ADVERTISEMENT

ಹಾವೇರಿ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ: ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಕಟ್ಟೀಮನಿ

ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಕಟ್ಟೀಮನಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2022, 14:31 IST
Last Updated 2 ಸೆಪ್ಟೆಂಬರ್ 2022, 14:31 IST
ಮಲ್ಲಿಕಾರ್ಜುನ ಕಟ್ಟೀಮನಿ 
ಮಲ್ಲಿಕಾರ್ಜುನ ಕಟ್ಟೀಮನಿ    

ಹಾವೇರಿ: ‘ಹಾವೇರಿ ವಿಧಾನಸಭಾ ಕ್ಷೇತ್ರದ ಎಲ್ಲ ಗ್ರಾಮಗಳಿಗೆ ಹಾಗೂ ಹಾವೇರಿ ನಗರಕ್ಕೆ ಮೂಲಸೌಕರ್ಯ ಒದಗಿಸುವ ಸಂಕಲ್ಪ ನನ್ನದಾಗಿದೆ. ಹೀಗಾಗಿ 2023ರ ವಿಧಾನಸಭಾ ಚುನಾವಣೆಯಲ್ಲಿ ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ’ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ಮಲ್ಲಿಕಾರ್ಜುನ ಕಟ್ಟೀಮನಿ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದೇನೆ. ಈವರೆಗೆ ಪಕ್ಷ ನೀಡಿದ ಜವಾಬ್ದಾರಿಗಳನ್ನು ನಿರ್ವಹಿಸಿದ್ದು, ಕಳೆದ ಅವಧಿಯಲ್ಲಿ ಜಿಲ್ಲಾ ಎಸ್‍ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದೇನೆ. ವಿವಿಧ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದು, ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧನಾಗಿ ಕಾರ್ಯ ನಿರ್ವಹಿಸಿದ್ದೇನೆ ಎಂದರು.

ಹಾವೇರಿ ಜಿಲ್ಲೆಯಾಗಿ 25 ವರ್ಷ ಕಳೆದರೂ ಜನರ ನಿರೀಕ್ಷಿತ ಮಟ್ಟದಲ್ಲಿ ಮೂಲಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಕನಸು ಹೊತ್ತು ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಕ್ಷೇತ್ರದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದರ ಮೂಲಕ ನಿರುದ್ಯೋಗ ನಿವಾರಣೆ, ಎಲ್ಲ ಗ್ರಾಮ ಹಾಗೂ ನಗರಗಳಿಗೆ ಚರಂಡಿ ವ್ಯವಸ್ಥೆ, ಗುಣಮಟ್ಟದ ರಸ್ತೆ ಅಭಿವೃದ್ಧಿ, ಶುದ್ಧ ಕುಡಿಯುವ ನೀರಿನ ಪೂರೈಕೆ, ಗ್ರಾಮೀಣ ಭಾಗಕ್ಕೆ ಸೂಕ್ತ ಸಾರಿಗೆ ವ್ಯವಸ್ಥೆ, ವಸತಿ ರಹಿತರಿಗೆ ವಸತಿ ಸೌಲಭ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೈಗೊಳ್ಳುವ ಕನಸು ಹೊಂದಿದ್ದು, ಪಕ್ಷವು ನನಗೆ ಟಿಕೆಟ್ ನೀಡುವ ವಿಶ್ವಾಸವಿದೆ ಎಂದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ಯಲ್ಲಪ್ಪ ಕೋಣನತಂಬಗಿ, ಪಕ್ಕಿರೇಶ ಕಟ್ಟಿಮನಿ, ಸಂಜೀವ ಮಾರನಬೀಡ, ಸಂತೋಷ ಭಜಂತ್ರಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.