ADVERTISEMENT

ಹಾನಗಲ್: ರೈತರಿಗೆ ಆಸರೆಯಾಗದ ಏತ ನೀರಾವರಿ

ನಿರ್ವಹಣೆಯ ಕೊರತೆಯಿಂದ ಬಸಾಪುರ ನೀರಾವರಿ ಯೋಜನೆ ಬಂದ್‌: ಕೃಷಿಕರು ಕಂಗಾಲು

ಮಾರುತಿ ಪೇಟಕರ
Published 19 ಫೆಬ್ರುವರಿ 2024, 4:52 IST
Last Updated 19 ಫೆಬ್ರುವರಿ 2024, 4:52 IST
ಹಾನಗಲ್ ತಾಲ್ಲೂಕಿನ ಬಸಾಪುರ ಏತ ನೀರಾವರಿ ಯೋಜನೆ ನಿರ್ವಹಣಾ ಕೊರತೆಯ ಕಾರಣಕ್ಕಾಗಿ ಬಂದ್‌ ಸ್ಥಿತಿಯಲ್ಲಿದೆ
ಹಾನಗಲ್ ತಾಲ್ಲೂಕಿನ ಬಸಾಪುರ ಏತ ನೀರಾವರಿ ಯೋಜನೆ ನಿರ್ವಹಣಾ ಕೊರತೆಯ ಕಾರಣಕ್ಕಾಗಿ ಬಂದ್‌ ಸ್ಥಿತಿಯಲ್ಲಿದೆ   

ಹಾನಗಲ್: ಐದು ಸಾವಿರ ಎಕರೆ ಕೃಷಿ ಭೂಮಿಗೆ ನೀರಾವರಿ ಆಸರೆಯಾದ ತಾಲ್ಲೂಕಿನ ಬಸಾಪುರ ಏತ ನೀರಾವರಿ ಯೋಜನೆ ನಿರ್ವಹಣೆ ಕೊರತೆಯ ಕಾರಣಕ್ಕಾಗಿ ಬಂದ್‌ ಸ್ಥಿತಿಯಲ್ಲಿದ್ದು, ಈ ಭಾಗದ ರೈತರು ಯೋಜನೆ ಆರಂಭದ ನಿರೀಕ್ಷೆಯಲ್ಲಿದ್ದಾರೆ.

ವರದಾ ನದಿ ನೀರು ಬಳಸಿಕೊಂಡು ಕೃಷಿ ಭೂಮಿ ಮತ್ತು 20 ಗ್ರಾಮಗಳ ಕೆರೆಕಟ್ಟೆಗಳನ್ನು ತುಂಬಿಸುವ ಬಸಾಪುರ ಏತ ನೀರಾವರಿ ಯೋಜನೆ ಜಾರಿಯಾಗಿ 20 ವರ್ಷಗಳಾಗಿವೆ. ಆದರೆ ಕಳೆದ ವರ್ಷ ಮಳೆಗಾಲದ ಸಮಯದಲ್ಲಿ ಈ ಯೋಜನೆ ಚಾಲನೆಗೊಂಡಿಲ್ಲ.

ಪ್ರತಿ ವರ್ಷ ಮಳೆಗಾಲಕ್ಕೂ ಮುನ್ನ ಈ ಬೃಹತ್‌ ಯೋಜನೆಯ ನೀರೆತ್ತುವ ವ್ಯವಸ್ಥೆಯ ನಿರ್ವಹಣಾ ಕಾರ್ಯಗಳು ನಡೆಯುತ್ತಿದ್ದವು. ಆದರೆ ಯೋಜನೆಯ ಯಂತ್ರಗಳು ಮತ್ತು ಪೈಪ್‌ಲೈನ್‌ ಹಾಳಾದ ಪರಿಣಾಮ ನಿಗದಿತ ಸಮಯದಲ್ಲಿ ಕೆಲಸಗಳು ಆಗದಿದ್ದರಿಂದ ಈ ವರ್ಷ ನೀರೆತ್ತಲು ಸಾಧ್ಯವಾಗಿಲ್ಲ.

ADVERTISEMENT

ಪ್ರತಿವರ್ಷ ಮಳೆಗಾಲಕ್ಕೂ ಮುನ್ನ ಯೋಜನೆಯ ನಿರ್ವಹಣೆಯನ್ನು ಮಾಡುತ್ತಿದ್ದ ಬಸಾಪುರ ಏತ ನೀರಾವರಿ ಯೋಜನೆಯ ನಿರ್ವಹಣಾ ಜವಾಬ್ದಾರಿ ಹೊತ್ತಿರುವ ತುಂಗಾ ಮೇಲ್ದಂಡೆ ಇಲಾಖೆ ಅಧಿಕಾರಿಗಳು ಈ ಬಾರಿ ಯಾವುದೇ ನಿರ್ವಹಣಾ ಕೆಲಸಗಳನ್ನು ಕೈಗೊಳ್ಳಲು ಮುಂದಾಗಿರಲಿಲ್ಲ.

ಸ್ಥಳೀಯ ರೈತರು ಈ ಬಗ್ಗೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ದುರಸ್ತಿ ಕೆಲಸಗಳ ಬಗ್ಗೆ ಒತ್ತಾಯ ಮಾಡಿದ್ದರು. ಆದರೆ ಈ ಬಾರಿ ದುರಸ್ತಿ ಕೆಲಸಗಳು ದೊಡ್ಡ ಪ್ರಮಾಣದಲ್ಲಿ ನಡೆಯಬೇಕಾದ ಪರಿಣಾಮ ಅನುದಾನ ಕೊರತೆಯನ್ನು ಅಧಿಕಾರಿಗಳು ರೈತರ ಮುಂದಿಟ್ಟಿದ್ದರು.

ಅಷ್ಟರಲ್ಲಾಗಲೇ ಮಳೆ ಆರಂಭಗೊಂಡು ವರದಾ ನದಿಯಲ್ಲಿ ಹೊಸ ನೀರು ಹರಿಯತೊಡಗಿತ್ತು. ಈ ಸಮಯದಲ್ಲಿ ನದಿ ನೀರೆತ್ತಿ ಕಾಲುವೆ ಮೂಲಕ ಕೃಷಿ ಭೂಮಿಗೆ ಹರಿಸಲು ಯಂತ್ರಗಳು ಸನ್ನದ್ಧವಾಗಿರಲಿಲ್ಲ. ಹೀಗಾಗಿ ಈ ಬಾರಿ ನದಿ ನೀರು ಇಲ್ಲಿನ ಕೃಷಿ ಭೂಮಿ ಮತ್ತು ಕೆರೆಗಳಿಗೆ ಲಭ್ಯವಾಗಲಿಲ್ಲ.

ನೆಲಕಚ್ಚಿದ ಬೆಳೆಗಳು:

‘ವರದಾ ನದಿ ನೀರು ಬಳಸಿಕೊಂಡು ಬಸಾಪುರ ಏತ ನೀರಾವರಿ ಯೋಜನೆ ವ್ಯಾಪ್ತಿಯ ಕೃಷಿ ಜಮೀನುಗಳಲ್ಲಿ ಭತ್ತ, ಕಬ್ಬು, ಗೋವಿನಜೋಳ ಮತ್ತು ತರಕಾರಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಮುಖ್ಯವಾಗಿ ಇಲ್ಲಿ ನಾಟಿ ಭತ್ತದ ಕಾರ್ಯ ನಡೆಯುತ್ತದೆ. ಈ ವರ್ಷ ಎಲ್ಲ ಬೆಳೆಗಳೂ ನೆಲಕಚ್ಚಿವೆ. ಏತ ನೀರಾವರಿ ಎಂದಿನಂತೆ ಕಾರ್ಯನಿರ್ವಹಿಸಿದ್ದರೆ, ಬೆಳೆಗಳಿಗೆ ನೀರು ಮತ್ತು ಕೆರೆಗಳು ತುಂಬಿಕೊಳ್ಳುತ್ತಿದ್ದವು’ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಸವರಾಜ ಹಾದಿಮನಿ ಅಸಮಾಧಾನ ವ್ಯಕ್ತಪಡಿಸಿದರು.  

ಬಸಾಪೂರ ಏತ ನೀರಾವರಿ ಯೋಜನೆ ಯಂತ್ರಗಳು ದುರಸ್ತಿಯ ನಿರೀಕ್ಷೆಯಲ್ಲಿವೆ

ಕೆರೆಗಳು ತುಂಬಿಕೊಳ್ಳುವುದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತಿತ್ತು. ಕೃಷಿ ಪಂಪ್‌ಸೆಟ್‌ಗಳು ಬೇಸಿಗೆಯಲ್ಲೂ ಚೇತರಿಕೆ ಪಡೆದುಕೊಳ್ಳುತ್ತಿದ್ದವು. ಜನ, ಜಾನುವಾರುಗಳಿಗೆ ಕುಡಿಯುವ ನೀರು ಕೆರೆಕಟ್ಟೆಗಳಲ್ಲಿ ಲಭ್ಯವಿರುತ್ತಿತ್ತು. ಆದರೆ ಸದ್ಯದ ಸ್ಥಿತಿಯಲ್ಲಿ ಇದಾವುದೂ ಆಗಿಲ್ಲ. ಅಗತ್ಯದ ದುರಸ್ತಿ ಮತ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಶೀಘ್ರವಾಗಿ ಏತ ನೀರಾವರಿ ಯೋಜನೆಯನ್ನು ಚಾಲನೆಗೆ ಸಿದ್ಧಗೊಳಿಸಬೇಕು. ಈ ಮಳೆಗಾಲದಲ್ಲಿ ನದಿ ನೀರು ಮತ್ತೆ ಈ ಪ್ರದೇಶದಲ್ಲಿ ಸಮೃದ್ಧಿಯನ್ನು ತರಬೇಕು ಎಂದು ಒತ್ತಾಯಿಸಿದ್ದಾರೆ.

ಯೋಜನೆಯ ಮರು ಚಾಲನೆ ಬಗ್ಗೆ ಮಾಹಿತಿ ನೀಡಿರುವ ಯುಟಿಪಿ ಎಂಜನಿಯರ್‌ ದೇವರಾಜ, ಬಸಾಪುರ ಏತ ನೀರಾವರಿ ಯೋಜನೆಯ ವಿವಿಧ ಭಾಗದ ದುರಸ್ತಿ, ನಿರ್ವಹಣೆ ಕಾರ್ಯಗಳಿಗಾಗಿ ₹1 ಕೋಟಿ ಅನುದಾನ ಬಿಡುಗಡೆಗೊಂಡು ಟೆಂಡರ್‌ ಹಂತದಲ್ಲಿದೆ. ಎಲ್ಲ ಕೆಲಸಗಳು ಪೂರ್ಣಗೊಂಡು ಈ ಮಳೆಗಾಲಕ್ಕೆ ಯೋಜನೆ ಸೇವೆಗೆ ಸಿದ್ಧಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.

ಏತ ನೀರಾವರಿ ಯೋಜನೆ ಸ್ದಳದಲ್ಲಿ ವರದಾ ನದಿ ಪಾತ್ರದಲ್ಲಿ ನೀರು ನಿಲ್ಲಲ್ಲು ಸಣ್ಣ ಪ್ರಮಾಣದ ತಡೆಗೋಡೆ ನಿರ್ಮಾಣ ಮಾಡಲಾಗಿದೆ

ಕೈಗೆ ಸಿಗದ ಅಧಿಕಾರಿಗಳು:

ಏತ ನೀರಾವರಿ ಯೋಜನೆಯ ನಿರ್ವಹಣಾ ಜವಾಬ್ದಾರಿ ವಹಿಸಿಕೊಳ್ಳುವ ಇಲಾಖೆ ಅಧಿಕಾರಿಗಳು ಸ್ಥಳೀಯವಾಗಿ ಲಭ್ಯವಾಗಬೇಕು. ಹಾವೇರಿ ಅಥವಾ ದಾವಣಗೆರೆಯಲ್ಲಿ ಕುಳಿತು ಇಲ್ಲಿನ ಏತ ನೀರಾವರಿ ಯೋಜನೆಗಳ ಜವಾಬ್ದಾರಿ ವಹಿಸಿಕೊಂಡು ನಿರ್ವಹಣೆ ಮತ್ತು ರೈತರ ಸಮಸ್ಯೆಗಳಿಗೆ ಸ್ಪಂದನೆ ಸಾಧ್ಯವಾಗದು’ ಎನ್ನುತ್ತಾರೆ ವಾಸನ ಗ್ರಾಮದ ರೈತರು.

ಹಾನಗಲ್ ತಾಲ್ಲೂಕಿನ ಮುಳಥಳ್ಳಿ ಗ್ರಾಮ ಭಾಗದಲ್ಲಿ ನಿರ್ಮಾಣಗೊಂಡ ಬಸಾಪುರ ಏತ ನೀರಾವರಿ ಯೋಜನೆ ಕಾಲುವೆಯಲ್ಲಿ ನೀರು ಹರಿಯಬೇಕು ಎಂಬ ಬಯಕೆಯಲ್ಲಿ ರೈತರಿದ್ದಾರೆ

ಏನಂತಾರೆ..?

ಬಸಾಪುರ ಏತ ನೀರಾವರಿ ಯೋಜನೆಯ ವಿವಿಧ ಭಾಗದ ದುರಸ್ತಿ ನಿರ್ವಹಣೆ ಕಾರ್ಯಗಳಿಗಾಗಿ ₹1 ಕೋಟಿ ಅನುದಾನ ಬಿಡುಗಡೆಗೊಂಡು ಟೆಂಡರ್‌ ಹಂತದಲ್ಲಿದೆ. ಎಲ್ಲ ಕೆಲಸಗಳು ಪೂರ್ಣಗೊಂಡು ಈ ಮಳೆಗಾಲಕ್ಕೆ ಯೋಜನೆ ಸೇವೆಗೆ ಸಿದ್ಧಗೊಳ್ಳಲಿದೆ 
  – ದೇವರಾಜ ಯುಟಿಪಿ ಎಂಜಿನಿಯರ್‌
ಏತ ನೀರಾವರಿ ಯೋಜನೆ ಆರಂಭಗೊಂಡ ದಿನಗಳಿಂದಲೂ ಹಣ ಖರ್ಚು ಮಾಡುವುದೇ ಆಗಿದೆ. ಆದರೆ ಯೋಜನೆ ವ್ಯವಸ್ಥಿತವಾಗಿ ನಡೆದುಕೊಂಡು ಹೋಗುವಲ್ಲಿ ವ್ಯವಸ್ಥಾಪಕರ ನೇಮಕ ನಿಗದಿತ ಅವಧಿಯಲ್ಲಿ ನಿರ್ವಹಣಾ ಕೆಲಸಗಳು ಮತ್ತು ಸಮರ್ಪಕ ವಿದ್ಯುತ್‌ ಪೂರೈಕೆ ವ್ಯವಸ್ಥೆಯಾಗಬೇಕು.
– ನಿಜಲಿಂಗಪ್ಪ ಮುದಿಯಪ್ಪನವರ ಸೋಮಾಪೂರ ಗ್ರಾಮದ ರೈತ
ನದಿ ಮೂಲಕ ನೀರು ತುಂಬಸಲು ಸಾಧ್ಯವಾಗದ ಕಾರಣಕ್ಕಾಗಿ ಕೆರೆಗಳು ಖಾಲಿಯಾಗಿವೆ. ಬೇಸಿಗೆಯಲ್ಲಿ ಕೆರೆಗಳಲ್ಲಿ ನೀರು ಇಲ್ಲದಿದ್ದರೆ ಜಾನುವಾರುಗಳಿಗೆ ತೊಂದರೆ ತಪ್ಪಿದ್ದಲ್ಲ. ಇಲ್ಲಿನ ಕೃಷಿ ಭೂಮಿಯೂ ಈ ಬಾರಿ ನದಿ ನೀರಿನಿಂದ ವಂಚಿತವಾಗಿದೆ.
– ಚನ್ನವೀರಪ್ಪ ಕೋಡಿಹಳ್ಳಿ ಬಸಾಪುರ ಗ್ರಾಮದ ರೈತ
ಬಸಾಪುರ ಏತ ನೀರಾವರಿ ಯೋಜನೆಯ ಸುಮಾರು 20 ಕಿ.ಮೀ ಕಾಲುವೆಯನ್ನು ನಿಗದಿತವಾಗಿ ನಿರ್ವಹಣೆ ಮಾಡಬೇಕು. ಅಂದಾಗ ಮಾತ್ರ ನೀರು ಕಾಲುವೆಯ ಕೊನೆಯ ತನಕ ತಲುಪುತ್ತದೆ. ಮುಳಥಳ್ಳಿ ಗ್ರಾಮಕ್ಕೆ ಯೋಜನೆಯ ನೀರು ತಲುಪುತ್ತಿಲ್ಲ. ಇದಕ್ಕೆ ಕಾಲುವೆ ಅವೈಜ್ಞಾನಿಕ ನಿರ್ಮಾಣವೇ ಕಾರಣ. 
– ವೀರೇಶ ಬಾಳಂಬೀಡ ಮುಳಥಳ್ಳಿ ಗ್ರಾಮದ ರೈತ
ಕಾಲುವೆ ಹೂಳು ತೆರವುಗೊಳಿಸಿ
ಮುಳಥಳ್ಳಿ ಗ್ರಾಮದ 4 ಕೆರೆಗಳಿಗೆ ಏತ ನೀರಾವರಿ ಯೋಜನೆಯ ಹನಿ ನೀರು ಸಿಗುವುದಿಲ್ಲ. ಇಲ್ಲಿರುವ ಕಾಲುವೆಯಲ್ಲಿ ಗಿಡಗಂಟಿ ಬೆಳೆದು ಹೂಳು ಸೇರಿಕೊಂಡಿದೆ. ಮಳೆಗಾಲದಲ್ಲಿ ನೀರು ನುಗ್ಗಿ ಬೆಳೆ ಹಾನಿ ಅನುಭವಿಸುತ್ತೇವೆ. ಕಾಲುವೆ ಸುಸ್ಥಿತಿಯಲ್ಲಿಡಬೇಕು. ನಮ್ಮ ಗ್ರಾಮದ ಹೊಲಗದ್ದೆಗಳಿಗೆ ಏತ ನೀರಾವರಿ ಯೋಜನೆ ನೀರು ಸಿಗಬೇಕು ಎಂದು ಮುಳಥಳ್ಳಿ ಗ್ರಾಮದ ಗುಡ್ಡಪ್ಪ ಹಂಚಿನಮನಿ ಬಸಪ್ಪ ಕಾಳಪ್ಪನವರ ಉಮೇಶ ಬಾಳಂಬೀಡ ಬವರಾಜ ಹಂಚಿ ಸುರೇಶಗೌಡ ಪಾಟೀಲ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.