ಹಾವೇರಿ: ‘ತಾಯಂದಿರು ಮತ್ತು ಮಕ್ಕಳು, ಈ ದೇಶದ ಭವಿಷ್ಯ. ಅವರ ಆರೋಗ್ಯ ಮತ್ತು ಶಿಕ್ಷಣ ಉತ್ತಮವಾಗಿದ್ದರೆ, ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಇದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನಾಚರಣೆ ನಿಮಿತ್ತ ಬುಧವಾರ ಏರ್ಪಡಿಸಿದ್ದ ‘ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನ’ ಚಾಲನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ತಾಯಂದಿರು ಆರೋಗ್ಯವಂತರಾಗಿ ಇರಬೇಕು ಎಂಬುದು ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನದ ಉದ್ದೇಶ. ತಾಯಂದಿರು ಆರೋಗ್ಯವಾಗಿದ್ದರೆ, ಇಡೀ ಕುಟುಂಬ ಆರೋಗ್ಯವಾಗಿರುತ್ತದೆ. ಈ ಸಮಾಜ, ದೇಶ ಕೂಡ ಆರೋಗ್ಯವಾಗಿರುತ್ತದೆ. ಆದರೆ, ಬಡತನವು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬಡತನ ಇದ್ದರೆ ಪೌಷ್ಟಿಕ ಆಹಾರ ಸಿಗದೇ, ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಇದಕ್ಕಾಗಿಯೇ ಕೇಂದ್ರ ಸರ್ಕಾರ, ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ರಾಜ್ಯ ಸರ್ಕಾರವೂ ಅದಕ್ಕೆ ಕೈ ಜೋಡಿಸಿದೆ. ಸದೃಢ ಭಾರತದ ನಿರ್ಮಾಣಕ್ಕಾಗಿ ತಾಯಂದಿರ ಆರೋಗ್ಯ ಬಹಳ ಪ್ರಾಮುಖ್ಯತೆ ನೀಡಲಾಗಿದೆ’ ಎಂದು ಹೇಳಿದರು.
‘ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ, ವಾತ್ಸಲ್ಯ ಕಾರ್ಯಕ್ರಮ ಜಾರಿಗೆ ತಂದಿದ್ದೆ. ಪ್ರತಿ ಮೂರು ತಿಂಗಳಿಗೊಮ್ಮೆ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ಮಾಡಿಸುತ್ತಿದ್ದೆ. ಅವರ ಆರೋಗ್ಯ ಸಮಸ್ಯೆಗಳನ್ನು ಗುರುತಿಸಿ, ಚಿಕಿತ್ಸೆ ದೊರೆಯುವ ಹಾಗೂ ಪೌಷ್ಟಿಕತೆ ಹೆಚ್ಚಿನ ಕೆಲಸ ಆಗುತ್ತಿತ್ತು. ಗಂಭೀರ ಸ್ವರೂಪದ ಸಮಸ್ಯೆ ಇರುವ ಮಕ್ಕಳಿಗೆ ಸೂಕ್ತ ಚಿಕಿತ್ಸೆಯನ್ನು ಕೊಡಿಸಲಾಗುತ್ತಿತ್ತು. ಆದರೆ, ಆ ಯೋಜನೆ ಈಗ ಮುಂದುವರಿದಂತೆ ಕಾಣುತ್ತಿಲ್ಲ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಆ ಯೋಜನೆಯನ್ನು ಮುಂದುವರಿಸಬೇಕು’ ಎಂದು ಕೋರಿದರು.
‘ಪ್ರಧಾನಿ ನರೇಂದ್ರ ಮೋದಿ ಅವರು, ಜನರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಆಯುಷ್ಮಾನ್ ಭಾರತ ಯೋಜನೆ ರೂಪಿಸಿ 130 ಕೋಟಿ ಜನರಿಗೆ ಆರೋಗ್ಯ ವಿಮೆ ಮಾಡಿಸಿದ್ದಾರೆ. ಇದರಿಂದಾಗಿ ಬಡವರಿಗೆ ಉಚಿತವಾಗಿ ಆರೋಗ್ಯ ಸೇವೆ ಸಿಗುತ್ತಿದೆ. ಅದರ ಜೊತೆಗೆ ಜನೌಷಧಿ ಅಂಗಡಿಗಳನ್ನು ಪ್ರಾರಂಭಿಸಿ, ಕಡಿಮೆ ಬೆಲೆಗೆ ಔಷಧಿಗಳನ್ನು ವಿತರಿಸುತ್ತಿದ್ದಾರೆ. ತಾಯಿ ಮತ್ತು ಮಗುವಿನ ಸರ್ವಾಂಗೀಣ ಅಭಿವೃದ್ಧಿಗೂ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈಗ ‘ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನ’ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಬಸವರಾಜ ಶಿವಣ್ಣವರ, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜೀಗೌಡ್ರ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ. ಹಿರೇಮಠ, ಜಿ.ಪಂ. ಸಿಇಒ ರುಚಿ ಬಿಂದಲ್, ಜಿಲ್ಲಾ ಆರೋಗ್ಯಾಧಿಕಾರಿ (ಪ್ರಭಾರ) ಡಾ. ಎಂ. ಜಯಾನಂದ, ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಹಿಮ್ಸ್) ನಿರ್ದೇಶಕ ಡಾ. ಪ್ರದೀಪ ಎಂ.ವಿ., ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪಿ.ಆರ್. ಹಾವನೂರ, ಮುಖಂಡರಾದ ವಿರೂಪಾಕ್ಷಪ್ಪ ಬಳ್ಳಾರಿ, ಕೆ.ಎಸ್. ಸಿದ್ದಬಸಪ್ಪ ಯಾದವ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.