ADVERTISEMENT

ತ್ಯಾಗ, ಬಲಿದಾನದ ಸಂಕೇತ ಬಕ್ರೀದ್‌

ಜಿಲ್ಲೆಯಾದ್ಯಂತ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ: ಮನೆಗಳಲ್ಲಿ ಘಮಘಮಿಸಿದ ಬಿರಿಯಾನಿ, ಸುರ್‌ಕುಂಬಾ

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 13:11 IST
Last Updated 10 ಜುಲೈ 2022, 13:11 IST
ಹಾವೇರಿ ನಗರದ ಈದ್ಗಾ ಮೈದಾನದಲ್ಲಿ ಬಕ್ರೀದ್‌ ಅಂಗವಾಗಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ (ನಮಾಜ್‌) ಸಲ್ಲಿಸಿದರು  –ಪ್ರಜಾವಾಣಿ ಚಿತ್ರ
ಹಾವೇರಿ ನಗರದ ಈದ್ಗಾ ಮೈದಾನದಲ್ಲಿ ಬಕ್ರೀದ್‌ ಅಂಗವಾಗಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ (ನಮಾಜ್‌) ಸಲ್ಲಿಸಿದರು  –ಪ್ರಜಾವಾಣಿ ಚಿತ್ರ   

ಹಾವೇರಿ:ತ್ಯಾಗ, ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನುಹಾವೇರಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮುಸ್ಲಿಮರು ಭಾನುವಾರ ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿದ್ದ ಮಳೆ ಭಾನುವಾರ ಸ್ವಲ್ಪ ಬಿಡುವು ಕೊಟ್ಟಿದ್ದರಿಂದ ಸಾಮೂಹಿಕ ಪ್ರಾರ್ಥನೆ ಮಾಡಲು ಅನುಕೂಲವಾಯಿತು ಎಂದು ಮುಸ್ಲಿಮರು ಸಂತಸ ಹಂಚಿಕೊಂಡರು.

ಬಡವ–ಶ್ರೀಮಂತ, ಮೇಲು–ಕೀಳು ಎಂಬ ಅಂತರವನ್ನು ಅಳಿಸಿ, ವಿಶ್ವಭ್ರಾತೃತ್ವದ ಕಲ್ಪನೆ ಮೂಡಿಸುವುದು ಬಕ್ರೀದ್ ಹಬ್ಬದ ಉದ್ದೇಶವಾಗಿದೆ.ಪ್ರವಾದಿ ಇಬ್ರಾಹಿಮರು ತಮ್ಮ ಮಗನಾದ ಇಸ್ಮಾಯಿಲ್‌ರನ್ನು ಸೃಷ್ಟಿಕರ್ತ ಅಲ್ಲಾಹನಿಗೆ ಬಲಿ ಕೊಡಲು ಮುಂದಾದ ದಿನವನ್ನು ‘ಈದ್-ಉಲ್-ಅದಾ’ ಅರ್ಥಾತ್ ‘ಬಕ್ರೀದ್’ ಎನ್ನಲಾಗುತ್ತದೆ.

ADVERTISEMENT

ಹಾವೇರಿ ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಮಕ್ಕಳು ಹೊಸಬಟ್ಟೆ ಧರಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಮನೆಗಳಲ್ಲಿ ಮಹಿಳೆಯರು ಚಿಕನ್‌ ಬಿರಿಯಾನಿ, ಮಟನ್‌ ಬಿರಿಯಾನಿ, ಸುರ್‌ಕುಂಬಾ (ಶ್ಯಾವಿಗೆ ಪಾಯಸ) ಮುಂತಾದ ಖಾದ್ಯಗಳನ್ನು ತಯಾರಿಸುತ್ತಿದ್ದ ದೃಶ್ಯ ಕಂಡು ಬಂದಿತು. ಅಕ್ಕಪಕ್ಕದ ಜನರಿಗೂ ಹಂಚಿ, ಮಧ್ಯಾಹ್ನ ಎಲ್ಲ ಬಾಂಧವರು ಒಟ್ಟಿಗೆ ಸೇರಿ ಊಟ ಮಾಡುತ್ತೇವೆ ಎಂದು ಶಿವಾಜಿನಗರ, ನಾಗೇಂದ್ರನಮಟ್ಟಿಯ ನಿವಾಸಿಗಳು ಹೇಳಿದರು.

ಕುರಿ, ಮೇಕೆಗಳನ್ನು ‘ಖುರ್ಬಾನಿ’ (ಬಲಿದಾನ) ಕೊಟ್ಟರು.ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಈದ್ಗಾ ಮತ್ತು ಮಸೀದಿಗಳ ಸುತ್ತಮುತ್ತ ಪೊಲೀಸರು ಬಿಗಿ ಬಂದೋಬಸ್ತ್‌ ಒದಗಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.