ADVERTISEMENT

ಹಿರೇಕೆರೂರು: ರೈತನಿಗೆ ಸಿಹಿ ತಂದ ಹಾಗಲಕಾಯಿ

ಟೊಮೆಟೊ ಕೈಕೊಟ್ಟರೂ ಕೈಹಿಡಿಯಿತು ಹಾಗಲ

ಶಂಕರ ಕೊಪ್ಪದ
Published 19 ಜುಲೈ 2024, 4:11 IST
Last Updated 19 ಜುಲೈ 2024, 4:11 IST
ಹಿರೇಕೆರೂರು ತಾಲ್ಲೂಕಿನ ಅಬಲೂರು ಗ್ರಾಮದ ಶಾಂತಯ್ಯ ಈರಮ್ಮನವರ ಅವರು ತಾವು ಬೆಳೆದ ಹಾಗಲಕಾಯಿ ತೋರಿಸಿದರು
ಹಿರೇಕೆರೂರು ತಾಲ್ಲೂಕಿನ ಅಬಲೂರು ಗ್ರಾಮದ ಶಾಂತಯ್ಯ ಈರಮ್ಮನವರ ಅವರು ತಾವು ಬೆಳೆದ ಹಾಗಲಕಾಯಿ ತೋರಿಸಿದರು   

ಹಿರೇಕೆರೂರು: ‘ಒಂದು ಬೆಳೆ ಕೈ ಹಿಡಿಯಲಿಲ್ಲ‘ ಎಂದು ನೊಂದುಕೊಳ್ಳುವ ಬದಲು, ಮತ್ತೊಂದು ಬೆಳೆ ಬೆಳೆದು ಯಶಸ್ವಿಯಾಗಬಹುದು ಎಂಬುದನ್ನು ತಾಲ್ಲೂಕಿನ ಅಬಲೂರು ಗ್ರಾಮದ ರೈತ ಶಾಂತಯ್ಯ ಈರಮ್ಮನವರ ಸಾಧಿಸಿ ತೋರಿಸಿದ್ದಾರೆ.

ಟೊಮೆಟೊ ಬೆಳೆಯಿಂದ ಲಾಭ ಬರಲಿಲ್ಲವೆಂದು ಹಾಗಲಕಾಯಿ ಬೆಳೆದಿರುವ ಶಾಂತಯ್ಯ, ಉತ್ತಮ ಆದಾಯ ಪಡೆಯುತ್ತಿದ್ದಾರೆ. ಇದರ ಜೊತೆಯಲ್ಲೇ ಬದನೆಕಾಯಿ ಸಹ ಬೆಳೆಯುತ್ತಿದ್ದು, ಫಸಲು ಬರುವುದು ಬಾಕಿ ಇದೆ.

ಶಾಂತಯ್ಯ ತಮ್ಮ 1 ಎಕರೆ ಪ್ರದೇಶದಲ್ಲಿ ಹಾಗಲಕಾಯಿ ಬೆಳೆ ಬೆಳೆಯುತ್ತಿದ್ದಾರೆ. ಉತ್ತಮ ರೀತಿಯಲ್ಲಿ ಫಸಲು ಬರುತ್ತಿದೆ. ಇದರಿಂದ ಹೆಚ್ಚಿನ ಲಾಭ ಕಂಡುಕೊಂಡಿದ್ದಾರೆ. ಸ್ವಂತ 2 ಎಕರೆ 30 ಗುಂಟೆ ಜಮೀನಿನಲ್ಲಿ ಅಡಿಕೆ ಹಾಗೂ ಲಾವಣಿ ಮಾಡಿರುವ ಜಮೀನುಗಳಲ್ಲಿ ಅಡಿಕೆ, ಮೆಕ್ಕೆಜೋಳ, ಬದನೆ ಬೆಳೆಯುತ್ತಿದ್ದಾರೆ.

ADVERTISEMENT

‘ಹಾಗಲಕಾಯಿ ಬೆಳೆಯಲು ₹ 40 ಸಾವಿರ ಖರ್ಚು ಮಾಡಲಾಗಿದೆ. ಈಗಾಗಲೇ 65 ಕ್ವಿಂಟಲ್ ಹಾಗಲಕಾಯಿ ಕಟಾವು ಮಾಡಿ ಮಾರಾಟ ಮಾಡಲಾಗಿದ್ದು, ಇದರಿಂದ ಸುಮಾರು ₹‌ 95 ಸಾವಿರ ಲಾಭ ಬಂದಿದೆ. 75 ದಿನಗಳಲ್ಲಿ ಬೆಳೆಯುವ ಬೆಳೆ ಇದಾಗಿದೆ’ ಎಂದು ಶಾಂತಯ್ಯ ಹೇಳುತ್ತಾರೆ.

ಬಿತ್ತನೆ ಪದ್ದತಿ:

ಟ್ರಾಕ್ಟರ್‌ನಿಂದ ಮೊದಲು ಭೂಮಿಯನ್ನು ಸಮ ಮಾಡಿಕೊಂಡು ನಂತರ ಎರಡು ಬಾರಿ ಬಲರಾಮ ರಂಟೆ ಹಾಗೂ ರೂಟ್‌ರ ಹೊಡೆದು ಭೂಮಿ ತೇವಾಂಶ ಕಡಿಮೆ ಆದ ಮೇಲೆ ಬೆಡ್ ಮಾಡಿಕೊಂಡು ಸಗಣೆ ಗೊಬ್ಬರ ಹಾಗೂ ಡಿಎಪಿ ಹಾಕಿ ಪ್ಲ್ಯಾಸ್ಟಿಕ್‌ ಮಲ್ಚಿಂಗ್‌ ಮಾಡಿ ಹೊಲವನ್ನು ಸಸಿ ಬಿತ್ತನೆಗೆ ತಯಾರಿ ಮಾಡಿಕೊಂಡು ನಂತರ ಹಾಗಲಕಾಯಿ ಬೀಜಗಳನ್ನು ನರ್ಸರಿಗೆ ಕೊಟ್ಟು ಸಸಿ ಮಾಡಿಸಿಕೊಂಡು ನಂತರ 6 ಅಡಿ ಅಂತರದಲ್ಲಿ ಸಾಲುಗಳನ್ನು ಮಾಡಿ ಪ್ರತಿ ಮೂರು ಅಡಿಗೊಂದರಂತೆ ಹಾಗಲಕಾಯಿ ಸಸಿಗಳನ್ನು ನೆಟ್ಟು ಸಾಲುಗಳ ಬದುಗಳಲ್ಲಿ ಕಟ್ಟಿಗೆಯ ಗೂಟಗಳನ್ನು ನೆಟ್ಟು ತಂತಿಯಿಂದ ಚಪ್ಪರ ಬಿಗಿದ್ದಾರೆ. ಹಾಗಲ ಬಳ್ಳಿಯನ್ನು ತಂತಿಗೆ ಜೋಡಿಸಿ ಹಬ್ಬಿಸುತ್ತಾರೆ.

ಹಾಗಲಕಾಯಿ ಸಸಿ ನೆಟ್ಟು 75 ದಿನಕ್ಕೆ ಫಲ ಬರುತ್ತದೆ. 3 ತಿಂಗಳ ಕಾಲ ಕಾಯಿ ಚೆನ್ನಾಗಿ ಬಿಡುತ್ತದೆ. ವಾರಕ್ಕೆರೆಡು ಬಾರಿ ಕೂಲಿ ಕಾರ್ಮಿಕರ ಜೊತೆಗೆ ಕೊಯ್ಲು ಮಾಡಿ ರಾಣೆಬೆನ್ನೂರು ಮಾರುಕಟ್ಟೆಗೆ ಸಾಗಿಸುತ್ತಾರೆ.

ಹಿರೇಕೆರೂರು ತಾಲ್ಲೂಕಿನ ಅಬಲೂರು ಗ್ರಾಮದಲ್ಲಿ ಶಾಂತಯ್ಯ ಈರಮ್ಮನವರ ಅವರ ಹೊಲದಲ್ಲಿ ಬೆಳೆದಿರುವ ಹಾಗಲಕಾಯಿ ಬೆಳೆ

ಸಾವಯವ–ರಾಸಾಯನಿಕ ಗೊಬ್ಬರ ಬಳಕೆ

ಬಿತ್ತನೆಗೆ ಮುನ್ನ ಜಮೀನಿಗೆ ತಿಪ್ಪೆಗೊಬ್ಬರ ಬಳಕೆ ಮಾಡಿಕೊಂಡು ಭೂಮಿಯ ಫಲವತ್ತತೆ ಕಾಪಾಡಿ ಕೃಷಿ ಮಾಡುತ್ತಿದ್ದಾರೆ. ಅವಶ್ಯಕತೆಗೆ ತಕ್ಕಂತೆ ರಾಸಾಯನಿಕ ಗೊಬ್ಬರ ಬಳಕೆ ಮಾಡಲಾಗುತ್ತಿದ್ದು ತರಕಾರಿ ಬೆಳೆಗೆ ಕೀಟಬಾಧೆಗೆ ತುತ್ತಾಗದಂತೆ ಎರಡು ಬಾರಿ ಕೀಟನಾಶಕ ಸಿಂಪಡಿಸುತ್ತಿದ್ದು ಇದರಿಂದ ಇಳುವರಿ ಪ್ರಮಾಣ ಹೆಚ್ಚುತ್ತಿದೆ ಎಂದು ರೈತ ಶಾಂತಯ್ಯ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.