
ಹಾವೇರಿ: ಬಹುತೇಕ ಕಡೆ ಬಯಲು ಸೀಮೆ ಹಾಗೂ ಅಲ್ಲಲ್ಲಿ ಅರೆಮಲೆನಾಡು ಹೊಂದಿರುವ ಹಾವೇರಿ ಜಿಲ್ಲೆಯಲ್ಲಿ ‘ಅಡಿಕೆ’ ಬೆಳೆ ಪ್ರದೇಶ ಅತೀ ವೇಗದಲ್ಲಿ ಹೆಚ್ಚಳವಾಗುತ್ತಿದೆ. ಇದರ ಜೊತೆಯಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿಯೂ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಉತ್ತಮ ಪರಿಹಾರ ಲಭ್ಯವಾಗುತ್ತಿದೆ.
ಹತ್ತಿ ಬೆಳೆಯುತ್ತಿದ್ದ ಜಿಲ್ಲೆಯಲ್ಲಿ ಇದೀಗ ಮೆಕ್ಕೆಜೋಳದ ಹಾವಳಿ ಹೆಚ್ಚಾಗಿದೆ. ಇದರ ಜೊತೆಯಲ್ಲಿಯೇ ಹಲವು ರೈತರು, ನಿಧಾನವಾಗಿ ತೋಟಗಾರಿಕೆ ಬೆಳೆಯತ್ತ ವಾಲುತ್ತಿದ್ದಾರೆ. ಇದರ ಪರಿಣಾಮವಾಗಿ ಅಡಿಕೆ ಬೆಳೆ ಪ್ರದೇಶವೂ ವೃದ್ಧಿಯಾಗುತ್ತಿದೆ. 2019–20ನೇ ಸಾಲಿನಲ್ಲಿ 7,115 ಹೆಕ್ಟೇರ್ ಪ್ರದೇಶದಲ್ಲಿದ್ದ ಅಡಿಕೆ, 2025–26ನೇ ಸಾಲಿನಲ್ಲಿ 22,325 ಹೆಕ್ಟೇರ್‌ಗೆ ಬಂದಿರುವುದೇ ಇದಕ್ಕೆ ಪುರಾವೆ.
ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಿಗೆ ಗಡಿ ಹಂಚಿಕೊಂಡಿರುವ ಹಾನಗಲ್, ಹಿರೇಕೆರೂರು, ರಟ್ಟೀಹಳ್ಳಿ, ಶಿಗ್ಗಾವಿ ತಾಲ್ಲೂಕಿನ ಅರೆಮಲೆನಾಡು ಪ್ರದೇಶಗಳಲ್ಲಿ ಅಡಿಕೆ ಬೆಳೆ ಪ್ರದೇಶ ಹೆಚ್ಚಿರುವುದು ಸಾಮಾನ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಬಯಲು ಸೀಮೆಯಾದ ಹಾವೇರಿ ಹಾಗೂ ಸವಣೂರು ತಾಲ್ಲೂಕಿನಲ್ಲೂ ಅಡಿಕೆ ನಾಟಿ ನಡೆಯುತ್ತಿದೆ. ಮಳೆಯಾಶ್ರಿತದ ಜೊತೆಯಲ್ಲಿ ಕೊಳವೆ ಬಾವಿಯ ನೀರಾವರಿ ಸೌಲಭ್ಯದ ಮೂಲಕ ರೈತರು ಅಡಿಕೆ ಬೆಳೆಸುತ್ತಿದ್ದಾರೆ.
‘ಸದ್ಯದ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಹೆಚ್ಚಿದೆ. ಜೊತೆಗೆ, ಬೇಡಿಕೆಯೂ ಹೆಚ್ಚಿದೆ. ಐದರಿಂದ ಏಳು ವರ್ಷ ಕಷ್ಟಪಟ್ಟು ಅಡಿಕೆ ಸಸಿಗಳನ್ನು ಬೆಳೆಸಿದರೆ, ಮುಂಬರುವ ವರ್ಷಗಳಲ್ಲಿ ಫಸಲು ಬಂದಂತೆ ಪ‍್ರತಿ ವರ್ಷವೂ ಲಾಭ ಪಡೆಯಬಹುದು’ ಎಂಬ ಲೆಕ್ಕಾಚಾರ ರೈತರದ್ದಾಗಿದೆ. ಇದೇ ಕಾರಣಕ್ಕೆ, ಆಹಾರ ಉತ್ಪನ್ನ ಬೆಳೆಯುತ್ತಿದ್ದ ಜಮೀನುಗಳಲ್ಲಿ ಇದೀಗ ಅಡಿಕೆ ಸಸಿಗಳು ರಾರಾಜಿಸುತ್ತಿವೆ. ರೈತರು ಮಾತ್ರವಲ್ಲದೇ, ದೊಡ್ಡ ಉದ್ಯಮಿ ಹಾಗೂ ವ್ಯಾಪಾರಿಗಳು ಸಹ ಜಮೀನುಗಳಲ್ಲಿ ಖರೀದಿಸಿ ಅಡಿಕೆ ಬೆಳೆದು ಪೋಷಣೆ ಮಾಡುತ್ತಿದ್ದಾರೆ.
ರೈತರ ಕೈ ಹಿಡಿದ ಪರಿಹಾರ: ಅಡಿಕೆ ಫಸಲು ಬಿಡುವ ಸಮಯದಲ್ಲಿ ಹವಾಮಾನ ವೈಪರೀತ್ಯದಿಂದ ರೈತರಿಗೆ ನಷ್ಟ ಉಂಟಾಗುತ್ತದೆ. ಇದೇ ಕಾರಣಕ್ಕೆ ಸರ್ಕಾರ, ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಿಂದ ಹಾವೇರಿ ಜಿಲ್ಲೆಯ ರೈತರು ಪ್ರತಿ ವರ್ಷವೂ ಉತ್ತಮ ರೀತಿಯ ಪರಿಹಾರ ಪಡೆದುಕೊಳ್ಳುತ್ತಿದ್ದಾರೆ.
‘ಜಿಲ್ಲೆಯಲ್ಲಿ 22,325 ಹೆಕ್ಟೇರ್‌ನಲ್ಲಿ ಅಡಿಕೆ ಬೆಳೆಯಿದೆ. 87,709 ಟನ್ ಉತ್ಪನ್ನ ಬರುತ್ತಿದೆ. 2024–25ನೇ ಸಾಲಿನಲ್ಲಿ ಅಡಿಕೆ ಬೆಳೆ ನಷ್ಟವಾಗಿದ್ದಕ್ಕೆ, ಹಾವೇರಿ ಜಿಲ್ಲೆಯ 13,595 ರೈತರಿಗೆ 30.44 ಕೋಟಿ ಪರಿಹಾರ ಮಂಜೂರಾಗಿದೆ. ಅಡಿಕೆ ಬೆಳೆಯ ನಷ್ಟದಲ್ಲಿದ್ದ ರೈತರಿಗೆ ಪರಿಹಾರ ಕೈ ಹಿಡಿದಿದೆ’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ರಾಜ್ಯದಲ್ಲಿ 1,73,060.42 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆದಿರುವ 5,28,705 ರೈತರು ಬೆಳೆ ವಿಮೆಗೆ ಅರ್ಜಿ ಸಲ್ಲಿಸಿದ್ದರು. 3,65,920 ರೈತರಿಗೆ ₹ 472.54 ಕೋಟಿ ವಿಮಾ ಮೊತ್ತ ಪಾವತಿಸಲಾಗಿದೆ. 2025–26ನೇ ಸಾಲಿನಲ್ಲಿಯೂ ಈಗಾಗಲೇ 6,52,440 ರೈತರು ಅರ್ಜಿ ಸಲ್ಲಿಸಿದ್ದಾರೆ’ ಎಂದರು.
‘ಗ್ರಾಮಗಳವಾರು ವಿಮೆ ವ್ಯತ್ಯಾಸ’
‘ರಾಜ್ಯದಲ್ಲಿ ನೋಂದಾಯಿತ ವಿಮಾ ವಿಸ್ತೀರ್ಣದ ಅಡಿಕೆಗೆ ಒಂದು ಎಕರೆಗೆ ಸರಾಸರಿ ₹ 12768.13ರಂತೆ ಪರಿಹಾರ ನೀಡಲಾಗುತ್ತಿದೆ’ ಎಂದು ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದ್ದಾರೆ. ಅಡಿಕೆ ವಿಮೆ ವ್ಯತ್ಯಾಸದ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಟರ್ಮ್ ಶೀಟ್ ಹಾಗೂ ಹವಾಮಾನ ಸೂಚ್ಯಂಕಗಳ ಆಧಾರದಲ್ಲಿ ಘಟಕವಾರು (ಗ್ರಾಮ ಪಂಚಾಯಿತಿ) ವಿಮೆ ಲೆಕ್ಕಾಚಾರ ಮಾಡಲಾಗುತ್ತದೆ. ಇದರಿಂದ ಸಹಜವಾಗಿ ಪರಿಹಾರದ ಮೊತ್ತದಲ್ಲಿ ವ್ಯತ್ಯಾಸ ಕಂಡುಬರುತ್ತದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.