ADVERTISEMENT

ಕೃಷಿ ಕಾಯ್ದೆಗಳನ್ನು ಹಿಂಪಡೆಯದಿದ್ದರೆ ಬಿಜೆಪಿಗೆ ರೈತರ ಮತವಿಲ್ಲ: ಕೋಡಿಹಳ್ಳಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2023, 12:43 IST
Last Updated 24 ಮಾರ್ಚ್ 2023, 12:43 IST
   

ಹಾವೇರಿ: ‘ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್‌ ಪಡೆದ ರೀತಿಯಲ್ಲೇ ರಾಜ್ಯ ಸರ್ಕಾರವೂ ಕೂಡಲೇ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಬಿಜೆಪಿಗೆ ರೈತಸಂಘದಿಂದ ಮತ ಸಿಗುವುದಿಲ್ಲ’ ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕೃಷಿ ಕಾಯ್ದೆ ವಾಪಸ್‌ ಪಡೆಯದಿದ್ದರೆ, ಈ ಚುನಾವಣೆಯಲ್ಲಿ ನಾವು ತಕ್ಕ ಉತ್ತರ ಕೊಡುತ್ತೇವೆ. ಬಿಜೆಪಿ ದೊಡ್ಡ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.

ಸರ್ಕಾರ ಮತ್ತು ಮುಖ್ಯಮಂತ್ರಿಗೆ ನೀಡಿದ್ದ ಗಡುವು ಮುಕ್ತಾಯವಾಗಿದೆ. ಬೆಳಗಾವಿ ಮತ್ತು ಬೆಂಗಳೂರು ಅಧಿವೇಶನಗಳಲ್ಲಿ ನಿರ್ಣಯ ಕೈಗೊಳ್ಳುತ್ತೇವೆ ಎಂದು ಕಾಲಹರಣ ಮಾಡಿದರು. ಈ ಕಾಯ್ದೆ ಹಿಂಪಡೆಯದೇ ಇರುವುದು ಬಿಜೆಪಿಯ ಅಜೆಂಡಾ ಇರುವಂತೆ ಕಾಣುತ್ತಿದೆ. ಇಲ್ಲದಿದ್ದರೆ ಸರ್ಕಾರದ ಮೇಲೆ ಯಾವುದೋ ಒತ್ತಡ ಇರಬಹುದು ಎಂಬ ಅನುಮಾನವಿದೆ ಎಂದರು.

ADVERTISEMENT

‘ಬಿಜೆಪಿಯು ರೈತರ ಪರವಾಗಿದೆ’ ಎಂದು ಹೇಳುವ ಬಿ.ಎಸ್‌.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಶುದ್ಧ ಸುಳ್ಳು. ಅಪಾಯಕಾರಿ ಕಾನೂನು ಹೇರುವ ಮೂಲಕ ಕೃಷಿ ಭೂಮಿ ರೈತರ ಕೈತಪ್ಪುತ್ತಿದೆ. ಶೇ 90ರಷ್ಟು ಆದಾಯದಿಂದ ವಂಚಿತವಾದ ಎಪಿಎಂಸಿಗಳು ಅಸ್ತಿತ್ವ ಕಳೆದುಕೊಳ್ಳುವ ಹಂತದಲ್ಲಿವೆ. ಕರ್ನಾಟಕದಲ್ಲಿ ಕೃಷಿ ಕಾಯ್ದೆಗಳನ್ನು ‘ಪೈಲಟ್‌ ಯೋಜನೆ’ಯಂತೆ ಅನುಷ್ಠಾನಗೊಳಿಸಿ, 2024ರ ನಂತರ ದೇಶದ ಎಲ್ಲ ರಾಜ್ಯಗಳಿಗೂ ವಿಸ್ತರಿಸುವ ಹುನ್ನಾರ ಕಾಣುತ್ತಿದೆ’ ಎಂದು ಆರೋಪಿಸಿದರು.

ರೈತ ಸಂಘದ ಮುಖಂಡರಾದ ಭಕ್ತರಹಳ್ಳಿ ಬೈರೇಗೌಡ, ಹನುಮಂತಪ್ಪ ಹುಚ್ಚಣ್ಣನವರ, ಭುವನೇಶ್ವರ ಶಿಡ್ಲಾಪುರ, ರವೀಂದ್ರಗೌಡ ಪಾಟೀಲ, ಹನುಮಂತಪ್ಪ ಕಬ್ಬಾರ ಇದ್ದರು.

ಚುನಾವಣೆಯಲ್ಲಿ ಸ್ಪರ್ಧಿಸುವೆ: ಕೋಡಿಹಳ್ಳಿ

ವಿಧಾನಸಭೆ ಚುನಾವಣೆಯಲ್ಲಿ ರೈತ ಸಂಘದಿಂದ ಸ್ಪರ್ಧಿಸುವುದಾಗಿ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸ್ಪಷ್ಟಪಡಿಸಿದರು.

ಎಲ್ಲಿಂದ ಸ್ಪರ್ಧಿಸಬೇಕು ಎಂಬ ಬಗ್ಗೆ ನಿರ್ಧರಿಸಿಲ್ಲ. ಶೀಘ್ರದಲ್ಲಿ ರೈತ ಸಂಘದ ಸಭೆ ನಡೆಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.