ADVERTISEMENT

ಬ್ಯಾಡಗಿ: ನಿವೇಶನ ವಂಚಿತ ಮಹಿಳೆಯರ ಧರಣಿ

ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ: ಅನರ್ಹರಿಗೆ ಹಂಚಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 2:35 IST
Last Updated 5 ನವೆಂಬರ್ 2025, 2:35 IST
ಬ್ಯಾಡಗಿಯಲ್ಲಿ ಆಶ್ರಯ ಯೋಜನೆಯಡಿ ಮನೆಗಳಿಗಾಗಿ ಅರ್ಜಿ ಸಲ್ಲಿಸಿದ್ದ ನಿವೇಶನ ವಂಚಿತ ನೂರಾರು ಮಹಿಳೆಯರು ಮಂಗಳವಾರ ಪುರಸಭೆ ಎದುರು ಧರಣಿ ನಡೆಸಿದರು
ಬ್ಯಾಡಗಿಯಲ್ಲಿ ಆಶ್ರಯ ಯೋಜನೆಯಡಿ ಮನೆಗಳಿಗಾಗಿ ಅರ್ಜಿ ಸಲ್ಲಿಸಿದ್ದ ನಿವೇಶನ ವಂಚಿತ ನೂರಾರು ಮಹಿಳೆಯರು ಮಂಗಳವಾರ ಪುರಸಭೆ ಎದುರು ಧರಣಿ ನಡೆಸಿದರು   

ಬ್ಯಾಡಗಿ: ಪಟ್ಟಣದಲ್ಲಿ ಆಶ್ರಯ ಯೋಜನೆಯಡಿ ಮನೆಗಳಿಗಾಗಿ ಅರ್ಜಿ ಸಲ್ಲಿಸಿದ್ದ ನಿವೇಶನ ವಂಚಿತ ನೂರಾರು ಮಹಿಳೆಯರು, ‘ನಿವೇಶನ ಉಳ್ಳವರಿಗೆ ಹಕ್ಕುಪತ್ರ ನೀಡಲಾಗಿದೆ, ನಿಜನಾದ ಫಲಾನುಭವಿಗಳ ಗುರುತಿಸುವಲ್ಲಿ ಆಶ್ರಯ ಸಮಿತಿ ವಿಫಲವಾಗಿದೆ’ ಎಂದು ಆರೋಪಿಸಿ ಮಂಗಳವಾರ ಪುರಸಭೆಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.

‘15 ವರ್ಷಗಳಿಂದ ಅರ್ಜಿ ಸಲ್ಲಿಸಿ ಕಾಯುತ್ತಿದ್ದರೂ ನಿವೇಶನ ದೊರೆತಿಲ್ಲ. ನಮ್ಮಿಂದ ಹಣ ತುಂಬಿಸಿಕೊಂಡರೂ ನಮ್ಮ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ’ ಎಂದು ಮಹಿಳೆಯರು ಆಕ್ರೋಶ ಹೊರಹಾಕಿದರು. ಪುರಸಭೆ ಆವರಣದಲ್ಲಿ ಗದ್ದಲ ಉಂಟಾಗಿದ್ದರಿಂದ, ನಡೆಯಬೇಕಿದ್ದ ಸಾಮಾನ್ಯ ಸಭೆಯನ್ನು ಬುಧವಾರಕ್ಕೆ ಮುಂದೂಡಲಾಯಿತು.

‘ಮನೆಯಿದ್ದ ಕೆಲವರನ್ನು ಪಟ್ಟಿಯಲ್ಲಿ ಸೇರಿಸಿಕೊಳ್ಳಲಾಗಿದೆ. ಈ ಹಿಂದೆ ನಿವೇಶನ ಪಡೆದು ಮಾರಾಟ ಮಾಡಿ ಪುನಃ ಅರ್ಜಿ ಹಾಕಿದವರು ಹಕ್ಕುಪತ್ರ ಪಡೆದಿದ್ದಾರೆ. ಪರ ಊರಿನವರಿಗೂ ಹಕ್ಕುಪತ್ರ ನೀಡಲಾಗಿದೆ’ ಎಂದು ಧರಣಿ ನಿರತ ಮಹಿಳೆಯರು ಆರೋಪಿಸಿದರು.

ADVERTISEMENT

ನಿಜವಾದ ಫಲಾನುಭವಿಗಳನ್ನು ಗುರುತಿಸುವವರೆಗೂ ಹಕ್ಕು ಪತ್ರಗಳನ್ನು ರದ್ದುಪಡಿಸುವಂತೆ ಆಗ್ರಹಿಸಿದ ಧರಣಿ ನಿರತ ಮಹಿಳೆಯರು ಒತ್ತಾಯಿಸಿದರು.

ಸಭೆಯಲ್ಲಿ ಗದ್ದಲ: ಸದಸ್ಯರ ಅವಧಿ ನ.6ಕ್ಕೆ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಮಂಗಳವಾರ ಸಾಮಾನ್ಯ ಸಭೆ ಹಮ್ಮಿಕೊಳ್ಳಲಾಗಿತ್ತು. ಹಕ್ಕುಪತ್ರ ನೀಡುವ ಮೊದಲು ಚರ್ಚೆ ನಡೆಯಬೇಕಿತ್ತು. ಆದರೆ, ‘ಆಶ್ರಯ ಸಮಿತಿ ಸದಸ್ಯರಿಗೂ ಮಾಹಿತಿ ನೀಡದೆ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ತಮ್ಮ ವಾರ್ಡ್‌ನಲ್ಲಿನ ಫಲಾನುಭವಿಗಳ ಹೆಸರೂ ನಮಗೆ ತಿಳಿದಿಲ್ಲ. ಕೂಡಲೇ ಆಶ್ರಯ ಸಮಿತಿ ಸದಸ್ಯರು, ಶಾಸಕರೊಂದಿಗೆ ಸಭೆ ನಡೆಸಿ ಬಡವರಿಗೆ ನ್ಯಾಯ ಒದಗಿಸಬೇಕು’ ಎಂದು ಸದಸ್ಯ ಬಸವಣ್ಣೆಪ್ಪ ಛತ್ರದ ಆಗ್ರಹಿಸಿದರು.

‘ಪುರಸಭೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ಹಕ್ಕು ಪತ್ರ ನೀಡಲು ನಿರ್ಣಯ ಕೈಕೊಂಡಿದ್ದಾರೆ. ಎರಡು ದಿನಗಳಲ್ಲಿ ಬಡವರಿಗೆ ನ್ಯಾಯ ಒದಗಿಸಲು ವಿಫಲವಾದರೆ ಹೋರಾಟ ಮಾಡಬೇಕಾಗುತ್ತದೆ’ ಎಂದು ಉಪಾಧ್ಯಕ್ಷ ಸುಭಾಷ ಮಾಳಗಿ ಹೇಳಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಪ್ಪ ಶೆಟ್ಟರ, ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಈರಣ್ಣ ಬಣಕಾರ, ಸರೋಜ ಉಳ್ಳಾಗಡ್ಡಿ, ಶಿವರಾಜ ಅಂಗಡಿ, ಗಾಯತ್ರಿ ಇದ್ದರು.

ಆಯ್ಕೆ ಪಟ್ಟಿಯನ್ನು ಆಶ್ರಯ ಸಮಿತಿ ಸದಸ್ಯರು ಪರಿಶೀಲನೆ ಮಾಡಿದ್ದು ಪುರಸಭೆ ಸದಸ್ಯರ ಗಮನಕ್ಕೂ ತರಲಾಗಿದೆ. ಆದಾಗ್ಯೂ ಕೆಲ ಅನರ್ಹರಿದ್ದಾರೆ ಎನ್ನುವ ಕುರಿತು ಆರೋಪ ಕೇಳಿ ಬಂದಿದ್ದು ದಾಖಲೆಗಳಿದ್ದಲ್ಲಿ ಪರಿಶೀಲಿಸಲಾಗುವುದು
ವಿನಯಕುಮಾರ ಪುರಸಭೆ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.