ADVERTISEMENT

₹ 26 ಸಾವಿರ ವೇತನಕ್ಕೆ ಆಗ್ರಹ: ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 3:02 IST
Last Updated 10 ಜುಲೈ 2025, 3:02 IST
ಹಾವೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ನಡೆದ ಪ್ರತಿಭಟನೆಯಲ್ಲಿ ಸೇರಿದ್ದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು
ಹಾವೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ನಡೆದ ಪ್ರತಿಭಟನೆಯಲ್ಲಿ ಸೇರಿದ್ದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು   

ಹಾವೇರಿ: ‘ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ‘ಸಿ’ ಮತ್ತು ‘ಡಿ’ ದರ್ಜೆಯ ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಕನಿಷ್ಠ ₹ 26 ಸಾವಿರ ವೇತನ ನೀಡಬೇಕು’ ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಜಿಲ್ಲೆಯಾದ್ಯಂತ ಬುಧವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾ ಕೇಂದ್ರ ಹಾವೇರಿಯ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ್ದ ಪ್ರತಿಭಟನಕಾರರು, ತಮ್ಮ ಬೇಡಿಕೆ ಈಡೇರಿಕೆಗಾಗಿ ಘೋಷಣೆ ಕೂಗಿ ಫಲಕಗಳನ್ನು ಪ್ರದರ್ಶಿಸಿದರು. ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಒಕ್ಕೂಟದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಪತ್ರ ರವಾನಿಸಿದರು.

‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅಂಗನವಾಡಿ ಸೇವೆಗೆ ಸೇರಿದವರಿಗೆ 2011–12ನೇ ಸಾಲಿನಿಂದ ನಿವೃತ್ತರಾದವರಿಗೆ ಗ್ಯಾಚ್ಯುಟಿ ನೀಡಬೇಕು. ಪೌಷ್ಠಿಕ ಆಹಾರ ವಿತರಿಸಲು ಜಾರಿಗೆ ತಂದಿರುವ ಫಲಾನುಭವಿಗಳ ಮುಖ ಚಹರೆ ಗುರುತಿಸುವ ಎಫ್‌ಆರ್‌ಎಸ್ ಪದ್ಧತಿಯನ್ನು ಕೈಬಿಡಬೇಕು. ನಿವೃತ್ತರಿಗೆ ಮಾಸಿಕ ₹ 10 ಸಾವಿರ ಪಿಂಚಣಿ ನೀಡಬೇಕು. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ADVERTISEMENT

‘ಅಂಗನವಾಡಿ ನೌಕರರ ನಿವೃತ್ತಿ ವಯಸ್ಸನ್ನು 65ಕ್ಕೆ ಏರಿಸಬೇಕು. 2 ಕೇಂದ್ರಗಳಲ್ಲಿ ಕೆಲಸ ಮಾಡುವವರಿಗೆ ಪ್ರಭಾರ ಭತ್ಯೆ ಹೆಚ್ಚಿಸಬೇಕು. ಅಂಗನವಾಡಿ ಹೊರತುಪಡಿಸಿ ಬೇರೆ ಕೆಲಸಗಳಿಗೆ ನಿಯೋಜಿಸಬಾರದು. ಕಾರ್ಮಿಕರ ಹಿತಕ್ಕೆ ಮಾರಕವಾಗಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು’ ಎಂದು ಅವರು ಒತ್ತಾಯಿಸಿದರು.

ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಸುನಂದಾ ರೇವಣ್ಕರ್, ಉಪಾಧ್ಯಕ್ಷೆ ಸುನಿತಾ ಮರ್ಕಳ್ಳಿ, ನಾಗರತ್ನ ಎಲಿಗಾರ, ಪ್ರೇಮ ಬೂದಪುರ, ರೇಷ್ಮಾ ಬಾನು, ಭಾರತಿ ಹಿರೇಮಠ ಪ್ರತಿಭಟನೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.