಿಯೇ ಹಾವೇರಿ ಜಿಲ್ಲೆಯಲ್ಲಿ ‘108 ಆಂಬುಲೆನ್ಸ್’ ಸೇವೆ ಅಲಭ್ಯವಾಗುತ್ತಿದ್ದು, ತುರ್ತು ಸಂದರ್ಭಗಳಲ್ಲಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಜಿಲ್ಲಾಸ್ಪತ್ರೆ ಹಾಗೂ ಏಳು ತಾಲ್ಲೂಕು ಕೇಂದ್ರಗಳಲ್ಲಿ ತಾಲ್ಲೂಕು ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಅಖಂಡ ಧಾರವಾಡ ಜಿಲ್ಲೆಯಿಂದ ವಿಭಜನೆಗೊಂಡು ಹೊಸ ಜಿಲ್ಲೆಯಾಗಿರುವ ಹಾವೇರಿ ಜಿಲ್ಲೆಯಲ್ಲಿ ಇಂದಿಗೂ ಜನರಿಗೆ ಸುಸಜ್ಜಿತ ಆರೋಗ್ಯ ಸೇವೆ ಒದಗಿಸುವಲ್ಲಿ ಸರ್ಕಾರ ಸಾಕಷ್ಟು ಹಿಂದುಳಿದಿದೆ.
ಜಿಲ್ಲೆಯ ಬಹುತೇಕರು ಯಾವುದಾದರೂ ಆರೋಗ್ಯ ಸಮಸ್ಯೆ ಉಂಟಾದರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೋಗುತ್ತಾರೆ. ಸಣ್ಣ ಆರೋಗ್ಯ ಸಮಸ್ಯೆಗಳಿದ್ದರೆ, ಅಲ್ಲಿಯೇ ಚಿಕಿತ್ಸೆ ದೊರೆಯುತ್ತದೆ. ಆದರೆ, ಗಂಭೀರ ಸಮಸ್ಯೆಗಳಿದ್ದರೆ ಬೇರೆ ಊರಿಗೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ.
ಆರೋಗ್ಯ ಸಮಸ್ಯೆ, ಅಪಘಾತ, ಹೆರಿಗೆ ಸೇರಿದಂತೆ ತುರ್ತು ಆರೋಗ್ಯದ ಸಂದರ್ಭಗಳಲ್ಲಿ ಆಸ್ಪತ್ರೆಗೆ ಹೋಗುವ ಜನರಿಗಾಗಿ 108 ಆಂಬುಲೆನ್ಸ್ ಸೇವೆ ಪರಿಚಯಿಸಲಾಗಿದೆ. ಸದ್ಯ ಖಾಸಗಿ ಸಂಸ್ಥೆಯವರು ಈ ಸೇವೆ ನಿರ್ವಹಣೆ ಮಾಡುತ್ತಿದ್ದಾರೆ. ಈ ಸೇವೆಯನ್ನು ಮುಂದಿನ ದಿನಗಳಲ್ಲಿ ಸರ್ಕಾರದಿಂದಲೇ ನಡೆಸುವ ಬಗ್ಗೆ ಈಗಾಗಲೇ ತೀರ್ಮಾನವಾಗಿದೆ.
‘108 ಆರೋಗ್ಯ ಕವಚ’ ಆಂಬುಲೆನ್ಸ್ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಸುಪರ್ದಿಗೆ ತೆಗೆದುಕೊಳ್ಳುವ ಮುನ್ನವೇ, ಹಾವೇರಿ ಜಿಲ್ಲೆಯಲ್ಲಿ ಆಂಬುಲೆನ್ಸ್‌ಗಳ ಕೊರತೆ ಕಂಡುಬರುತ್ತಿದೆ.
ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಹಾಗೂ ಇತರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನರಿಗೆ ಸೂಕ್ತ ಸಮಯದಲ್ಲಿ 108 ಆಂಬುಲೆನ್ಸ್‌ಗಳು ಸಿಗುತ್ತಿಲ್ಲವೆಂಬ ಆರೋಪ ವ್ಯಕ್ತವಾಗುತ್ತಿದೆ.
ಹಿರೇಕೆರೂರಿನಲ್ಲಿ ಸಿಗದ ಆಂಬುಲೆನ್ಸ್: ‘ನನ್ನ ಅಣ್ಣನ ಪತ್ನಿ, ಗರ್ಭಿಣಿ. ನ. 12ರಂದು ದಿಢೀರ್ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹಿರೇಕೆರೂರು ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯಲು 108 ಆಂಬುಲೆನ್ಸ್‌ಗೆ ಕರೆ ಮಾಡಿದ್ದೆ. ಆದರೆ, ವಾಹನವಿಲ್ಲವೆಂದು ಹೇಳಿದರು. ಹೆಚ್ಚು ಹಣ ಕೊಟ್ಟು ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು’ ಎಂದು ಹಿರೇಕೆರೂರು ತಾಲ್ಲೂಕಿನ ನಿವಾಸಿಯೊಬ್ಬರು ಹೇಳಿದರು.
‘ತಾಲ್ಲೂಕು ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಸಿಗಲಿಲ್ಲ. ಬೇರೆ ಆಸ್ಪತ್ರೆಗೆ ಹೋಗುವಂತೆ ವೈದ್ಯರು ಹೇಳಿದರು. ಶಿಕಾರಿಪುರಕ್ಕೆ ಹೋಗಲು ಮುಂದಾದೆವು. ಅವಾಗಲೂ 108 ಆಂಬುಲೆನ್ಸ್ ಸಿಗಲಿಲ್ಲ. ಆಸ್ಪತ್ರೆಯಲ್ಲಿ ಜಗಳ ಮಾಡಿದಾಗ, ನಗು–ಮಗು ಆಂಬುಲೆನ್ಸ್ ಕಳುಹಿಸಿದರು’ ಎಂದು ತಿಳಿಸಿದರು.
ಹಿರೇಕೆರೂರು ಮಾತ್ರವಲ್ಲದೇ, ಹಾವೇರಿ, ರಾಣೆಬೆನ್ನೂರು, ಬ್ಯಾಡಗಿ, ರಟ್ಟೀಹಳ್ಳಿ, ಸವಣೂರು, ಶಿಗ್ಗಾವಿ, ಹಾನಗಲ್ ತಾಲ್ಲೂಕಿನಲ್ಲೂ ಆಂಬುಲೆನ್ಸ್‌ಗಳ ಕೊರತೆಯಿದೆ. ಆಂಬುಲೆನ್ಸ್ ಸಿಗದೇ ಚಿಕಿತ್ಸೆ ದೊರೆಯುವಲ್ಲಿ ವಿಳಂಬವಾಗಿದ್ದಕ್ಕೆ ಕೆಲವು ಕಡೆಗಳಲ್ಲಿ ಸಾವುಗಳೂ ಸಂಭವಿಸುತ್ತಿವೆ. ಇತ್ತೀಚೆಗೆಷ್ಟೇ ತಿಳವಳ್ಳಿಯ ಆಸ್ಪತ್ರೆ ಎದುರು ಜನರು ಪ್ರತಿಭಟನೆ ಮಾಡಿ, ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕಿದ್ದರು.
ಹೆಸರಿಗಷ್ಟೇ 24 ಆಂಬುಲೆನ್ಸ್: 108 ಆರೋಗ್ಯ ಕವಚದ ಮೂಲಕ ಜಿಲ್ಲೆಗೆ 24 ಆಂಬುಲೆನ್ಸ್‌ಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ, ಅದರಲ್ಲಿ 7 ಆಂಬುಲೆನ್ಸ್‌ಗಳು ಮಾತ್ರ ಕಾರ್ಯಾಚರಣೆಯಲ್ಲಿವೆ. ಉಳಿದ ಆಂಬುಲೆನ್ಸ್‌ಗಳ ಸುಳಿವಿಲ್ಲ. ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಕೇಳಿದರೆ, ಮಾಹಿತಿ ನೀಡಲು ತಡವರಿಸುತ್ತಿದ್ದಾರೆ.
‘ಜಿಲ್ಲೆಗೆ 24 ಆಂಬುಲೆನ್ಸ್‌ಗಳನ್ನು ಹಂಚಿಕೆ ಮಾಡಿದೆ. ಆದರೆ, ನಿತ್ಯ 7 ಆಂಬುಲೆನ್ಸ್ ಮಾತ್ರ ಲಭ್ಯವಿವೆ. ಉಳಿದ ಆಂಬುಲೆನ್ಸ್‌ಗಳ ಮಾಹಿತಿಯೇ ಲಭ್ಯವಿಲ್ಲ. ಈ ಬಗ್ಗೆಯೂ ಅಧಿಕಾರಿಗಳು ತಿಳಿಸುತ್ತಿಲ್ಲ’ ಎಂದು ಜಿಲ್ಲಾಸ್ಪತ್ರೆಯ ವೈದ್ಯರೊಬ್ಬರು ಹೇಳಿದರು.
‘ಆಸ್ಪತ್ರೆಗೆ ಬರುವ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಾಗ, ಹುಬ್ಬಳ್ಳಿಗೆ ಕರೆದೊಯ್ಯುವಂತೆ ಹೇಳುತ್ತೇವೆ. ರೋಗಿಯ ಸಂಬಂಧಿಕರೇ 108ಕ್ಕೆ ಕರೆ ಮಾಡಿ ಆಂಬುಲೆನ್ಸ್ ಪಡೆಯಲು ಪ್ರಯತ್ನಿಸುತ್ತಾರೆ. ಆದರೆ, ಆಂಬುಲೆನ್ಸ್‌ಗಳಿಲ್ಲವೆಂಬ ಉತ್ತರವೇ ಹೆಚ್ಚಾಗಿ ಬರುತ್ತಿದೆ. ಇದರಿಂದ ಬಡ ರೋಗಿಗಳು ಕಷ್ಟಪಡುತ್ತಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸಮಸ್ಯೆ ಪರಿಹಾರವಾಗುತ್ತಿಲ್ಲ’ ಎಂದು ತಿಳಿಸಿದರು.
ಕೆಟ್ಟು ನಿಂತಿರುವ ಆಂಬುಲೆನ್ಸ್‌ಗಳು: ‘ಜಿಲ್ಲೆಯ 24 ಆಂಬುಲೆನ್ಸ್‌ಗಳ ಪೈಕಿ 7 ಮಾತ್ರ ಸೇವೆಯಲ್ಲಿವೆ. ಉಳಿದ ಆಂಬುಲೆನ್ಸ್‌ಗಳು ಕೆಟ್ಟು ನಿಂತಿವೆ. ಕೆಲ ಆಂಬುಲೆನ್ಸ್‌ಗಳನ್ನು, ಆಸ್ಪತ್ರೆಗಳ ಎದುರು ನಿಲ್ಲಿಸಲಾಗಿದೆ. ಕೆಲವು ಗ್ಯಾರೇಜ್‌ನಲ್ಲಿವೆ. ಅವುಗಳ ದುರಸ್ತಿ ಇದುವರೆಗೂ ಆಗಿಲ್ಲ. ಹೀಗಾಗಿ, ಜಿಲ್ಲೆಯಲ್ಲಿ ಆಂಬುಲೆನ್ಸ್ ಕೊರತೆ ಹೆಚ್ಚಾಗಿದೆ’ ಎಂದು 108 ಆರೋಗ್ಯ ಕವಚ ಆಂಬುಲೆನ್ಸ್ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.
‘ಜನರಿಗೆ ತುರ್ತು ಸಹಾಯಕ್ಕೆಂದು ಈ ಕೆಲಸ ಮಾಡುತ್ತಿದ್ದೇವೆ. ಆದರೆ, ಆಂಬುಲೆನ್ಸ್‌ಗಳ ಕೊರತೆ ಸಾಕಷ್ಟಿದೆ. ಗ್ಯಾರೇಜ್‌ನಲ್ಲಿರುವ ಆಂಬುಲೆನ್ಸ್‌ಗಳನ್ನು ತ್ವರಿತವಾಗಿ ದುರಸ್ತಿ ಮಾಡಿ ಕೊಟ್ಟರೆ ಮಾತ್ರ ಸೇವೆ ಸುಗಮವಾಗಲಿದೆ. ಮುಂಬರುವ ದಿನಗಳಲ್ಲಿ ಈ ಸೇವೆ ಸರ್ಕಾರದ ಸುಪರ್ದಿಗೆ ಬರಲಿದೆ. ಅದಕ್ಕೂ ಮುನ್ನವೇ ವ್ಯವಸ್ಥೆಯನ್ನು ಸರಿಪಡಿಸಬೇಕು’ ಎಂದು ಕೋರಿದರು.
ಹಾವೇರಿ ಜಿಲ್ಲಾಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆ ಬಳಿಯೇ ಖಾಸಗಿ ಆಂಬುಲೆನ್ಸ್‌ಗಳು ಸಾಲುಗಟ್ಟಿ ನಿಲ್ಲುತ್ತಿವೆ. ಜಿಲ್ಲಾಸ್ಪತ್ರೆಯಲ್ಲಂತೂ ದೊಡ್ಡ ತಂಗುದಾಣವೇ ಸೃಷ್ಟಿಯಾಗಿದೆ. 108 ಆಂಬುಲೆನ್ಸ್ ಸಿಗದೇ ಪರದಾಡುವ ಜನರನ್ನು ಸಂಪರ್ಕಿಸುವ ಖಾಸಗಿ ಚಾಲಕರು ದುಬಾರಿ ಬಾಡಿಗೆ ಕೇಳುತ್ತಿರುವ ಆರೋಪವಿದೆ.
ಸಾವು– ಬದುಕಿನ ನಡುವೆ ಹೋರಾಟ ನಡೆಸುವ ಜನರ ಎದುರೇ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟು ಹಗಲು ದರೋಡೆ ನಡೆಸುತ್ತಿದ್ದಾರೆ. ‘ಪ್ರಾಣ ಉಳಿದರೆ ಸಾಕು’ ಎನ್ನುವ ಜನರು ಕೇಳಿದಷ್ಟು ಹಣ ಕೊಟ್ಟು ಖಾಸಗಿ ಆಂಬುಲೆನ್ಸ್ ಬಾಡಿಗೆ ಪಡೆಯುತ್ತಿದ್ದಾರೆ. ಆದರೆ ದಿನದ ದುಡಿಮೆ ನಂಬಿ ಬದುಕುತ್ತಿರುವ ಬಡವರು ಖಾಸಗಿ ಆಂಬುಲೆನ್ಸ್‌ಗೆ ಹಣ ಹೊಂದಿಸಲಾಗದೇ ಕಣ್ಣೀರಿಡುತ್ತಿದ್ದಾರೆ. ‘ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ತಾಯಿಯನ್ನು ಹಾವೇರಿ ಜಿಲ್ಲಾಸ್ಪತ್ರೆಯಿಂದ ಹುಬ್ಬಳ್ಳಿಗೆ ಕರೆದೊಯ್ಯಬೇಕಿತ್ತು. ಆದರೆ 108 ಆಂಬುಲೆನ್ಸ್ ಸಿಗಲಿಲ್ಲ. ಖಾಸಗಿ ಆಂಬುಲೆನ್ಸ್‌ನವರನ್ನು ಕೇಳಿದರೆ ₹ 5000 ಹೇಳಿದರು.
ಕೊನೆಯಲ್ಲಿ ₹ 4000 ಒಪ್ಪಿದರು’ ಎಂದು ಎಪಿಎಂಸಿ ಮಾರುಕಟ್ಟೆಯ ಹಮಾಲಿ ಇರ್ಫಾನ್ ಅಳಲು ತೋಡಿಕೊಂಡರು. ‘ನಾನು ದಿನಕ್ಕೆ ₹ 500 ದುಡಿಯುತ್ತೇನೆ. ಅದರಲ್ಲೇ ಕುಟುಂಬ ನಡೆಸಬೇಕು. ಆರೋಗ್ಯ ಸಮಸ್ಯೆಯಾದರೆ ಸರ್ಕಾರಿ ಆಸ್ಪತ್ರೆಗೆ ಬರುತ್ತೇವೆ. ಆದರೆ ಆರೋಗ್ಯ ಸಮಸ್ಯೆ ಹೆಚ್ಚಾದಾಗ ದಿಢೀರ್ ಹುಬ್ಬಳ್ಳಿಗೆ ಹೋಗಿ ಎಂದು ವೈದ್ಯರು ಹೇಳಿದರೆ ಏನು ಮಾಡುವುದು. 108 ಆಂಬುಲೆನ್ಸ್‌ಗಳು ನಮಗೆ ಸಿಗುತ್ತಿಲ್ಲ. ಖಾಸಗಿ ಆಂಬುಲೆನ್ಸ್‌ಗೆ ಕೊಡುವಷ್ಟು ಹಣ ನನ್ನ ಬಳಿ ಇರುವುದಿಲ್ಲ’ ಎಂದರು. ‘ಜಿಲ್ಲಾಸ್ಪತ್ರೆಯಲ್ಲಿ ಸರ್ಕಾರಿ ಆಂಬುಲೆನ್ಸ್ ಸರಿಯಾಗಿ ಸಿಗುವುದಿಲ್ಲ. ಜಿಲ್ಲಾಸ್ಪತ್ರೆ ಎದುರಿಗಿರುವ ಖಾಸಗಿಯವರು ಸಾಕಷ್ಟು ಹಣ ಕೇಳುತ್ತಾರೆ. ಸರ್ಕಾರದಿಂದ ಆಂಬುಲೆನ್ಸ್ ವ್ಯವಸ್ಥೆ ಮಾಡಬೇಕು. ಇಲ್ಲ ಖಾಸಗಿ ಆಂಬುಲೆನ್ಸ್‌ಗಳಿಗೂ ದರ ನಿಗದಿ ಮಾಡಬೇಕು’ ಎಂದು ಜನರು ಕೋರುತ್ತಿದ್ದಾರೆ.
‘ಜಿಲ್ಲೆಯಲ್ಲಿ 24 ಆಂಬುಲೆನ್ಸ್‌ಗಳಿದ್ದು ಅದರಲ್ಲಿ 16 ಆಂಬುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿವೆ’ ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಪರಿಶೀಲನೆ ನಡೆಸಿದಾಗ ಕೇವಲ 7 ಆಂಬುಲೆನ್ಸ್‌ಗಳ ಮಾಹಿತಿ ಲಭ್ಯವಾಗುತ್ತಿದೆ. ಆಂಬುಲೆನ್ಸ್‌ಗಳ ಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವ ಅಧಿಕಾರಿಗಳು ಜನರು ಹಾಗೂ ಸರ್ಕಾರ ಎರಡಕ್ಕೂ ದಿಕ್ಕು ತಪ್ಪಿಸುತ್ತಿರುವುದಾಗಿ ರೋಗಿಗಳ ಸಂಬಂಧಿಕರು ದೂರುತ್ತಿದ್ದಾರೆ. ‘ಸರ್ಕಾರದ ಸಂಬಳ ಪಡೆಯುವ ಅಧಿಕಾರಿಗಳಿಗೆ ಬಡಜನರ ನೋವು ಅರ್ಥ ಆಗುವುದಿಲ್ಲ. ಕಚೇರಿಯಲ್ಲಿ ಕುಳಿತು ಲೆಕ್ಕೆ ಮಾಡಿ ಹೇಳುವ ಬದಲು 108ಕ್ಕೆ ಕರೆ ಮಾಡಿ ಒಂದು ಆಂಬುಲೆನ್ಸ್ ತರಿಸಿಕೊಂಡು ನೋಡಲಿ. ಅವರ ಮನೆಯಲ್ಲಿ ಯಾರಿಗಾದರೂ ತೊಂದರೆಯಾದರೆ ಬಡವರ ನೋವು ಅವರಿಗೆ ಅರ್ಥವಾಗುತ್ತದೆ’ ಎಂದು ರೋಗಿಯೊಬ್ಬರ ಸಂಬಂಧಿಯೊಬ್ಬರು ಹೇಳಿದರು.
‘108 ಆಂಬುಲೆನ್ಸ್‌ಗೆ ಪರ್ಯಾಯವಾಗಿ ಸರ್ಕಾರದ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಆಂಬುಲೆನ್ಸ್‌ಗಳನ್ನು ನೀಡಲಾಗಿದೆ. ಈ ಆಂಬುಲೆನ್ಸ್‌ಗಳನ್ನು ಜನರಿಗೆ ನೀಡಲು ಚಾಲಕರು ಡೀಸೆಲ್‌ಗೆ ಬೇಡಿಕೆ ಇರಿಸುತ್ತಿದ್ದಾರೆ. ಡೀಸೆಲ್ ಹಾಕಿಸಿ ಖುಷಿ ಕೊಟ್ಟರಷ್ಟೇ ರೋಗಿಗಳನ್ನು ಕರೆದೊಯ್ಯುವುದಾಗಿ ಚಾಲಕರು ಹೇಳುತ್ತಿದ್ದಾರೆ’ ಎಂದು ಹಾನಗಲ್ ನಿವಾಸಿಯೊಬ್ಬರು ದೂರಿದರು.
ಆಂಬುಲೆನ್ಸ್ ಆಸ್ಪತ್ರೆ ಔಷಧಿ ಸೇರಿದಂತೆ ಆರೋಗ್ಯ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳ ಪರಿಹಾರಕ್ಕಾಗಿ ಶೀಘ್ರವೇ ಪ್ರತ್ಯೇಕ ಸಭೆ ನಡೆಸಲಾಗುವುದು.-ಶಿವಾನಂದ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.