ಬ್ಯಾಡಗಿ: ತಾಲ್ಲೂಕಿನಲ್ಲಿ ಮೇ ತಿಂಗಳಲ್ಲಿ ಉತ್ತಮ ಮಳೆ ಸುರಿದಿದ್ದು, ಮಲೆನಾಡ ಸೆರಗಿನ ಶಿಡೇನೂರ, ತಡಸ, ಮುತ್ತೂರು, ಹೆಡಿಗ್ಗೊಂಡ, ಕಾಗಿನೆಲೆ, ಹಿರೇಹಳ್ಳಿ, ಚಿಕ್ಕಬಾಸೂರ ಮುಂತಾದೆಡೆ ಹೊಲಗಳನ್ನು ಬಿತ್ತನೆಗೆ ಸಿದ್ಧಗೊಳಿಸಲಾಗುತ್ತಿದೆ.
ತಾಲ್ಲೂಕಿನಲ್ಲಿ ಈವರೆಗೆ 12.4 ಸೆಂ.ಮೀ ಮಳೆಯಾಗಿದ್ದು, ವಾಡಿಕೆಗಿಂತ (4.7 ಸೆಂ.ಮೀ) ಶೇ 164ರಷ್ಟು ಹೆಚ್ಚು ಸುರಿದಿದೆ. ಒಟ್ಟು 29,467 ಹೆಕ್ಟೇರ್‌ನಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಗುರಿ ಹೊಂದಲಾಗಿದೆ.
ಬಿತ್ತನೆ ಬೀಜ ವಿತರಣೆ: ಬ್ಯಾಡಗಿ ಮತ್ತು ಕಾಗಿನೆಲೆ ರೈತ ಸಂಪರ್ಕ ಕೇಂದ್ರಗಳ ಜೊತೆಗೆ ಮೋಟೆಬೆನ್ನೂರು ಮತ್ತು ಚಿಕ್ಕಬಾಸೂರ ಗ್ರಾಮದಲ್ಲಿ ಹೆಚ್ಚುವರಿಯಾಗಿ ಬಿತ್ತನೆ ಬೀಜ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ. ನಾಲ್ಕೂ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ರೈತರಿಗೆ ಮಾರಾಟ ಮಾಡಲಾಗುತ್ತಿದೆ. ಗೋವಿನ ಜೋಳ, ಶೇಂಗಾ, ಸೋಯಾಬೀನ್ ಸೇರಿದಂತೆ ಒಟ್ಟು 528 ಕ್ವಿಂಟಲ್ ಬಿತ್ತನೆ ಬೀಜಗಳ ದಾಸ್ತಾನು ಇದೆ ಎಂಬುದಾಗಿ ಕೃಷಿ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.
ರಸಗೊಬ್ಬರ ಕಾರ್ಖಾನೆಗಳಲ್ಲಿ ಡಿಎಪಿ ರಸಗೊಬ್ಬರದ ಉತ್ಪಾದನೆ ಕುಸಿತವಾಗಿದ್ದು, ಪೂರೈಕೆ ನಿಧಾನ ಗತಿಯಲ್ಲಿದೆ. ರೈತರು ಆತಂಕಕ್ಕೆ ಒಳಗಾಗಬಾರದು. ಒಂದೇ ಸಂಸ್ಥೆ ಅಥವಾ ಒಂದೇ ರಸಗೊಬ್ಬರಕ್ಕೆ ಆದ್ಯತೆ ನೀಡದೆ, ಲಭ್ಯವಿರುವ ಗೊಬ್ಬರ ಬಳಸಬೇಕು ಎಂದು ಇಲಾಖೆ ತಿಳಿಸಿದೆ.
‘ಡಿಎಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಗಂಧಕ ಒದಗಿಸುವ 20:20:0:13 ಹಾಗೂ ಪೊಟ್ಯಾಸಿಯಂ ಒದಗಿಸುವ ಇತರೆ ಸಂಯುಕ್ತ ರಸಗೊಬ್ಬರಗಳಾದ 10:26:26, 15:15:15, 17:17:17, 19:19:19, 12:32:16 ರಸಗೊಬ್ಬರಗಳನ್ನು ಬಳಸಬಹುದು’ ಎಂದು ಸಹಾಯಕ ಕೃಷಿ ನಿರ್ದೇಶಕ ಗಣೇಶ ಜೆ. ಕಮ್ಮಾರ ತಿಳಿಸಿದರು.
‘ಪರಿಶೀಲಿಸಿ ಬಿತ್ತನೆ ಮಾಡಿ’
‘ರೈತರು ಬಿತ್ತನೆ ಬೀಜಗಳನ್ನು ಅಧಿಕೃತ ಮಾರಾಟಗಾರರಿಂದ ಖರೀದಿಸಬೇಕು. ಲಾಟ್ ಸಂಖ್ಯೆ ಮಾರಾಟ ದರದ ವಿವರ ಹೊಂದಿರುವ ರಸೀದಿ ಪಡೆಯಬೇಕು. ಬಿತ್ತನೆಗೂ ಮೊದಲು ಅದರ ಮೊಳಕೆಯೊಡೆಯುವಿಕೆ ಪ್ರಮಾಣದ ಗುಣಮಟ್ಟ ಪರೀಕ್ಷಿಸಬೇಕು. ಉತ್ಪಾದನಾ ದಿನಾಂಕ ಮತ್ತು ಬಳಕೆಗೆ ಯೋಗ್ಯ ಅವಧಿ ಪರಿಶೀಲಿಸಬೇಕು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾವೇರಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು. ‘ಹೈದರಾಬಾದ್ ಮೂಲದ ಬೀಜೋತ್ಪಾದಕ ಕಂಪನಿಯು ಡಿಸಿಎಚ್ ಮೆಣಸಿನಕಾಯಿ ಕೋಸಿನ ಕಳಪೆ ಗುಣಮಟ್ದದ ಬಿತ್ತನೆ ಬೀಜ ಮಾರಾಟ ಮಾಡಿದ್ದು ಅದನ್ನು ಬಳಸಿದ ರೈತರು ನಷ್ಟ ಅನುಭವಿಸಿದ್ದಾರೆ. ಹಾಗಾಗಿ ಯೋಗ್ಯ ಬಿತ್ತನೆ ಬೀಜಗಳನ್ನಷ್ಟೇ ಬಳಸಬೇಕು’ ಎಂದು ಹಸಿರು ಸೇನೆ ಬ್ಯಾಡಗಿ ತಾಲ್ಲೂಕು ಘಟಕದ ಅಧ್ಯಕ್ಷ ಗಂಗಣ್ಣ ಎಲಿ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.