ADVERTISEMENT

ಬ್ಯಾಡಗಿ | ಶತಮಾನ ಪೂರೈಸಿದ ಶಾಲೆಯ ದುಃಸ್ಥಿತಿ: ಸೌಲಭ್ಯಗಳ ಕೊರತೆ

ಪ್ರಮೀಳಾ ಹುನಗುಂದ
Published 17 ಸೆಪ್ಟೆಂಬರ್ 2025, 3:11 IST
Last Updated 17 ಸೆಪ್ಟೆಂಬರ್ 2025, 3:11 IST
<div class="paragraphs"><p>₹ 50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬ್ಯಾಡಗಿ ಪಟ್ಟಣದ ಎಸ್‌ಜೆಜೆಎಂ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಕಟ್ಟಡ ಕಳೆದ ಆರು ತಿಂಗಳಿಂದ ಅರ್ಧಕ್ಕೆ ನಿಂತಿದೆ.</p></div>

₹ 50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬ್ಯಾಡಗಿ ಪಟ್ಟಣದ ಎಸ್‌ಜೆಜೆಎಂ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಕಟ್ಟಡ ಕಳೆದ ಆರು ತಿಂಗಳಿಂದ ಅರ್ಧಕ್ಕೆ ನಿಂತಿದೆ.

   

ಬ್ಯಾಡಗಿ: ಪಟ್ಟಣದಲ್ಲಿ ಶತಮಾನ ಪೂರೈಸಿದ ಎಸ್‌ಜೆಜೆಎಂ ಕರ್ನಾಟಕ ಪಬ್ಲಿಕ್‌ ಶಾಲೆ ಶೌಚಾಲಯ, ಕುಡಿಯುವ ನೀರು, ವರ್ಗಕೋಣೆ ಸೇರಿದಂತೆ ಅನೇಕ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ.

ಸರ್ಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣ ಜಾರಿಗಳಿಸಿದ್ದು ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗುತ್ತಿಲ್ಲ ಎಂದು ಮಕ್ಕಳ ಪಾಲಕರು ಆರೋಪಿಸಿದ್ದಾರೆ. ಎಲ್‌ಕೆಜಿಯಿಂದ 7ನೇ ತರಗತಿಯವರೆಗೆ ಇಂಗ್ಲಿಷ್‌ ಮಾಧ್ಯಮ, 6 ರಿಂದ 10 ನೇ ತರಗತಿಯವರೆಗೆ ಕನ್ನಡ ಮಾಧ್ಯಮ ಹಾಗೂ 8 ರಿಂದ 10ನೇ ತರಗತಿಯವರೆಗೆ ಉರ್ದು ಮಾಧ್ಯಮದಲ್ಲಿ ಪ್ರವೇಶ ನೀಡಲಾಗಿದ್ದು, ಮುಂದಿನ ವರ್ಷದಿಂದ ಇಂಗ್ಲಿಷ್‌ ಮಾಧ್ಯಮದ 8ನೇ ತರಗತಿ ಆರಂಭವಾಗಲಿದೆ.

ADVERTISEMENT

ಸದ್ಯ 426 ಬಾಲಕರು. 417 ಬಾಲಕೀಯರು ಸೇರಿದಂತೆ ಒಟ್ಟಾರೆ 843 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಶಿಥಿಲಗೊಂಡಿರುವ ಹಾಗೂ ದುರಸ್ತಿ ಕಾಣದ ಮೇಲ್ಚಾವಣಿಯಿಂದ ಮಳೆಗಾಲದಲ್ಲಿ ಸೋರುವ ಹಳೆಯ ಕಟ್ಟಡದಲ್ಲಿ ಇಂಗ್ಲೀಷ ಮಾಧ್ಯಮದ 6 ಮತ್ತು 7ನೇ ತರಗತಿಗಳನ್ನು ನಡೆಸಲಾಗುತ್ತಿದೆ. ಶತಮಾನದ ಹಳೆಯ ಕಟ್ಟಡದ ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿವೆ. ಕೆಲ ಭಾಗದಲ್ಲಿ ಬೀಳುವ ಹಂತಕ್ಕೆ ತಲುಪಿದೆ. 21 ವರ್ಗಗೋಣೆಗಳಿದ್ದು ಇನ್ನೂ 6ಕ್ಕಿಂತ ಹೆಚ್ಚು ವರ್ಗಕೋಣೆಗಳ ಅವಶ್ಯಕತೆ ಇದೆ.

ಅರ್ಧಕ್ಕೆ ನಿಂತ ಕಟ್ಟಡ ಕಾಮಗಾರಿ: ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ನೆಲ ಮಹಡಿಯಲ್ಲಿ ಬಾಲಕಿಯರ ಮತ್ತು ವಿಕಲಚೇತನರ ಶೌಚಾಲಯ, ಹಳೆಯ ಕಟ್ಟಡ ಸೇರಿ ಅದರ ಮೇಲೆ ಮೂರು ವರ್ಗಕೋಣೆಗಳ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ.

‘ಇದಕ್ಕಾಗಿ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌ ಉಪ ವಿಭಾಗದಿಂದ ₹50 ಲಕ್ಷ ಅನುದಾನ ಬಿಡುಗಡೆ ಮಾಡಿ ಟೆಂಡರ್‌ ಪೂರ್ಣಗೊಳಿಸಿ ಕಳೆದ ಎರಡು ವರ್ಷಗಳ ಹಿಂದೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆದರೆ ಕಳೆದ ಆರು ತಿಂಗಳಿಂದ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿದೆ. ಇದರಿಂದ ತರಗತಿಗಳನ್ನು ನಡೆಸಲು ತುಂಬಾ ತೊಂದರೆಯನ್ನು ಅನುಭವಿಸುವಂತಾಗಿದೆ’ ಎಂದು ಶಾಲೆಯ ಹಳೆಯ ವಿದ್ಯಾರ್ಥಿ, ಮಾಜಿ ಸೈನಿಕ ಎಂಡಿ.ಚಿಕ್ಕಣ್ಣನವರ ಆರೋಪಿಸಿದ್ದಾರೆ.

ಕಟ್ಟಡ ಪೂರ್ಣಗೊಳಿಸುವಂತೆ ಹಲವಾರು ಬಾರಿ ಮನವಿ ಮಾಡಿಕೊಳ್ಳಲಾಗಿದ್ದರೂ ಇಲಾಖೆಯ ಅಧಿಕಾರಿಗಳು ಸಮರ್ಪಕ ಉತ್ತರ ನೀಡುತ್ತಿಲ್ಲ ಎಂದು ದೂರಿದರು. 2026–27ರಿಂದ ಇಂಗ್ಲಿಷ್‌ ಮಾಧ್ಯಮದ 8ನೇ ತರಗತಿ ಆರಂಭವಾದರೆ ಅದನ್ನು ಹೇಗೆ ನಿಭಾಯಿಸುವುದು ಎಂದು ಪ್ರಶ್ನಿಸಿದ್ದಾರೆ.

ಶೌಚಾಲಯದ ಕೊರತೆ

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 843 ವಿದ್ಯಾರ್ಥಿಗಳು ಕೆಪಿಎಸ್‌ ಶಾಲೆಗೆ ದಾಖಲಾಗಿದ್ದಾರೆ. ಬಾಲಕ ಮತ್ತು ಬಾಲಕಿಯರಿಗೆ ತಲಾ ಒಂದೆರಡು ಯುನಿಟ್‌ ಹೊಂದಿರುವ ಶೌಚಾಲಯ ನಿರ್ಮಿಸಿ ಕೈತೊಳೆದುಕೊಳ್ಳಲಾಗಿದೆ. ಆದರೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ ನಿರ್ಮಾಣವಾಗಿಲ್ಲ. ಸಿಬ್ಬಂದಿಗೆ ಪ್ರತ್ಯೇಕವಾದ ಶೌಚಾಲಯವಿಲ್ಲ. ಹೀಗಾಗಿ ಈ ಶಾಲೆಗೆ ಶಿಕ್ಷಕಿಯರು ಬರಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಮಾಹಿತಿ ದೊರೆತಿದೆ.

ಕೂಡಲೆ ಇನ್ನಷ್ಟು ಶೌಚಾಲಯಗಳನ್ನು ನಿರ್ಮಿಸಿ ಅನುಕೂಲ ಮಾಡಿಕೊಡುವಂತೆ ಇನ್ನೊಬ್ಬ ಹಳೆಯ ವಿದ್ಯಾರ್ಥಿ ರಾಜಣ್ಣ ಒತ್ತಾಯಿಸಿದರು.

ಸಿಬ್ಬಂದಿ ಕೊರತೆ

’ಸುಮಾರು 21 ವರ್ಗಕೋಣೆಗಳು ಹಾಗೂ 843 ಮಕ್ಕಳಿರುವ ಕೆಪಿಎಸ್‌ ಶಾಲೆಗೆ ಮೂವರು ಡಿ ದರ್ಜೆ ಸಿಬ್ಬಂದಿ ಇರಬೇಕು. ಆದರೆ ಇಲ್ಲಿ ಒಬ್ಬರು ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. ಇಂಗ್ಲಿಷ್‌ ಮಾಧ್ಯಮದ ಶಿಕ್ಷಕರ ನೇಮಕವಾಗಿಲ್ಲ. ಕನ್ನಡ ಮಾಧ್ಯಮದ ಶಿಕ್ಷಕರೇ ಅವರಿಗೂ ಪಾಠ ಮಾಡಬೇಕಾಗಿದೆ. ಇದರಿಂದ ಪರಿಣಾಮಕಾರಿಯಾದ ಪಾಠ ಬೋಧನೆ ಸಾಧ್ಯವಿಲ್ಲದ ಮಾತು’ ಎನ್ನುತ್ತಾರೆ ಮಕ್ಕಳ ಪಾಲಕರು.

ಬ್ಯಾಡಗಿ ಪಟ್ಟಣದ ಎಸ್‌ಜೆಜೆಎಂ ಕೆಪಿಎಸ್‌ ಶಾಲಾ ಆವರನದಲ್ಲಿರುವ ಸದ್ಯದ ಶೌಚಾಲಯ
ಬ್ಯಾಡಗಿ ಪಟ್ಟಣದ ಎಸ್‌ಜೆಜೆಎಂ ಕೆಪಿಎಸ್‌ ಶಾಲೆಯ ಹಳೆಯ ಕಟ್ಟಡದ ಶಿಥಿಲಾವಸ್ಥೆಗೆ ತಲುಪಿದ್ದು ಗೋಡೆಯ ಒಂದು ಭಾಗ ಬಿರುಕು ಬಿಟ್ಟಿರುವುದು
ಕಟ್ಟಡ ಕಾಮಗಾರಿ ಆರಂಭಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಬಾಕಿ ಹಣವನ್ನು ಪಾವತಿಸುವ ಪ್ರಕ್ರಿಯೆ ನಡೆದಿದೆ
ಯಲ್ಲಪ್ಪ ಮಟಗಾರ ಕಿರಿಯ ಎಂಜಿನೀಯರ್‌ ಜಿ.ಪಂ. ಎಂಜಿನಿರಿಂಗ್‌ ಉಪ ವಿಭಾಗ ಬ್ಯಾಡಗಿ
ಮೊದಲ ಹಂತದಲ್ಲಿ ₹24 ಲಕ್ಷ ಹಣ ಸಂದಾಯವಾಗಿದೆ. ಶೇ 80ರಷ್ಟ ಕಾಮಗಾರಿ ಪೂರ್ಣಗೊಳಿಸಿದ್ದರೂ ಇಲಾಖೆಯ ಅಧಿಕಾರಿಗಳು ಇನ್ನುಳಿದ ಹಣ ನೀಡಿಲ್ಲ
ಈರಣ್ಣ ಅಕ್ಕಿ ಪ್ರಭಾರಿ ಉಪಪ್ರಾಚಾರ್ಯ

ಮಹಾನ್‌ರು ಓದಿರುವ ಶಾಲೆ

ಈ ಕೆಪಿಎಸ್‌ ಶಾಲೆಯಲ್ಲಿ ಡಾ.ಪಾಟೀಲ ಪುಟ್ಟಪ್ಪ ಸೇರಿದಂತೆ ಅನೇಕ ದಿಗ್ಗಜರು ಅಭ್ಯಾಸ ಮಾಡಿದ್ದಾರೆ. ಕೆಪಿಎಸ್‌ ಶಾಲೆಯಾಗಿ ಪರಿವರ್ತನೆಗೊಂಡಿದ್ದರೂ ಸರ್ಕಾರ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಈಗ ಮೂಲ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿದೆ. ಶತಮಾನೋತ್ಸವ ಆಚರಿಸಿಕೊಂಡರೂ ಶಾಲೆಯನ್ನು ಅಭಿವೃದ್ಧಿಗೆ ಮುಂದಾಗದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಗ್ರಾಮೀಣ ಭಾಗದಲ್ಲಿ ಎಂತೆಂತಹ ಹೈಟೆಕ್‌ ಶೌಚಾಲಯಗಳನ್ನು ನಿರ್ಮಿಸಿರುವ ಉದಾಹರಣೆಗಳಿವೆ. ಆದರೆ ಪಟ್ಟಣದ ಸರ್ಕಾರಿ ಶಾಲೆ ಕೆಪಿಎಸ್‌ ಶಾಲೆಯಾಗಿ ಪರಿವರ್ತನೆಗೊಂಡಿದ್ದರೂ ಇನ್ನೂ ಮೂಲ ಸೌಲಭ್ಯಗಳಿಂದ ವಂಚಿತವಾಗಿರುವುದು ವಿಪರ್ಯಾಸದ ಸಂಗತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.