ADVERTISEMENT

ಹಾವೇರಿ | ಉಚಿತ ಕೊಡುಗೆ ತಾತ್ಕಾಲಿಕ; ಉದ್ಯೋಗ ಶಾಶ್ವತ: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 6:24 IST
Last Updated 13 ಸೆಪ್ಟೆಂಬರ್ 2025, 6:24 IST
ಹಾವೇರಿಯ ರಜನಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಸುವರ್ಣ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಬೆಳ್ಳಿ ಮಹೋತ್ಸವ ಸಮಾರಂಭ’ವನ್ನು ಸಂಸದ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. 
ಹಾವೇರಿಯ ರಜನಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಸುವರ್ಣ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಬೆಳ್ಳಿ ಮಹೋತ್ಸವ ಸಮಾರಂಭ’ವನ್ನು ಸಂಸದ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.    

ಹಾವೇರಿ: ‘ಉಚಿತ ಕೊಡುಗೆಗಳು ಕೇವಲ ತಾತ್ಕಾಲಿಕ. ಉದ್ಯೋಗ ನೀಡಿದರೆ, ಅದು ಶಾಶ್ವತವಾಗಿ ಕೈ ಹಿಡಿಯುತ್ತದೆ. ಜನರಿಗೆ ಉಚಿತ ಕೊಡುಗೆಗಳನ್ನು ನೀಡುವ ಬದಲು, ಉದ್ಯೋಗ ಕೊಡಬೇಕು. ಸ್ವಂತ ಕಾಲಿನ ಮೇಲೆ ನಿಲ್ಲುವ ವ್ಯವಸ್ಥೆ ಮಾಡಬೇಕು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿಯ ರಜನಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಸುವರ್ಣ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಬೆಳ್ಳಿ ಮಹೋತ್ಸವ ಸಮಾರಂಭ’ ಉದ್ಘಾಟಿಸಿ ಅವರು ಮಾತನಾಡಿದರು.

‘ಒಬ್ಬ ಬಡವನಿಗೆ ಹಣ ಕೊಟ್ಟರೆ ವಾಪಸ್ ಬರುತ್ತದೆ ಎಂಬ ವಿಶ್ವಾಸದ ವ್ಯವಸ್ಥೆ ಸೃಷ್ಟಿಯಾಗಬೇಕಿದೆ. ಬಾಂಗ್ಲಾದೇಶ ಅತ್ಯಂತ ಬಡ ದೇಶ. ಅಲ್ಲಿಯ ಅಧ್ಯಕ್ಷರು, ಸ್ವಯಂ ಆಸಕ್ತಿಯಿಂದ ಮೈಕ್ರೊ ಸಾಲದ ವ್ಯವಸ್ಥೆ ಮಾಡಿದ್ದಾರೆ. ಅವರ ಜೊತೆ ನಾನೂ ಮಾತನಾಡಿದ್ದೇನೆ. ಅವರು ಶೂನ್ಯ ಬಡ್ಡಿ ದರದಲ್ಲಿ ಭಿಕ್ಷುಕರಿಗೆ ಸಾಲ ಕೊಡುತ್ತಿದ್ದಾರೆ. ಭಿಕ್ಷೆ ಬೇಡುವ ಸಂದರ್ಭದಲ್ಲಿಯೇ ದಿನಬಳಕೆ ವಸ್ತುಗಳನ್ನು ಮಾರಾಟ ಮಾಡುವಂತೆ ಹೇಳುತ್ತಿದ್ದಾರೆ. ಈ ಕ್ರಮದಿಂದಾಗಿ 96 ಸಾವಿರ ಭಿಕ್ಷುಕರ ಪೈಕಿ, 11 ಭಿಕ್ಷುಕರು ಭಿಕ್ಷೆ ಬೇಡುವುದನ್ನು ಬಿಟ್ಟು ಉದ್ಯೋಗ ಮಾಡುತ್ತಿದ್ದಾರೆ. ಉಚಿತ ಕೊಡುಗೆಗಳನ್ನು ನೀಡುವ ಬದಲು ಜನರಿಗೆ ಉದ್ಯೋಗ ಕೊಟ್ಟರೆ ಏನಾಗುತ್ತದೆ ಎಂಬುದನ್ನು ಅವರು ಮಾಡಿ ತೋರಿಸಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಬಂಡವಾಳ ಶಾಹಿಯಲ್ಲಿ ಕೇವಲ ಉತ್ಪಾದನೆ, ಕಮ್ಯುನಿಸ್ಟ್ ವ್ಯವಸ್ಥೆಯಲ್ಲಿ ಕೇವಲ ವಿತರಣೆ ಇರುತ್ತದೆ. ಆರ್ಥಿಕ ಬೆಳವಣಿಗೆಯ ನಿಯಂತ್ರಣ ಸಹಕಾರ ವ್ಯವಸ್ಥೆ ಅಡಿಯಲ್ಲಿ ಬಂದಾಗ, ದೇಶದಲ್ಲಿ ಪಜಾಪಭುತ್ವ ವ್ಯವಸ್ಥೆಯಲ್ಲಿ ಆರ್ಥಿಕತೆ ಬರುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆರ್ಥಿಕ ಕಾರ್ಯಕ್ರಮಗಳಿಂದ ಹತ್ತು ವರ್ಷದಲ್ಲಿ 25 ಕೋಟಿ ಜನ, ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ. ಜನರು ಆರ್ಥಿಕತೆಯಲ್ಲಿ ಸ್ವತಂತ್ರವಾಗಿ ಬದುಕು ಕಟ್ಟಿಕೊಂಡಿದ್ದಾರೆ. ಆರ್ಥಿಕತೆ ಜನರ ಕೈಗೆ ಬರಬೇಕು. ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಆರ್ಥಿಕ ನೀತಿಯನ್ನು ಜನರು ತೀರ್ಮಾನ ಮಾಡಬೇಕು. ಅವಾಗಲೇ ದೊಡ್ಡ ಮಟ್ಟದ ಆರ್ಥಿಕ ಕ್ರಾಂತಿ ಆಗುತ್ತದೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

‘ಸೌಹಾರ್ದ ವ್ಯವಸ್ಥೆ ಉತ್ತಮವಾಗಿ ನಡೆಯುತ್ತಿದೆ. ಒಂದೆರಡು ಸೌಹಾರ್ದ ಬ್ಯಾಂಕ್‌ಗಳು ಮೋಸ ಮಾಡಿದ್ದರಿಂದ ಸೌಹಾರ್ದ ವ್ಯವಸ್ಥೆಯ ಮೇಲೆ ಕೆಟ್ಟ ಹೆಸರು ಬರುತ್ತಿದೆ. ಸುವರ್ಣ ಪತ್ತಿನ ಬ್ಯಾಂಕ್ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ವಾರ್ಷಿಕ ಸುಮಾರು ₹ 900 ಕೋಟಿಗೂ ಹೆಚ್ಚಿನ ವಹಿವಾಟು ನಡೆಸುತ್ತಿರುವುದು ಹೆಮ್ಮೆಯ ಸಂಗತಿ’ ಎಂದರು.

ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸೊಸೈಟಿ ಅಧ್ಯಕ್ಷರಾದ ಉದಯ ಕುರ್ಡೇಕರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಜಿ. ನಂಜನಗೌಡ, ನಿರ್ದೇಶಕ ಕೆ. ಶಿವಲಿಂಗಪ್ಪ, ಸಹಕಾರಿ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಉಪ ನಿರ್ದೇಶಕಿ ವಿದ್ಯಾ ವನಶೆಟ್ಟಿ, ಸಾಗರದ ಲೆಕ್ಕ ಪರಿಶೋಧಕ ಬಿ.ವಿ. ರವೀಂದ್ರನಾಥ, ವಕೀಲ ಎಸ್‌.ಆರ್. ಹೆಗಡೆ, ಸೊಸೈಟಿ ಉಪಾಧ್ಯಕ್ಷ ಸುಭಾಸ ಎಂ. ಪೋತದಾರ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣಕುಮಾರ ಸಿ.ಆರ್., ನಿರ್ದೇಶಕರಾದ ಸುರೇಶ ಎಸ್. ಕಮ್ಮಾರ, ರಾಘವೇಂದ್ರ ಸಾನು, ನಾಗರಾಜ ಕುರ್ಡೇಕರ, ಸಚಿನ ಮಡ್ಡಿ, ಪ್ರಸಾದ ವಿಠ್ಠಲಕರ, ಮಂಜುನಾಥ ಬಿಷ್ಟಣ್ಣನವರ, ಶೇಖರಪ್ಪ ಕಲ್ಲಮ್ಮನವರ, ಗಾಯತ್ರಿ ನೇಜಕರ, ಮಂಜುಳಾ ಚೂರಿ, ಗೀತಾ ಜೂಜಗಾಂವ, ಶಕುಂತಲಾ ರಿತ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.