ADVERTISEMENT

ಬ್ಯಾಗವಾದಿ ಪ್ರಕರಣ: ‘ಲಕ್ಕವ್ವರ ಮಗಳು, ಸಹೋದರನ ವಿರುದ್ಧವೂ ಎಫ್‌ಐಆರ್’

ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಭೇಟಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 3:15 IST
Last Updated 12 ಜುಲೈ 2025, 3:15 IST
ಶೇಖರಗೌಡ ರಾಮತ್ನಾಳ
ಶೇಖರಗೌಡ ರಾಮತ್ನಾಳ   

ಹಾವೇರಿ: ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬ್ಯಾಗವಾದಿ ಗ್ರಾಮದ ಮನೆಯೊಂದರಲ್ಲಿ ಬಾಲಕಿಯನ್ನು ಕೂಡಿಟ್ಟು ಕಿರುಕುಳ ನೀಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಹಿತಿ ಪಡೆಯಲು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜಿ. ರಾಮತ್ನಾಳ ಅವರು ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿದರು.

ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಆಡೂರು ಠಾಣೆ ಪೊಲೀಸರ ಜೊತೆ ಗ್ರಾಮಕ್ಕೆ ತೆರಳಿದ್ದ ರಾಮತ್ನಾಳ, ಗ್ರಾಮಸ್ಥರ ಹೇಳಿಕೆ ಪಡೆದುಕೊಂಡರು. ನಂತರ, ಸಂತ್ರಸ್ತ ಬಾಲಕಿ ಹಾಗೂ ಅವರ ತಾಯಿಯನ್ನೂ ಭೇಟಿಯಾಗಿ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡರು.

ಭೇಟಿ ಬಳಿಕ ‘ಪತ್ರಿಕಾಗೋಷ್ಠಿ’ಯಲ್ಲಿ ಮಾತನಾಡಿದ ರಾಮತ್ನಾಳ, ‘ಬಾಲಕಿಯನ್ನು ಅಕ್ರಮವಾಗಿ ಕೂಡಿಟ್ಟು ಕಿರುಕುಳ ನೀಡಿದ್ದ ಪ್ರಕರಣದಲ್ಲಿ ಆರೋಪಿ ಲಕ್ಕವ್ವ ಬೆಟಗೇರಿ ಅವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆದರೆ, ಕೃತ್ಯದಲ್ಲಿ ಲಕ್ಕವ್ವರ ಮಗಳು ಹಾಗೂ ಸಹೋದರ ಸಹ ಶಾಮೀಲಾಗಿರುವುದು ಸಂತ್ರಸ್ತೆಯ ಹೇಳಿಕೆಯಿಂದ ಗೊತ್ತಾಗಿದೆ. ಅವರಿಬ್ಬರ ವಿರುದ್ಧವೂ ಎಫ್‌ಐಆರ್ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ’ ಎಂದರು.

ADVERTISEMENT

‘ಯುವತಿಯರ ಮಾರಾಟ ಹಾಗೂ ಮಕ್ಕಳ ಕಳ್ಳ ಸಾಗಾಣಿಕೆ ಪ್ರಕರಣ ಗಮನಕ್ಕೆ ಬರುತ್ತಿದ್ದಂತೆ ಗ್ರಾಮಕ್ಕೆ ಭೇಟಿ ನೀಡಿದ್ದೇನೆ. ಉದ್ಯೋಗ ಹಾಗೂ ವಿದ್ಯಾಭ್ಯಾಸ ಹೆಸರಿನಲ್ಲಿ ಯುವತಿಯುರ–ಮಕ್ಕಳನ್ನು ಮನೆಗೆ ಕರೆತರುತ್ತಿದ್ದ ಆರೋಪಗಳು, ಅವರನ್ನು ಬೇರೆಯವರಿಗೆ ಮದುವೆಗಾಗಿ ಮಾರಾಟ ಮಾಡುತ್ತಿದ್ದರೆಂದು ಸ್ಥಳೀಯರು ಹೇಳುತ್ತಿದ್ದಾರೆ. ಸಂತ್ರಸ್ತೆ ಹಾಗೂ ಅವರ ತಾಯಿಯನ್ನು ಮಾತನಾಡಿಸಿದಾಗಲೂ ಹಲವು ಸಂಗತಿಗಳು ಗೊತ್ತಾಗಿವೆ. ಈ ಎಲ್ಲ ಸಂಗತಿಗಳ ಬಗ್ಗೆ ಸೂಕ್ತ ತನಿಖೆ ನಡೆಸಿ, ದೋಷಾರೋಪ ಪಟ್ಟಿಯಲ್ಲಿ ಎಲ್ಲವನ್ನೂ ದಾಖಲಿಸುವಂತೆ ಪೊಲೀಸರಿಗೆ ಹೇಳಿದ್ದೇನೆ’ ಎಂದು ಹೇಳಿದರು.

‘ಪೊಲೀಸರು ನನಗೆ ಏನು ಮಾಡುವುದಿಲ್ಲ. ಹಿಡಿದುಕೊಂಡು ಹೋದರೂ ಬಿಟ್ಟು ಕಳುಹಿಸುತ್ತಿದ್ದಾರೆ. ನಿಮ್ಮನ್ನೂ ನೋಡಿಕೊಳ್ಳುತ್ತೇನೆ’ ಎಂದು ಲಕ್ಕವ್ವ ಗ್ರಾಮಸ್ಥರಿಗೆ ಬೆದರಿಕೆಯೊಡ್ಡಿದ್ದರು. ಅವಾಗಲೇ ಗ್ರಾಮಸ್ಥರು ಮನೆಯಲ್ಲಿ ಶೋಧ ನಡೆಸಿ ಇಬ್ಬರನ್ನು ಪತ್ತೆ ಮಾಡಿದ್ದರು. ಲಕ್ಕವ್ವರ ಮನೆಯಲ್ಲಿ ವಿವಾಹಿತ ಮಹಿಳೆಯಿದ್ದರು. ಮರ್ಯಾದೆಗೆ ಅಂಜಿದ್ದ ಮಹಿಳೆ, ತಮ್ಮೂರಿಗೆ ಕಳುಹಿಸುವಂತೆ ಬೇಡಿಕೊಂಡಿದ್ದರು. ಹೀಗಾಗಿ, ಗ್ರಾಮಸ್ಥರೊಬ್ಬರು ಅವರನ್ನು ಊರಿಗೆ ಕಳುಹಿಸಿಕೊಟ್ಟಿದ್ದಾರೆ. ಈ ಬಾಲಕಿಯನ್ನು ಮಾತ್ರ ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದರು’ ಎಂದು ತಿಳಿಸಿದರು.

‘ಸಂತ್ರಸ್ತ ಬಾಲಕಿಯ ತಾಯಿ, ದಾವಣಗೆರೆಯವರು. ಪತಿಯಿಂದ ದೂರವಾಗಿದ್ದ ಅವರು, ಇಬ್ಬರು ಹೆಣ್ಣು ಮಕ್ಕಳ ಜೊತೆ ಹುಬ್ಬಳ್ಳಿಯ ಸಿದ್ದಾರೂಢ ಮಠದಲ್ಲಿದ್ದರು. ಅಲ್ಲಿಯೇ ಅವರಿಗೆ ಲಕ್ಕವ್ವ ಪರಿಚಯವಾಗಿತ್ತು. ಬಾಲಕಿಯನ್ನು ಓದಿಸುವುದಾಗಿ ಹೇಳಿ ಮನೆಗೆ ಕರೆತಂದಿದ್ದರು. ಬಾಲಕಿಯ ತಲೆ ಬೋಳಿಸಿ, ಕಿರುಕುಳ ನೀಡುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಈಗ ಇಬ್ಬರು ಮಕ್ಕಳಿಗೆ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ಶ್ರೀನಿವಾಸ ಮಾನೆ
ಬ್ಯಾಗವಾದಿ ಘಟನೆಗೆ ಸಂಬಂಧಪಟ್ಟಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಾಲಕಿಗೆ ನ್ಯಾಯ ಸಿಗುವವರೆಗೂ ಆಯೋಗ ಜೊತೆಗಿರಲಿದೆ
ಶೇಖರಗೌಡ ರಾಮತ್ನಾಳ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ 

‘ಪಿಎಸ್‌ಐಗೆ ನೋಟಿಸ್‌ ನೀಡಲು ಕ್ರಮ’:

‘ಗ್ರಾಮಸ್ಥರು ಬಾಲಕಿಯನ್ನು ಹಿಡಿದುಕೊಟ್ಟ ಬಳಿಕವೂ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ವಿಳಂಬ ಮಾಡಿರುವ ಆರೋಪವಿದೆ. ವಿಚಾರಣೆಯಲ್ಲಿ ಪುರಾವೆಗಳು ಲಭ್ಯವಾದರೆ ಪಿಎಸ್‌ಐಗೆ ನೋಟಿಸ್ ನೀಡಿ ಕ್ರಮ ಜರುಗಿಸುವಂತೆ ಪೊಲೀಸ್ ಅಧಿಕಾರಿಗೆ ಶಿಫಾರಸು ಮಾಡುತ್ತೇನೆ’ ಎಂದು ಶೇಖರಗೌಡ ರಾಮತ್ನಾಳ ಹೇಳಿದರು. ‘ಬಾಲಕಿಯ ತಲೆ ಬೋಳಿಸಿ ಕಿರುಕುಳ ನೀಡಲಾಗಿದೆ. ಬಿಎನ್‌ಎಸ್ (ಭಾರತೀಯ ನ್ಯಾಯ ಸಂಹಿತೆ) ಹಾಗೂ ಬಾಲ ನ್ಯಾಯ ಕಾಯ್ದೆ ಪ್ರಕಾರ ಸದ್ಯ ಪ್ರಕರಣ ದಾಖಲಾಗಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯ ಕಲಂಗಳನ್ನು ಸೇರಿಸುವ ಬಗ್ಗೆಯೂ ಪರಿಶೀಲಿಸಲಾಗುವುದು’ ಎಂದರು.

‘ಸಹೋದರ ಮಗಳು ನಾಪತ್ತೆ’:

‘ಬ್ಯಾಗವಾದಿ ಗ್ರಾಮದಲ್ಲಿ ನಡೆದ ಮಾರಾಟ ಜಾಲದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಸಹೋದರ ಹಾಗೂ ಮಗಳ ಮೇಲೂ ಸಂಶಯವಿದ್ದು ಸದ್ಯ ಅವರಿಬ್ಬರು ತಲೆಮರೆಸಿಕೊಂಡಿದ್ದಾರೆ. ಅವರನ್ನೂ ಸದ್ಯದಲ್ಲೇ ವಶಕ್ಕೆ ಪಡೆಯುವ ಭರವಸೆಯಿದೆ’ ಎಂದು ಶಾಸಕ ಶ್ರೀನಿವಾಸ್ ಮಾನೆ ಹೇಳಿದರು. ತಾಲ್ಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಗ್ರಾಮದಲ್ಲಿ ಎರಡು ಬಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೆ. ಅಲ್ಲಿಯ ಜನಪ್ರತಿನಿಧಿಗಳು ಹಾಗೂ ಮುಖಂಡರು ಮಾರಾಟ ಜಾಲದ ಚಟುವಟಿಕೆ ಬಗ್ಗೆ ಮಾಹಿತಿ ನೀಡಲಿಲ್ಲ. ಮಾಹಿತಿ ಇದ್ದರೂ ಏಕೆ ತಿಳಿಸಲಿಲ್ಲ ಎಂಬುದು ನನಗೂ ಗೊತ್ತಿಲ್ಲ’ ಎಂದರು. ‘ಮಹಿಳೆಯರ ಮಾರಾಟ ಜಾಲವನ್ನು ಬುಡಸಮೇತ ಪತ್ತೆ ಹಚ್ಚಿ ಸಮಾಜಘಾತುಕರನ್ನು ಮಟ್ಟ ಹಾಕುವಂತೆ ಪೊಲೀಸರನ್ನು ಒತ್ತಾಯಿಸಿದ್ದೇನೆ. ಇಂಥ ಕೃತ್ಯಗಳನ್ನು ಯಾರೂ ಸಹಿಸುವುದಿಲ್ಲ. ಘಟನೆಗಳು ನಡೆದರೆ ಸಾರ್ವಜನಿಕರು ಪೊಲೀಸರಿಗೆ ತಿಳಿಸಬೇಕು’ ಎಂದು ಅವರು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.