ADVERTISEMENT

ತಂತ್ರಜ್ಞಾನ ಬಳಸಿಕೊಂಡು ಪ್ರಗತಿ ಸಾಧಿಸಿ: ಕೃಷಿ ಸಚಿವ ಬಿ.ಸಿ.ಪಾಟೀಲ

ಹಿರೇಕೆರೂರು ರೈತ ಸಂಪರ್ಕ ಕೇಂದ್ರ ಕಟ್ಟಡ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 17:05 IST
Last Updated 24 ನವೆಂಬರ್ 2020, 17:05 IST
ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ರೈತರಿಗೆ ಹಿರೇಕೆರೂರು ಪಟ್ಟಣದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ ‘ಶ್ರೇಷ್ಠ ಕೃಷಿಕ ಪ್ರಶಸ್ತಿ’ ನೀಡಿ ಗೌರವಿಸಿದರು. ಜಿ.ಪಂ. ಅಧ್ಯಕ್ಷ ಏಕನಾಥ ಬಾನುವಳ್ಳಿ ಇದ್ದಾರೆ 
ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ರೈತರಿಗೆ ಹಿರೇಕೆರೂರು ಪಟ್ಟಣದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ ‘ಶ್ರೇಷ್ಠ ಕೃಷಿಕ ಪ್ರಶಸ್ತಿ’ ನೀಡಿ ಗೌರವಿಸಿದರು. ಜಿ.ಪಂ. ಅಧ್ಯಕ್ಷ ಏಕನಾಥ ಬಾನುವಳ್ಳಿ ಇದ್ದಾರೆ    

ಹಿರೇಕೆರೂರು (ಹಾವೇರಿ): ‘ಕೃಷಿಯಲ್ಲಿ ಆಧುನಿಕತಂತ್ರಜ್ಞಾನ ಬಳಸಿಕೊಂಡು ರೈತರು ಆರ್ಥಿಕವಾಗಿ ಸದೃಢರಾಗಬೇಕು. ಪ್ರತಿ ಹಳ್ಳಿಗಳಲ್ಲಿ 20 ಜನರ ಸಂಘ ಮಾಡಿಕೊಂಡು ₹2 ಲಕ್ಷ ಹೂಡಿಕೆ ಮಾಡಿದರೆ, ಸರ್ಕಾರದಿಂದ ಸಂಘಕ್ಕೆ ₹8 ಲಕ್ಷ ನೀಡಲಾಗುವುದು’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಹಿರೇಕೆರೂರು ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾದ ರೈತ ಸಂಪರ್ಕ ಕೇಂದ್ರ ಕಟ್ಟಡದ ಉದ್ಘಾಟನೆ, ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣ ಸೇವಾ ಕೇಂದ್ರ (ಕೃಷಿ ಯಂತ್ರಧಾರೆ) ಉದ್ಘಾಟನೆ ಹಾಗೂ ಕೃಷಿ ಯಂತ್ರೋಪಕರಣಗಳು ಮತ್ತು ತುಂತುರು ನೀರಾವರಿ ಘಟಕಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಲಾಕ್‍ಡೌನ್ ಸಮಯದಲ್ಲಿ ರೈತರಿಗೆ ಉಂಟಾದ ಸಮಸ್ಯೆಯನ್ನು ನಿವಾರಿಸಲು ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಕೃಷಿ ಅಧಿಕಾರಿಗಳು ಹಾಗೂ ರೈತರೊಂದಿಗೆ ಸಭೆ ನಡೆಸಿ, ಕೃಷಿಕರ ದೈನಂದಿನ ಕೃಷಿ ಚಟುವಟಿಕೆಗೆ ತೊಂದರೆಯಾಗದಂತೆ ಬಿತ್ತನೆ ಬೀಜ, ಗೊಬ್ಬರ, ಕೃಷಿ ಪರಿಕರ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಲು ಸೂಚಿಸಲಾಯಿತು. ಸಕಾಲಕ್ಕೆ ಕೃಷಿಗೆ ಅಗತ್ಯವಾದ ಬಿತ್ತನೆ ಬೀಜ ಹಾಗೂ ಗೊಬ್ಬರ ದೊರೆತ ಕಾರಣ ಈ ವರ್ಷ ಶೇ 104ರಷ್ಟು ಬಿತ್ತನೆಯಾಗಿದೆ’ ಎಂದು ಹೇಳಿದರು.

ADVERTISEMENT

ಕೃಷಿ ಯಂತ್ರೋಪಕರಣ ಕೇಂದ್ರ: ಕೊರೊನಾ ಲಾಕ್‍ಡೌನ್‍ನಿಂದಾಗಿ ರಾಜ್ಯದಲ್ಲಿ ದೊಡ್ಡ ದೊಡ್ಡ ಉದ್ಯಮಗಳು, ಹೋಟೆಲ್, ಗಾರ್ಮೆಂಟ್ಸ್ ಬಂದಾಗಿವೆ. ಆದರೆ ಎಂತಹ ಸಂಕಷ್ಟ ಬಂದರೂ ಉಳಿದಿದ್ದು ಕೃಷಿ ಮಾತ್ರ. ಸರ್ಕಾರದ ವತಿಯಿಂದ ರೈತರಿಗೆ ಬಾಡಿಗೆ ಆಧಾರದ ಕೃಷಿ ಯಂತ್ರೋಪಕರಣಗಳನ್ನು ನೀಡಲಾಗುತ್ತಿದೆ. ತಾಲ್ಲೂಕಿನಲ್ಲಿ ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣ ಕೇಂದ್ರವನ್ನು ತೆರೆಯಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಮಾತನಾಡಿ, ‘ಆಧುನಿಕ ಜಗತ್ತಿನ ಕಡೆ ಹೋಗುತ್ತಿದ್ದೇವೆ. ಕೃಷಿಯಲ್ಲಿ ಅನೇಕ ಅಭಿವೃದ್ಧಿಗಳನ್ನು ಕಾಣಲಾಗುತ್ತಿದೆ. ರೈತರು ಬಾಡಿಗೆ ಆಧಾರಿತ ಯಂತ್ರೋಪಕರಣಗಳ ಸದುಪಯೋಗ ಪಡೆದುಕೊಂಡು ಕೃಷಿಯಲ್ಲಿ ಅಧಿಕ ಇಳುವರಿ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಜಿ.ಪಂ.ಅಧ್ಯಕ್ಷ ಏಕನಾಥ ಬಾನುವಳ್ಳಿ, ಟಿ.ಎ.ಪಿ.ಸಿ. ಎಂ.ಎಸ್.ಅಧ್ಯಕ್ಷ ಎಸ್.ಎಸ್.ಪಾಟೀಲ ಇದ್ದರು.ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಣೆಬೆನ್ನೂರು ಉಪ ಕೃಷಿ ನಿರ್ದೇಶಕಿ ಸ್ಫೂರ್ತಿ ಜಿ.ಎಸ್. ಸ್ವಾಗತಿಸಿದರು.

ಸಾಧಕರಿಗೆ ‘ಶ್ರೇಷ್ಠ ಕೃಷಿಕ ಪ್ರಶಸ್ತಿ’
ಸಮಗ್ರ ಕೃಷಿ ಪದ್ಧತಿ, ಸುಧಾರಿತ ಕೃಷಿ ಯಂತ್ರೋಕರಣ ಬಳಕೆಗಾಗಿ ದೊಡ್ಡಗುಬ್ಬಿ ಗ್ರಾಮದ ಶಂಕರಗೌಡ ಚನ್ನಗೌಡ್ರ ಹಾಗೂ ತೋಟಗಾರಿಕೆ ಸಾಧನೆಗಾಗಿ ಮಾವಿನತೋಪ ಗ್ರಾಮದ ಹಿರೇಗೌಡ ಬಸನಗೌಡ್ರ ಅವರಿಗೆ ‘ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು.

ತಾಲ್ಲೂಕು ಮಟ್ಟದ ವಿಜೇತರು:
ತೋಟಗಾರಿಕೆ, ನೀರಿನ ಸಮರ್ಪಕ ಬಳಕೆ, ನರ್ಸರಿ ನಿರ್ವಹಣೆಗಾಗಿ ವಡೆಯನಪುರದ ರುದ್ರಪ್ಪ ಅಂದಾನಪ್ಪ ಮಳವಳ್ಳಿ, ಕೃಷಿ, ಮೀನುಗಾರಿಕೆಗೆ ಆರೀಕಟ್ಟಿ ಗ್ರಾಮದ ರಾಜಪ್ಪ ಮಳಗೌಡ್ರ, ಸಾವಯವ ಕೃಷಿ, ನೀರಿನ ಸಮರ್ಪಕ ಬಳಕೆಗಾಗಿ ನಿಡನೇಗಿಲು ಗ್ರಾಮದ ಮಹಾದೇವಗೌಡ ಈಶ್ವರಗೌಡ ಪಾಟೀಲ, ಹೈನುಗಾರಿಕೆ, ತೋಟಗಾರಿಕೆ, ಜೇನು ಕೃಷಿ, ಕೃಷಿ ಯಂತ್ರೋಪಕರಣ ಬಳಕೆಗಾಗಿ ಚಿಕ್ಕಯಡಚಿ ಗ್ರಾಮದ ಶಿವಕುಮಾರ ಕರೇಗೌಡ್ರ ಸಣ್ಣಗೌಡ್ರ ಹಾಗೂ ಸಾವಯವ ಕೃಷಿ, ನೀರಿನ ಸಮರ್ಪಕ ಬಳಕೆಗಾಗಿ ಅಬಲೂರ ಗ್ರಾಮದ ಕರೇಗೌಡ್ರ ಮುದಗೋಳ ಅವರಿಗೆ ತಾಲೂಕಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.