
ಸವಣೂರು: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕೆಆರ್‌ಎಸ್ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ತಹಶೀಲ್ದಾರ್ ರವಿಕುಮಾರ ಕೊರವರ ಮೂಲಕ ಜಿಲ್ಲಾ ಉಸ್ತುವಾರಿ ಹಾಗೂ ಕರ್ನಾಟಕ ಕೃಷಿ ಮಾರುಕಟ್ಟೆ ಸಚಿವರಿಗೆ ಮನವಿಯನ್ನು ಸಲ್ಲಿಸಿದರು.
ರೈತರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಮೆಕ್ಕೆಜೋಳ ಬೆಳೆಗೆ ₹ 2400 ಹಾಗೂ ಪ್ರೋತ್ಸಾಹ ಧನವಾಗಿ ₹ 600 ನೀಡಬೇಕು. ವ್ಯಾಪಾರಸ್ಥರು ತೂಕ ಮಾಪನದಲ್ಲಿ ಸುಮಾರು ವರ್ಷಗಳಿಂದ ಪ್ರತಿ ಕ್ವಿಂಟಲ್‍ಗೆ 2 ಕೆ.ಜಿ ಹೆಚ್ಚುವರಿ ಪಡೆಯುತ್ತಿರುವುದನ್ನು ತಪ್ಪಿಸಬೇಕು. ಸರ್ಕಾರ ಸಿರಿಧಾನ್ಯಗಳಾದ ಸಾವಿ, ನವಣಿ, ರಾಗಿ, ಊದಲು, ಕೊರಲು, ಜೋಳ ಸೇರಿದಂತೆ ಮುಂದಾದ ಸಿರಿಧಾನ್ಯಗಳನ್ನು ಸರ್ಕಾರದಿಂದ ಬೆಂಬಲ ಬೆಲೆಯಾಗಿ ಪ್ರತಿ ಕ್ವಿಂಟಲ್‍ಗೆ ₹ 5ಸಾವಿರ ಬೆಂಬಲ ಬೆಲೆ ಘೋಷಣೆ ಮಾಡಿ ಸವಣೂರು ಎಪಿಎಂಸಿ ಪ್ರಾಂಗಣದಲ್ಲಿ ಖರೀದಿ ಕೇಂದ್ರವನ್ನು ತೆರೆದು ರೈತರಿಗೆ ಅನುಕೂಲ ಕಲ್ಪಿಸಬೇಕು.
ಸವಣೂರು ತಾಲ್ಲೂಕಿನಾದ್ಯಂತ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿ ಬೆಳೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು ಅಧಿಕಾರಿಗಳು ಅಲ್ಪ ಪ್ರಮಾಣದಲ್ಲಿ ಹಾನಿಗೊಳಗಾಗಿದೆ ಎಂದು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಅಧಿಕಾರಿಗಳ ಮಾಹಿತಿಯನ್ನು ತಳ್ಳಿಹಾಕಿ ಬೆಳೆಹಾನಿಯಾಗಿ ರೈತರು ಸಂಕಷ್ಟದಲ್ಲಿ ಸಿಲುಕಿರುವುದರಿಂದ ಸರ್ಕಾರ ನೆರವಿಗೆ ಮುಂದಾಗಿ ಬೆಳೆಹಾನಿ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ರೈತ ಮುಖಂಡರಾದ ಎಂ.ಡಿ.ಕಾಲೇಬಾಗ, ಚನ್ನಪ್ಪ ಮರಡೂರ, ಶಿವಾನಂದ ಕರಿಗಾರ, ನಿರುಪಾದಿ ಗೋಮರ್ಸಿ, ಎನ್.ಎಸ್.ದುಂಡಸಿ, ತಿಮ್ಮಣ್ಣ ಸವಣೂರು, ರಾಮಣ್ಣ ಅಗಸರ, ಶೇಖಪ್ಪ ಲಮಾಣಿ, ಯಲ್ಲಪ್ಪ ಹಣಗಿ, ಎಂ.ಬಿ.ಹುಲಗೂರ, ಪರಪ್ಪ ಕಾರಡಗಿ, ಮಾರುತಿ ಮೈದೂರ, ನಿಂಗಮ್ಮ ಸವಣೂರು, ಹೊನ್ನಮ್ಮ ಬರದೂರ, ಧರ್ಮರಾಜ, ಕರಬಸಪ್ಪ ಬೆಂಗಳೂರ, ಲಕ್ಷ್ಮೀ ಚಿಕ್ಕನಗೌಡ್ರ, ಆರ್.ಎಸ್.ಭರಮಗೌಡ್ರ ಸೇರಿದಂತೆ ತಾಲ್ಲೂಕಿನ ರೈತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.