ADVERTISEMENT

ನೇತಾಜಿ ಮೂರ್ತಿ ಸ್ಥಾಪನೆಗೆ ಮನವಿ

ಹಾವೇರಿ ಯುವ ಬ್ರಿಗೇಡ್‌ ಸದಸ್ಯರಿಂದ ‘ಜೈ ಹಿಂದ್‌ ರನ್‌’: ಸುಭಾಷರ ಭಾವಚಿತ್ರಕ್ಕೆ ಮಾಲಾರ್ಪಣೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 13:57 IST
Last Updated 23 ಜನವರಿ 2021, 13:57 IST
ಹಾವೇರಿ ನಗರದಲ್ಲಿ ಯುವ ಬ್ರಿಗೇಡ್‌ ಸದಸ್ಯರು ‘ಜೈ ಹಿಂದ್‌ ರನ್‌’ ಹೆಸರಿನಲ್ಲಿ ಹಾಫ್‌ ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದರು 
ಹಾವೇರಿ ನಗರದಲ್ಲಿ ಯುವ ಬ್ರಿಗೇಡ್‌ ಸದಸ್ಯರು ‘ಜೈ ಹಿಂದ್‌ ರನ್‌’ ಹೆಸರಿನಲ್ಲಿ ಹಾಫ್‌ ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದರು    

ಹಾವೇರಿ: ನಗರದ ಸುಭಾಷ್‌ ವೃತ್ತದಲ್ಲಿ ಸುಭಾಷ್‌ ಚಂದ್ರ ಬೋಸ್‌ ಅವರ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂದುನೇತಾಜಿ ಸುಭಾಷ್ ಚಂದ್ರ ಭೋಸ್ ಯುವಕ ಸಂಘದ ವತಿಯಿಂದ ಶಾಸಕ ನೆಹರು ಓಲೇಕಾರ ಅವರಿಗೆ ಮನವಿ ಸಲ್ಲಿಸಲಾಯಿತು.

ಸುಭಾಷ್‌ ವೃತ್ತದಲ್ಲಿ ಶನಿವಾರ ಸುಭಾಷ್‌ ಅವರ 125ನೇ ಜನ್ಮದಿನವನ್ನು ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಹಲಸೂರು ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ‘ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರು ಭಾರತ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ಅದಮ್ಯ ದೇಶಭಕ್ತಿಯ ಮೂಲಕ ಇಂಡಿಯನ್‌ ನ್ಯಾಷನಲ್‌ ಆರ್ಮಿ (ಐಎನ್‌ಎ) ರಚಿಸಿ, ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದರು. ‘ನನಗೆ ರಕ್ತವನ್ನು ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ನೀಡುತ್ತೇನೆ’ ಎಂದು ಸಾರಿದ ಮಹಾನ್‌ ವ್ಯಕ್ತಿ ಎಂದು ಬಣ್ಣಿಸಿದರು.

ADVERTISEMENT

ಶಾಸಕ ನೆಹರು ಓಲೇಕಾರ ಮಾತನಾಡಿ, ನೇತಾಜಿಯವರು ಇಂದಿನ ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಸ್ವಾತಂತ್ರ್ಯ ಚಳವಳಿಯ ಕಾಲಘಟ್ಟದಲ್ಲಿ ಹಾವೇರಿ ನಗರಕ್ಕೆ ಆಗಮಿಸಿ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ್ದರು. ಇವರ ಪ್ರತಿಮೆಯನ್ನು ಶೀಘ್ರ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು.

ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ, ನಗರಸಭೆ ಸದಸ್ಯರಾದ ಗಿರೀಶ ತುಪ್ಪದ, ಬಾಬಣ್ಣ ಮೋಮಿನಗಾರ, ಶಿವರಾಜ ಮತ್ತಿಹಳ್ಳಿ, ಚನ್ನಮ್ಮ ಬ್ಯಾಡಗಿ, ನಂಜುಡೇಶ ಕಳ್ಳೇರ, ಸಂತೋಷ ಆಲದಕಟ್ಟಿ, ಬಸಣ್ಣ ಹೂಗಾರ, ವಿನಾಯಕ ಹಂಜಗಿ, ಪ್ರಸನ್ನ ಗಚ್ಚಿನಮಠ ಇದ್ದರು.ಕಿರಣ ಮತ್ತಿಹಳ್ಳಿ ಸ್ವಾಗತಿಸಿದರು, ನೀಕಿಲ ಡೊಗ್ಗಳ್ಳಿ ಕಾರ್ಯಕ್ರಮ ನಿರೂಪಿಸಿದರು.

ಜೈ ಹಿಂದ್ ರನ್‌

ಸುಭಾಷ್ ಚಂದ್ರ ಬೋಸ್ ಅವರ ಜಯಂತಿ ಅಂಗವಾಗಿ ಹಾವೇರಿ ಯುವ ಬ್ರಿಗೇಡ್ ವತಿಯಿಂದ ‘ಜೈ ಹಿಂದ್‌ ರನ್‌’ ಹೆಸರಿನಲ್ಲಿ ಹಾಪ್‌ ಮ್ಯಾರಥಾನ್‌ ನಡೆಯಿತು.

ಸಮವಸ್ತ್ರ ಧರಿಸಿದ್ದ ಬ್ರಿಗೇಡ್‌ ಸದಸ್ಯರು,ಸುಭಾಷ್ ಚಂದ್ರ ಬೋಸ್ ವೃತ್ತದಿಂದ ಓಟ ಆರಂಭಿಸಿದರು. ಮೇಲಿನಪೇಟೆ, ಎಂ.ಜಿ ರಸ್ತೆ, ಮಹಾತ್ಮ ಗಾಂಧಿ ವೃತ್ತ, ಮೈಲಾರ ಮಹಾದೇವಪ್ಪ ವೃತ್ತ, ಜೆ.ಪಿ.ವೃತ್ತ, ಜೆ,ಎಚ್. ಪಟೇಲ್ ವೃತ್ತ ಮಾರ್ಗವಾಗಿ ಸುಭಾಷ್ ಚಂದ್ರ ಬೋಸ್ ವೃತ್ತದವರೆಗೆ ಘೋಷಣೆಗಳನ್ನು ಕೂಗುತ್ತಾ ಸಾಗಿದರು.

ಮ್ಯಾರಾಥಾನ್‌ಗೆ ಬಿಜೆಪಿ ಮುಖಂಡ ಪ್ರದೀಪ ಮುಳ್ಳೂರು ಚಾಲನೆ ನೀಡಿದರು. ಯುವ ಬ್ರಿಗೇಡ್ ವಿಭಾಗ ಸಹ ಸಂಚಾಲಕರಾದ ಅಭಿಷೇಕ ಉಪ್ಪಿನ , ಜಿಲ್ಲಾ ಸಂಚಾಲಕ ಪ್ರಮೋದ ಮೆಳ್ಳಾಗಟ್ಟಿ ಇದ್ದರು. ಕಾರ್ಯಕ್ರಮ ಉದ್ದೇಶಿಸಿ ಯುವ ಬ್ರಿಗೇಡ್ ಕಾರ್ಯಕರ್ತ ಕಿರಣಕುಮಾರ ವಿವೇಕವಂಶಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.