ADVERTISEMENT

ಬಂಜಾರ ಗುರುಪೀಠದ ಪೀಠಾಧ್ಯಕ್ಷರ ಮೇಲೆ ಹಲ್ಲೆ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 18 ಮೇ 2022, 9:42 IST
Last Updated 18 ಮೇ 2022, 9:42 IST
ಸೇವಾಲಾಲ ಬಂಜಾರ ಗುರುಪೀಠದ ಪೀಠಾಧ್ಯಕ್ಷ ಕುಮಾರ ಮಹಾರಾಜರು
ಸೇವಾಲಾಲ ಬಂಜಾರ ಗುರುಪೀಠದ ಪೀಠಾಧ್ಯಕ್ಷ ಕುಮಾರ ಮಹಾರಾಜರು   

ಸವಣೂರ (ಹಾವೇರಿ ಜಿಲ್ಲೆ): ಟ್ರ್ಯಾಕ್ಟರ್‌ನಲ್ಲಿ ತೆರಳುತ್ತಿದ್ದ ಯುವಕನಿಗೆ ಡಿಜೆ ಸೌಂಡ್ ಕಡಿಮೆಗೊಳಿಸಲು ತಿಳಿ ಹೇಳಿದ ಬಂಜಾರ ಗುರುಪೀಠದ ಕುಮಾರ ಮಹಾರಾಜರ ಮೇಲೆ ನಾಲ್ವರು ಯುವಕರು ತಾಲ್ಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಹಲ್ಲೆ ಮಾಡಿದ್ದು ಈ ಸಂಬಂಧ ಮಂಗಳವಾರ ಪ್ರಕರಣ ದಾಖಲಾಗಿದೆ.

ಗ್ರಾಮದ ಶ್ರೀಮಠದ ಹತ್ತಿರದಲ್ಲಿ ಡಿಜೆ ಸೌಂಡ್ ಕಡಿಮೆಗೊಳಿಸಲು ಕುಮಾರ ಮಹಾರಾಜರು ಕೋರಿದಾಗ ಯುವಕನೊಬ್ಬ ಧ್ವನಿ ಕಡಿಮೆಗೊಳಿಸಿಕೊಂಡು ಸಾಗಿದ್ದಾನೆ. ಪುನಃ ಸಂಜೆ ಮೂವರನ್ನು ಕರೆತಂದು ಗುರುಪೀಠದ ಪಕ್ಕದ ಜಮೀನಿನಲ್ಲಿ ಹೆಚ್ಚು ಧ್ವನಿಯಿಟ್ಟು ಜಮೀನು ಉಳುಮೆಗೆ ಮುಂದಾಗಿದ್ದ.

ಈ ಸಂದರ್ಭದಲ್ಲಿ ಮರಳಿ ಸ್ವಾಮೀಜಿ, ಪೂಜೆಗೆ ತೊಂದರೆಯಾಗುತ್ತಿದೆ. ಧ್ವನಿ ಕಡಿಮೆ ಇಟ್ಟುಕೊಳ್ಳುವಂತೆ ಯುವಕರಿಗೆ ತಿಳಿ ಹೇಳಲು ಹೋದಾಗ ನಾಲ್ವರು ಯುವಕರು ಸ್ವಾಮೀಜಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಸೋಮವಾರ ಸಂಜೆ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.

ADVERTISEMENT

ಈ ಕುರಿತು ಕೃಷ್ಣಾಪುರ ಗ್ರಾಮದ ಕೃಷ್ಣಾ ರಾಜನಗೌಡ್ರ ಗೌಡ್ರ, ದ್ಯಾಮಣ್ಣ ವೀರಪ್ಪ ಗೊಲ್ಲರ, ಕುಂದಗೋಳ ತಾಲ್ಲೂಕಿನ ಸೋಮನಕಟ್ಟಿ ಗ್ರಾಮದ ಪುಟ್ಟಪ್ಪ ವೀರಪ್ಪಗೌಡ್ರ, ಸುರೇಶ ಬಸನಗೌಡ ತಿಮ್ಮನಗೌಡ್ರ ಇವರ ಮೇಲೆ ಸವಣೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನನಗೆ ಜೀವ ಬೆದರಿಕೆಯಿದೆ:

‘ಕೃಷ್ಣಾಪುರದಲ್ಲಿ ನನಗೆ ಜೀವ ಬೇದರಿಕೆ ಹಾಕುತ್ತಾರೆ. ಸೇವಾಲಾಲ ಬಂಜಾರ ಗುರುಪೀಠದ ದಲಿತ ಸ್ವಾಮೀಜಿಗೆ ಹಾಗೂ ಶ್ರೀಮಠಕ್ಕೆ ಅವಮಾನ ಮಾಡಿದ್ದಾರೆ. ಈ ಹಿಂದೆ ಶ್ರೀಮಠದಲ್ಲಿ ಆಚರಿಸಿದ್ದ ಬೋಗ್ ಕಾರ್ಯಕ್ರಮದಲ್ಲಿ (ಹೋಮ) ಕೆಲ ಯುವಕರು ಮೂತ್ರವನ್ನು ಮಾಡಿದ್ದಾರೆ. ಜಾತಿ ನೆಪದಲ್ಲಿ ನಮ್ಮ ಮೇಲೆ ನಿರಂತರ ದೌರ್ಜನ್ಯ ಎಸಗುತ್ತಿದ್ದಾರೆ. ಆದ್ದರಿಂದ, ಈ ಬಾರಿ ನಾನೇ ಪೊಲೀಸ್‌ ಠಾಣೆಯ ಮೆಟ್ಟಿಲು ಏರಿ ಪ್ರಕರಣ ದಾಖಲಿಸಿದ್ದೇನೆ. ರಾಜ್ಯದ ಬಂಜಾರ ಸಮುದಾಯ ಸೇರಿದಂತೆ ಸರ್ವ ಧರ್ಮದವರು ನನ್ನ ಬೆಂಬಲಕ್ಕೆ ನಿಲ್ಲುತ್ತಾರೆ ಎನ್ನುವ ನಂಬಿಕೆ ನನಗಿದೆ. ಹಿರಿಯ ಸ್ವಾಮೀಜಿಗಳ ಮಾರ್ಗದರ್ಶನ ಪಡೆದು ನಾನು ಪ್ರಕರಣವನ್ನು ದಾಖಲಿಸಿದ್ದೇನೆ. ನನ್ನ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು’ ಎಂದು ಬಂಜಾರ ಗುರುಪೀಠದ ಕುಮಾರ ಮಹಾರಾಜರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.