ADVERTISEMENT

ಹಾವೇರಿ: ಜಾತ್ರಾ ಬಸ್‌ಗಳಿಂದ ಸಾರಿಗೆ ಸಂಸ್ಥೆಗೆ ಬಂಪರ್‌ ಆದಾಯ

ಮೈಲಾರ ಮತ್ತು ದೇವರಗುಡ್ಡ ಜಾತ್ರೆಯಿಂದ ಹಾವೇರಿ ಸಾರಿಗೆ ಸಂಸ್ಥೆಗೆ ₹62 ಲಕ್ಷ ಆದಾಯ

ಸಿದ್ದು ಆರ್.ಜಿ.ಹಳ್ಳಿ
Published 12 ಫೆಬ್ರುವರಿ 2023, 5:12 IST
Last Updated 12 ಫೆಬ್ರುವರಿ 2023, 5:12 IST
ಮೈಲಾರ ಜಾತ್ರೆಗೆ ನಿಯೋಜಿಸಿದ್ದ ವಿಶೇಷ ಬಸ್‌ಗಳ ಕಾರ್ಯಾಚರಣೆ ದೃಶ್ಯ
ಮೈಲಾರ ಜಾತ್ರೆಗೆ ನಿಯೋಜಿಸಿದ್ದ ವಿಶೇಷ ಬಸ್‌ಗಳ ಕಾರ್ಯಾಚರಣೆ ದೃಶ್ಯ   

ಹಾವೇರಿ: ಮಧ್ಯ ಕರ್ನಾಟಕದ ಪ್ರಮುಖ ಜಾತ್ರೆಗಳಾದ ಮೈಲಾರ ಮತ್ತು ದೇವರಗುಡ್ಡ ಜಾತ್ರೆಗಳಿಂದ ಈ ಬಾರಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗ ಬರೋಬ್ಬರಿ ₹62 ಲಕ್ಷ ಆದಾಯ ಗಳಿಸಿದೆ.

ಈ ಎರಡೂ ಜಾತ್ರೆಗಳಿಂದ 2018–19ರಲ್ಲಿ ₹46.69 ಲಕ್ಷ, 2019–20ರಲ್ಲಿ ₹41.55 ಲಕ್ಷ ಆದಾಯವನ್ನು ಹಾವೇರಿ ವಿಭಾಗ ಗಳಿಸಿತ್ತು. ನಂತರ ಎರಡು ವರ್ಷ ಕೋವಿಡ್‌ ಕಾರಣದಿಂದ ಆದಾಯ ಸಿಕ್ಕಿರಲಿಲ್ಲ. ಈ ಬಾರಿ ₹62 ಲಕ್ಷ ಗಳಿಸುವ ಮೂಲಕ ದಾಖಲೆ ಬರೆದಿದೆ.

ರಾಣೆಬೆನ್ನೂರು ತಾಲ್ಲೂಕಿನ ಸುಕ್ಷೇತ್ರ ದೇವರಗುಡ್ಡದ ಮಾಲತೇಶ ಸ್ವಾಮಿ ಹಾಗೂ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮೈಲಾರದ ಮೈಲಾರಲಿಂಗೇಶ್ವರ ಸ್ವಾಮಿ ಜಾತ್ರೆಗಳಿಗೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ನಾಡಿನ ಮೂಲೆ–ಮೂಲೆಗಳಿಂದ ಬಂದು ದೇವರ ದರ್ಶನ ಪಡೆಯುತ್ತಾರೆ. ಜಾತ್ರೆಗಳಿಗೆ ಹೋಗಿ ಬರಲು ಜನರಿಗೆ ಅನುಕೂಲವಾಗಲೆಂದು ಸಾರಿಗೆ ಸಂಸ್ಥೆ ‘ಜಾತ್ರಾ ವಿಶೇಷ ಬಸ್‌’ಗಳ ಸೌಲಭ್ಯ ಕಲ್ಪಿಸಿತ್ತು.

ADVERTISEMENT

135 ಜಾತ್ರಾ ಬಸ್‌ಗಳು:

ಫೆ.4ರಿಂದ ಫೆ.8ರವರೆಗೆ ಒಟ್ಟ 135 ಸಾರಿಗೆ ಬಸ್‌ಗಳು ಕಾರ್ಯಾಚರಣೆ ನಡೆಸಿದ್ದವು. ಹಾವೇರಿ ಘಟಕದಿಂದ 35, ಹಾನಗಲ್‌ ಘಟಕದಿಂದ 18, ಸವಣೂರು ಘಟಕದಿಂದ 12, ರಾಣೆಬೆನ್ನೂರು ಘಟಕದಿಂದ 35, ಹಿರೇಕೆರೂರು ಘಟಕದಿಂದ 20, ಬ್ಯಾಡಗಿ ಘಟಕದಿಂದ 15 ಬಸ್‌ಗಳು ಎರಡೂ ಜಾತ್ರೆಗಳಿಗೆ ಸಂಚರಿಸಿದ್ದವು. ‌

ಫೆ.5ರಂದು ನಡೆದ ಭರತ ಹುಣ್ಣಿಮೆಗೆ ಹಾಗೂ ಫೆ.7ರಂದು ಮೈಲಾರದಲ್ಲಿ ನಡೆದ ಕಾರ್ಣಿಕೋತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಿದ್ದರು. ಈ ಎರಡೂ ದಿನ ಸಾರಿಗೆ ಸಂಸ್ಥೆಗೆ ಬಂಪರ್‌ ಆದಾಯ ದೊರೆತಿದೆ. ಜನವರಿ ತಿಂಗಳಲ್ಲಿ ನಡೆದ ಕೆಂಗೊಂಡ ಜಾತ್ರೆಯಿಂದ ₹4.29 ಲಕ್ಷ, ಹಾವನೂರು ದ್ಯಾಮವ್ವ ಜಾತ್ರೆಯಿಂದ ₹7.63 ಲಕ್ಷ ಆದಾಯ ಸಿಕ್ಕಿದೆ.

ಸಿಬ್ಬಂದಿಗೆ ಬಹುಮಾನ:

‘ಸಾರಿಗೆ ಸಿಬ್ಬಂದಿಗೆ ನಿರ್ದಿಷ್ಟ ಜವಾಬ್ದಾರಿಯನ್ನು ನೀಡಿ, ಆಯಾ ಕಟ್ಟಿನ ಸ್ಥಳಗಳಿಗೆ ಮತ್ತು ಬಸ್‌ಗಳಿಗೆ ನಿಯೋಜನೆ ಮಾಡಲಾಗಿತ್ತು. ಬಸ್‌ಗಳು ಕೆಟ್ಟು ಹೋದರೆ ತಾಂತ್ರಿಕ ಸಿಬ್ಬಂದಿಯನ್ನು ಅಣಿ ಮಾಡಲಾಗಿತ್ತು. ಬಸ್‌ಗಳ ಆಗಮನ ಮತ್ತು ನಿರ್ಗಮನದ ಮೇಲೆ ನಿಗಾ ವಹಿಸಲಾಗಿತ್ತು. ಹೆಚ್ಚು ಸರತಿಗಳನ್ನು ಕಾರ್ಯಾಚರಣೆಗೊಳಿಸಿ, ಹೆಚ್ಚು ಆದಾಯ ತಂದುಕೊಟ್ಟ ಚಾಲಕ ಮತ್ತು ನಿರ್ವಾಹಕರಿಗೆ ನಗದು ರೂಪದ ಬಹುಮಾನವನ್ನು ನೀಡಲಾಗಿದೆ’ ಎಂದು ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಪಾಟೀಲ ತಿಳಿಸಿದರು.

ಸಾಹಿತ್ಯ ಸಮ್ಮೇಳನದಿಂದ ₹50 ಲಕ್ಷ ಆದಾಯ

ಹಾವೇರಿ ನಗರದಲ್ಲಿ ಜನವರಿ 6ರಿಂದ 8ರವರೆಗೆ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ವಿಶೇಷ ಬಸ್‌ ಕಾರ್ಯಾಚರಣೆಯಿಂದ ವಾ.ಕ.ರ.ಸಾ. ಸಂಸ್ಥೆಯ ಹಾವೇರಿ ವಿಭಾಗಕ್ಕೆ ₹49.25 ಲಕ್ಷ ಆದಾಯ ಸಿಕ್ಕಿದೆ.

ಸಮ್ಮೇಳನಕ್ಕೆ ನಿಯೋಜಿಸಿದ 147 ಬಸ್‌ಗಳಿಂದ ಹುಬ್ಬಳ್ಳಿ, ದಾವಣಗೆರೆ ಹಾಗೂ ಜಿಲ್ಲೆಯಾದ್ಯಂತ 1057 ಟ್ರಿಪ್‌ಗಳನ್ನು ಮಾಡಲಾಗಿತ್ತು. ಪ್ರಯಾಣಿಕರ ಟಿಕೆಟ್‌ಗಳಿಂದ ₹ 31.40 ಲಕ್ಷ ಹಾಗೂ ಒಪ್ಪಂದದ ಮೇರೆಗೆ ಬಸ್‌ಗಳಿಂದ ₹ 17 ಲಕ್ಷ ಆದಾಯ ಸಿಕ್ಕಿದೆ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

***

ಜಾತ್ರೆಗಳ ಸಂದರ್ಭ ಸಾರಿಗೆ ಸಂಸ್ಥೆಯ ಸಿಬ್ಬಂದಿ ಹಗಲಿರುಳು ಕಷ್ಟಪಟ್ಟು ಶ್ರಮಿಸಿದ ಕಾರಣ ಹಾವೇರಿ ವಿಭಾಗಕ್ಕೆ ಉತ್ತಮ ಆದಾಯ ಸಿಕ್ಕಿದೆ
– ಅಶೋಕ ಪಾಟೀಲ, ಹಾವೇರಿ ವಿಭಾಗೀಯ ಸಂಚಾರ ಅಧಿಕಾರಿ, ವಾ.ಕ.ರ.ಸಾ.ಸಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.