ಹಾವೇರಿ: ಇಲ್ಲಿ ಭಾನುವಾರ ಮುಕ್ತಾಯಗೊಂಡ‘ರಾಜ್ಯಮಟ್ಟದ ಆಹ್ವಾನಿತ ಪುರುಷರ ಹ್ಯಾಂಡ್‌ಬಾಲ್ ಟೂರ್ನಿ’ಯಲ್ಲಿಬೆಂಗಳೂರಿನ ಕರ್ನಾಟಕ ಪೊಲೀಸ್ ತಂಡ (ಕೆಎಸ್‌ಪಿ) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯ ಹ್ಯಾಂಡ್‌ಬಾಲ್ ಅಸೋಸಿಯೇಷನ್ ಹಾಗೂ ಹಾವೇರಿ ಜಿಲ್ಲಾ ಹ್ಯಾಂಡ್‌ಬಾಲ್ ಅಸೋಸಿಯೇಷನ್ ಆಶ್ರಯದಲ್ಲಿ ನಡೆದ ‘ಹಾವೇರಿ ಹ್ಯಾಂಡ್‌ಬಾಲ್ ಕಪ್–2021’ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮೈಸೂರು ತಂಡವನ್ನು 11 ಪಾಯಿಂಟ್ಸ್‌ಗಳಿಂದ ಮಣಿಸಿ, ಬೆಂಗಳೂರಿನ ಕೆಎಸ್‌ಪಿ ತಂಡ ‘ಚಾಂಪಿಯನ್ಸ್’ ಪಟ್ಟ ಅಲಂಕರಿಸಿತು.
ಬೆಂಗಳೂರು ತಂಡವು 33 ಪಾಯಿಂಟ್ಸ್ ಹಾಗೂ ಮೈಸೂರು ತಂಡವು 22 ಪಾಯಿಂಟ್ಸ್‌ಗಳನ್ನು ಗಳಿಸಿತು.ಎರಡೂ ತಂಡಗಳ ನಡುವೆ ಆರಂಭದಿಂದಲೂ ರೋಚಕ ಹಣಾಹಣಿ ನಡೆಯಿತು. ನಂತರ ಬೆಂಗಳೂರು ತಂಡದ ಆಟಗಾರರು ಚಾಕಚಕ್ಯತೆಯಿಂದ ಗೋಲು ಬಾರಿಸಿ ಪಾಯಿಂಟ್ಸ್‌ಗಳನ್ನು ಕಲೆ ಹಾಕಿದರು. ಬೆಂಗಳೂರು ತಂಡದ ಪಟೋಲಿ ಅವರು ಗೋಲ್ ಕೀಪಿಂಗ್‌ನಲ್ಲಿ ಉತ್ತಮ ಆಟ ಪ್ರದರ್ಶಿಸಿ, ತಂಡದ ಗೆಲುವಿಗೆ ನೆರವಾದರು.
ಮೈಸೂರು ತಂಡದವರು ರನ್ನರ್ ಅಪ್ ಪ್ರಶಸ್ತಿಗೆ ಭಾಜನರಾದರು. ಉಜಿರೆ ತಂಡದವರು ತೃತೀಯ ಸ್ಥಾನ ಹಾಗೂ ಬೆಳಗಾವಿ ತಂಡದವರು ನಾಲ್ಕನೇ ಸ್ಥಾನವನ್ನು ಪಡೆದರು.
ಉಜಿರೆ ತಂಡದ ಗಗನ್ ಆರ್. ‘ಉತ್ತಮ ದಾಳಿಗಾರ’, ಬೆಂಗಳೂರಿನ ಕೆಎಸ್‌ಪಿ ತಂಡದ ಪಟೋಲಿ ‘ಉತ್ತಮ ಗೋಲ್‌ಕೀಪರ್’ ಹಾಗೂ ಮೈಸೂರು ತಂಡದ ವಿನೋದ್ ‘ಉತ್ತಮ ಆಲ್‌ರೌಂಡರ್’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಟೂರ್ನಿಯಲ್ಲಿ ಬೆಂಗಳೂರು, ಬೆಳಗಾವಿ, ಉಜಿರೆ, ಬಳ್ಳಾರಿ, ಶಿವಮೊಗ್ಗ, ಚಿತ್ರದುರ್ಗ, ಮೈಸೂರು, ದಾವಣಗೆರೆ, ಮಂಗಳೂರು ಹಾಗೂ ಕರ್ನಾಟಕ ಪೊಲೀಸ್ ತಂಡಗಳು ಪಾಲ್ಗೊಂಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.