
ಹಾನಗಲ್: ‘ವೀರಶೈವ ಮತ್ತು ಲಿಂಗಾಯತ ಬೇರೆ ಎಂದು ಒಡೆದು ಆಳುವವರು ಈಗಲಾದರೂ ಎಚ್ಚರವಾಗಿ ಒಂದಾಗಿ ಬಾಳುವುದನ್ನು ಕಲಿಯಿರಿ. ಬಸವಣ್ಣನವರು ಪ್ರತಿಪಾದಿಸಿದ ವಿಶ್ವಕುಟುಂಬ ಚಿಂತನೆಗಳನ್ನು ಪಾಲಿಸಿ’ ಎಂದು ಶಿರಶಿಯ ಬಣ್ಣದಮಠದ ಶಿವಲಿಂಗ ಸ್ವಾಮೀಜಿ ಹೇಳಿದರು.
ಇಲ್ಲಿನ ಕುಮಾರೇಶ್ವರ ವಿರಕ್ತಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹಾನಗಲ್ ಲಿಂ.ಕುಮಾರ ಶಿವಯೋಗಿಗಳವರ ಪುಣ್ಯ ಸ್ಮರಣೋತ್ಸವದಲ್ಲಿ ಮಾತನಾಡಿದ ಅವರು, ‘ಸ್ವಾಮಿ ಎಂದರೆ ವಿಶ್ವ ಕುಟುಂಬ ಚಿಂತಕ, ಮಾನವನನ್ನು ದೇವರನ್ನಾಗಿ ಮಾಡಿದ ಹಾನಗಲ್ ಲಿಂ.ಕುಮಾರಶಿವಯೋಗಿಗಳು ಸ್ಮರಣೀಯ’ ಎಂದರು.
ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ‘ಶರಣರ ವಚನಗಳ ಪಠಣ ನಡೆಯುತ್ತಿದೆಯೇ ಹೊರತು, ವಿಚಾರ ಅನುಕರಣೆಯಲ್ಲಿ ವಿಫಲರಾಗಿದ್ದೇವೆ. ವಚನಗಳ ವಿಚಾರ, ಪ್ರಸಾರ ಅನುಸರಣೆಗೆ ಸ್ಪೂರ್ತಿಯಾಗಬೇಕು’ ಎಂದರು.
ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿ, ‘ವಿರಕ್ತಮಠದವು ಇನ್ನೊಂದು ಮರಿಶಿವಯೋಗ ಮಂದಿರವಾಗಿ ಕಾರ್ಯ ನಿರ್ವಹಿಸಬೇಕು. ಸರ್ಕಾರ ನೀರಾವರಿ ಯೋಜನೆಗೆ ಹೆಚ್ಚು ಒತ್ತು ನೀಡಬೇಕು’ ಎಂದರು.
ವಕೀಲೆ ಪೂಜಾ ಸವದತ್ತಿ ಅವರಿಗೆ ಗೌರವ ಸಲ್ಲಿಸಲಾಯಿತು. ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಯನಾಳದ ಅಭಿನವ ರೇವಣಸಿದ್ದೇಶ್ವರ ಸ್ವಾಮೀಜಿ, ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಮೂಲೆಗದ್ದೆ ಚನ್ನಬಸವ ಸ್ವಾಮೀಜಿ, ಚಿಂಚಣಿ ಶಿವಪ್ರಸಾದ ದೇವರು ಭಾಗವಹಿಸಿದ್ದರು. ಜಗದೀಶ ಹತ್ತಿಕೋಟಿ, ಮಲ್ಲಿಕಾರ್ಜುನ ರಡ್ಡೇರ ಉಪನ್ಯಾಸ ನೀಡಿದರು. ಉದ್ಯಮಿ ಆನಂದಸ್ವಾಮಿ ಗಡ್ಡದೇವರಮಠ, ವಕೀಲ ಚೇತನ ಕುಲಕರ್ಣಿ ಇದ್ದರು. ವೈ.ಪಿ. ಕುಂಕೂರ ಸ್ವಾಗತಿದರು. ಶಿಕ್ಷಕಿ ವಿನುತಾ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.